‘ಹೆಬ್ಬೆಟ್ ರಾಮಕ್ಕ’ ಚಲನಚಿತ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ

ಈ ಸುದ್ದಿಯನ್ನು ಶೇರ್ ಮಾಡಿ

CM-Film

ಬೆಂಗಳೂರು, ಆ.28- ಸಾಮಾಜಿಕ ಸಮಸ್ಯೆಗಳಂತಹ ಕಥಾ ವಸ್ತು ಇರುವ ಚಲನಚಿತ್ರಗಳು ಹೆಚ್ಚಾಗಿ ನಿರ್ಮಾಣವಾಗಬೇಕು. ಅದು ಜನರಿಗೆ ತಲುಪಬೇಕು. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರಕಾಣಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಭಿಪ್ರಾಯಪಟ್ಟರು. ನಗರದ ಗಾಂಧಿಭವನದಲ್ಲಿ ಹೆಬ್ಬೆಟ್ ರಾಮಕ್ಕ ಚಲನಚಿತ್ರಕ್ಕೆ ಕ್ಲಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ರಾಜಕೀಯದಲ್ಲಿ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಇದೆ. ಶೇ.50ರಷ್ಟು ಜನಸಂಖ್ಯೆ ಇರುವ ಮಹಿಳೆಯರಿಗೆ ಅಷ್ಟೇ ಪ್ರಮಾಣದಲ್ಲಿ ಮೀಸಲಾತಿ ನೀಡಲಾಗಿದ್ದು, ಪಂಚಾಯತ್ ಹಾಗೂ ನಗರಸಭೆಗಳಲ್ಲಿ ಸಮಸ್ಯೆಗಳಲ್ಲಿ ಶೇ.50ರಷ್ಟು ಮೀಸಲಾತಿ ಇದೆ. ಪಂಚಾಯತ್‍ಗಳಿಗೆ ಸದಸ್ಯರಾಗಿ ಆಯ್ಕೆಯಾಗಲು ಯಾವುದೇ ವಿದ್ಯಾರ್ಹತೆ ಬೇಕಿಲ್ಲ. ಶಾಸಕರು, ಸಂಸದರಾಗಲು ವಿದ್ಯಾರ್ಹತೆ ಕಡ್ಡಾಯ ಮಾಡದೇ ಇರುವಾಗ ಪಂಚಾಯ್ತಿ ಸದಸ್ಯರಾಗಲು ವಿದ್ಯಾರ್ಹತೆ ಕಡ್ಡಾಯ ಮಾಡುವ ಅಗತ್ಯವಿಲ್ಲ ಎಂದು ಹೇಳಿದರು.

ದೇಶದಲ್ಲಿ ಯಾವುದೋ ಒಂದು ರಾಜ್ಯ ಮಾತ್ರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸುವವರಿಗೆ ವಿದ್ಯಾರ್ಹತೆ ಕಡ್ಡಾಯ ಮಾಡಿದೆ. ಉಳಿದ ಯಾವ ರಾಜ್ಯಗಳೂ ವಿದ್ಯಾರ್ಹತೆ ಕಡ್ಡಾಯ ಮಾಡಿಲ್ಲ ಎಂದು ತಿಳಿಸಿದರು.  ಹೆಬ್ಬೆಟ್ ರಾಮಕ್ಕ ಚಿತ್ರ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲಲಿದೆ ಎಂಬ ವಿಶ್ವಾಸವಿದೆ. ಅವಿದ್ಯಾವಂತ ಪಂಚಾಯ್ತಿ ಸದಸ್ಯೆ ಯಾವ ರೀತಿ ಸಮಸ್ಯೆಗಳನ್ನು ಎದುರಿಸುತ್ತಾಳೆ, ಜನಪರವಾಗಿ ಯಾವ ರೀತಿ ಕೆಲಸ ಮಾಡುತ್ತಾಳೆ ಎಂಬ ಕಥಾವಸ್ತುವನ್ನು ಚಿತ್ರ ಹೊಂದಿದೆ ಎಂದರು.

ನಿರ್ದೇಶಕ ಎನ್.ಆರ್.ನಂಜುಂಡೇಗೌಡ ಇಂತಹ ಸಾಮಾಜಿಕ ಸಮಸ್ಯೆಗಳ ಕುರಿತು ಚಿತ್ರ ಮಾಡುವುದರಲ್ಲಿ ಹೆಚ್ಚು ಅನುಭವ ಹೊಂದಿದ್ದಾರೆ. ಚಿತ್ರದ ನಾಯಕನ ಪಾತ್ರದಲ್ಲಿ ದೇವರಾಜ್, ನಾಯಕಿ ತಾರಾ ಅನುರಾಧ ಅವರು ಕಾಣಿಸಿಕೊಂಡಿದ್ದು, ಅವರು ಚಿತ್ರರಂಗದಲ್ಲಿ ಹೆಚ್ಚು ಅನುಭವ ಹೊಂದಿದ್ದಾರೆ.
ಇವರು ನಟಿಸಿದ ಹಲವಾರು ಚಿತ್ರಗಳು ಯಶಸ್ವಿಯಾಗಿದ್ದು, ಗಲ್ಲಪೆಟ್ಟಿಗೆಯಲ್ಲಿ ದುಡ್ಡು ಮಾಡಿದೆ. ಅದೇ ರೀತಿ ಹೆಬ್ಬೆಟ್ಟು ರಾಮಕ್ಕ ಕೂಡ ಯಶಸ್ವಿಯಾಗಲಿ ಎಂದು ಹಾರೈಸಿದರು.

ಜನಪ್ರತಿನಿಧಿಗಳಿಗೆ ವೋಟು ಹಾಕಿ ಅಧಿಕಾರ ನೀಡುತ್ತಾರೆ. ಅದನ್ನು ಯಾವ ರೀತಿ ಬಳಸಿಕೊಂಡು ಗ್ರಾಮವನ್ನು ಅಭಿವೃದ್ಧಿ ಪಡಿಸಬೇಕು, ಪ್ರಾಮಾಣಿಕವಾಗಿ ಕೆಲಸ ಮಾಡಬೇಕು ಎಂಬುವುದನ್ನು ತೋರಿಸಲಾಗಿದೆ. ಕನ್ನಡ ಚಲನಚಿತ್ರರಂಗ ಅತ್ಯಂತ ಪ್ರಭಾವಿ ಮಾಧ್ಯಮ. ಸಾಮಾಜಿಕ ಸಮಸ್ಯೆಗಳಿಗೆ ಹೆಚ್ಚು ಬೆಳಕು ಚೆಲ್ಲಬೇಕು. ಅಂತಹ ಚಿತ್ರವನ್ನು ಜನರು ಹೆಚ್ಚು ನೋಡಬೇಕು. ಇದರಿಂದ ನಿರ್ಮಾಪಕರಿಗೂ ಸಹ ಲಾಭವಾಗಬೇಕೆಂದು ಆಶಿಸಿದರು.
ಲೋಕೋಪಯೋಗಿ ಸಚಿವ ಎಚ್.ಸಿ.ಮಹದೇವಪ್ಪ, ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, ನಿರ್ಮಾಪಕ ಎಸ್.ಎ.ಪುಟ್ಟರಾಜು, ನಿರ್ದೇಶಕ ಎನ್.ಆರ್.ನಂಜುಂಡೇಗೌಡ, ನಟ ದೇವರಾಜ್, ನಟಿ ತಾರಾ ಅನುರಾಧಾ ಮತ್ತಿತರರಿದ್ದರು.

Facebook Comments

Sri Raghav

Admin