ಅಮಿತ್ ಶಾ ನೀಡಿದ ‘ಟಾನಿಕ್’ನಿಂದ ಮೈಕೊಡವಿ ಎದ್ದು ನಿಂತ ಬಿಜೆಪಿ ನಾಯಕರು

ಈ ಸುದ್ದಿಯನ್ನು ಶೇರ್ ಮಾಡಿ

Amit-Shah--01

ಬೆಂಗಳೂರು, ಆ.29- ಸಿದ್ದರಾಮಯ್ಯ ವಿರುದ್ಧ ನಡೆಸಿದ ಹಲವು ತಂತ್ರಗಳ ಸತತ ಸೋಲುಗಳಿಂದ ಕಂಗೆಟ್ಟಿದ್ದ ರಾಜ್ಯ ಬಿಜೆಪಿ ನಾಯಕರಿಗೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ನೀಡಿದ ಟಾನಿಕ್ ಕಿಕ್ ನೀಡಿದ್ದು ಕಮಲ ಪಕ್ಷದ ಮುಖಂಡರು ಸರ್ಕಾರದ ವಿರುದ್ಧ ಸೆಣೆಸಲು ಮೈಕೊಡವಿ ಎದ್ದು ನಿಂತಿದ್ದಾರೆ.
ಗುಂಡ್ಲುಪೇಟೆ ಮತ್ತು ಚಾಮರಾಜನಗರ ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆ ಸೋಲಿನ ಬಳಿಕ ಬಿಜೆಪಿ ಹೋರಾಟದ ಉತ್ಸಾಹ ಕಳೆದು ಕೊಂಡಿತ್ತು.ಸಿದ್ದರಾಮಯ್ಯ ಸರ್ಕಾರದ ಸಾಲಮನ್ನಾ ಯೋಜನೆ, ಪ್ರತ್ಯೇಕ ನಾಡಧ್ವಜದ ಬೇಡಿಕೆ, ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ಹಲವು ವಿಷಯಗಳಲ್ಲಿ ಯಾವುದೇ ರೀತಿ ಭಾಗಿಯಾಗದೇ ಬಿಜೆಪಿ ಕೈ ಕಟ್ಟಿ ಕೂತಿತ್ತು.

ಕಾಂಗ್ರೆಸ್ ಹೈ ಕಮಾಂಡ್ ಆಶೀರ್ವಾದದಿಂದಾಗಿ ಪ್ರಾದೇಶಿಕವಾಗಿ ಸಿದ್ದರಾಮಯ್ಯ ಪ್ರಬಲ ನಾಯಕನಾಗಿ ಹೊರಹೊಮ್ಮಿರುವ ಹಿನ್ನೆಲೆಯಲ್ಲಿ ಸಿಎಂ ವಿರುದ್ಧ ಹೋರಾಟ ನಡೆಸುವುದು ಕಷ್ಟ ಎಂದು ಬಿಜೆಪಿ ಅರಿವಿಗೆ ಬಂದಿತ್ತು. ಹೀಗಾಗಿ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮಗಳ ವಿಚಾರದಲ್ಲಿ ಯಡಿಯೂರಪ್ಪ ತಲೆ ಹಾಕಲಿಲ್ಲ, ಇದು ಪಕ್ಷಕ್ಕೆ ನೋವುಂಟು ಮಾಡಿತ್ತು ಎಂದು ಪಕ್ಷದ ಪ್ರಮುಖರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ. ಭ್ರಷ್ಟಾಚಾರ ವಿರುದ್ಧ ಹೋರಾಟ ಆರಂಭಿಸಿದ ಬಿಜೆಪಿ, ಸಚಿವರುಗಳಾದ ಡಿ.ಕೆ.ಶಿವಕುಮಾರ್ ಮತ್ತು ರಮೇಶ್ ಜಾರಕಿ ಹೊಳಿ ರಾಜಿನಾಮೆಗೆ ಆಗ್ರಹಿಸಿ ಹೋರಾಟಕ್ಕಿಳಿದರು. ಇದರ ಪ್ರತಿಫಲ ಎಂಬಂತೆ ಯಡಿಯೂರಪ್ಪ ವಿರುದ್ಧ ಎರಡು ಡಿನೋಟಿಫಿಕೇಷನ್ ಪ್ರಕರಣಗಳು ಎಸಿಬಿಯಿಂದ ದಾಖಲಾದವು.

ಬಿಜೆಪಿ ಅವಲಂಬಿಸಿರುವ ಮೋದಿ ತತ್ವ ಸಿದ್ದರಾಮಯ್ಯ ವಿರುದ್ಧ ಕೆಲಸ ಮಾಡುವುದಿಲ್ಲ, ಹೀಗಾಗಿ ಬಿಜೆಪಿಯವರು ರೈತರ ಸಾಲಮನ್ನಾದಂತ ಸ್ಥಳೀಯ ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಬೇಕಿದೆ. ಸರ್ಕಾರದ ವಿರುದ್ಧ ಯಾವುದೇ ಕಾರಣಕ್ಕೂ ಹೋರಾಟ ನಿಲ್ಲುವುದಿಲ್ಲ, ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಮಾಡುವಂತೆ ಒತ್ತಾಯಿಸಿ ರಾಜ್ಯಾದ್ಯಾಂತ ಪ್ರತಿಭಟನೆ ನಡೆಸುವುದಾಗಿ ಯಡಿಯೂರಪ್ಪ ಘೋಷಿಸಿದ್ದಾರೆ.

ಬಿಜೆಪಿ ನೇತೃತ್ವದ ಸರ್ಕಾರ ಗಳಿರುವ ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರಗಳಲ್ಲಿ ಮಾಡಿರುವಂತೆ ರಾಜ್ಯ ಸರ್ಕಾರ ಕೂಡ ರಾಷ್ಟ್ರೀಕೃತ ಬ್ಯಾಂಕ್ ಗಳ ಸಾಲಮನ್ನಾ ಮಾಡಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದಾರೆ. ವೀರಶೈವ-ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಿಜೆಪಿ ಮೌನದ ಮೊರೆ ಹೋಗಿದೆ. ಸಮುದಾಯಗಳ ನಡುವಿನ ಆಂತರಿಕ ವಿಚಾರದಲ್ಲಿ ನಾವು ಹಸ್ತಕ್ಷೇಪ ಮಾಡುವುದಿಲ್ಲ, ಸಮುದಾಯದ ನಾಯಕರು, ಮಠಾಧೀಶರು ಸಮಸ್ಯೆಗೆ ಪರಿಹಾರ ಹುಡುಕುತ್ತಾರೆ. ಬಿಜೆಪಿ ಕಾದು ನೋಡುವ ತಂತ್ರಕ್ಕೆ ಶರಣಾಗಿದೆ.

Facebook Comments

Sri Raghav

Admin