ತ್ಯಾಜ್ಯವಾಹನ ಖರೀದಿಯಲ್ಲಿ ಸಿಎಂ ಮತ್ತು ಕೆ.ಜೆ.ಜಾರ್ಜ್ 14 ಕೋಟಿ ಕಿಕ್‍ಬ್ಯಾಕ್ ಪಡೆದಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

NR-Ramesh--01

ಬೆಂಗಳೂರು, ಆ.29-ಪಾಲಿಕೆ ತ್ಯಾಜ್ಯ ವಿಲೇವಾರಿ ವಾಹನಗಳು ಹಾಗೂ ಯಂತ್ರೋಪಕರಣಗಳ ಖರೀದಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರು ಭಾರೀ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿರುವ ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ, ಬಿಜೆಪಿ ಮುಖಂಡ ಎನ್.ಆರ್.ರಮೇಶ್ ಈ ಬಗ್ಗೆ ಎಸಿಬಿ ಮತ್ತು ಜಾರಿ ನಿರ್ದೇಶನಾಲಯ ದಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ತ್ಯಾಜ್ಯ ವಿಲೇವಾರಿ ವಾಹನ ಮತ್ತು ಯಂತ್ರೋಪಕರಣ ಗಳ ಖರೀದಿಯಲ್ಲಿ ಟಿಪಿಎಸ್ ಇನ್‍ಫ್ರಾಸ್ಟ್ರಕ್ಚರ್ ಸಂಸ್ಥೆಯ ಮಹದೇವ್ ಭಟ್ ಎಂಬುವರಿಂದ ಕೋಟ್ಯಂತರ ರೂಪಾಯಿಗಳ ಕಿಕ್‍ಬ್ಯಾಕ್ ಅನ್ನು ಈ ಇಬ್ಬರು ಪಡೆದಿದ್ದಾರೆ ಎಂದು ಆರೋಪಿಸಿರುವ ಅವರು, ಪತ್ರಿಕಾಗೋಷ್ಠಿಯಲ್ಲಿಂದು ಈ ಸಂಬಂಧ ಹಲವು ದಾಖಲೆಗಳನ್ನು ಬಿಡುಗಡೆ ಮಾಡಿದರು.

25ಕಾಂಪ್ಯಾಕ್ಟರ್‍ಗಳ ಖರೀದಿ, 5 ವರ್ಷಗಳ ನಿರ್ವಹಣೆ, 9 ಮೆಕಾನಿಕಲ್ ಸ್ವೀಪಿಂಗ್ ವಾಹನಗಳ ಖರೀದಿ ಮತ್ತು ನಿರ್ವಹಣೆ ಹೆಸರಿನಲ್ಲಿ ಈ ಇಬ್ಬರು 14.5 ಕೋಟಿರೂ.ಗಳನ್ನು ಕಮೀಷನ್ ರೂಪದಲ್ಲಿ ಪಡೆದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು. ಖರೀದಿಸಿರುವ 25 ಕಾಂಪ್ಯಾಕ್ಟರ್‍ಗಳ ಪೈಕಿ 15 ವಾಹನಗಳು ಕೆಟ್ಟು ಮೂಲೆ ಸೇರಿವೆ. 9 ಮೆಕಾನಿಕಲ್ ಸ್ವೀಪಿಂಗ್ ಮಿಷನ್‍ಗಳು ದುರಸ್ತಿಯಾಗಿವೆ. ಕಳಪೆ ಗುಣಮಟ್ಟದ ವಾಹನಗಳನ್ನು ಖರೀದಿಸುವ ಮೂಲಕ 40 ಕೋಟಿ ರೂ.ಗಳನ್ನು ಕಸದ ಪಾಲು ಮಾಡಿದ್ದಾರೆ ಎಂದು ಅವರು ಆರೋಪಿಸಿದರು.

400 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದ್ದ 6 ತ್ಯಾಜ್ಯ ಸಂಸ್ಕರಣಾ ಘಟಕಗಳು ಬಹುತೇಕ ಮುಚ್ಚಲ್ಪಟ್ಟಿವೆ. ಹೊಸದಾಗಿ ವಾಹನ ಮತ್ತು ಯಂತ್ರೋಪಕರಣಗಳ ಖರೀದಿಗೆ ಸರ್ಕಾರ ವಿವಿಧ ಘಟಕಗಳ ಸ್ಥಾಪನೆಗೆ 604ಕೋಟಿ ರೂ.ಗಳನ್ನು ಬಿಡುಗಡೆ ಮಾಡಿದ್ದು, ಇದರಲ್ಲಿ 100 ಕೋಟಿರೂ.ಗಳಿಗಿಂತಲೂ ಹೆಚ್ಚು ಹಣವನ್ನು ಕಿಕ್‍ಬ್ಯಾಕ್ ರೂಪದಲ್ಲಿ ಪಡೆಯಲು ಸಿದ್ದರಾಮಯ್ಯಮತ್ತು ಜಾರ್ಜ್ ಸಂಚು ರೂಪಿಸಿದ್ದಾರೆ.
ಅಲ್ಲದೆ, ಈ ಪೈಕಿ ಅಧಿಕಾರಿಗಳು 25 ಕೋಟಿಗಿಂತಲೂ ಹೆಚ್ಚು ಹಣವನ್ನು ಕಮೀಷನ್ ಹಣದ ರೂಪದಲ್ಲಿ ಪಡೆಯಲು ಸಂಚು ರೂಪಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಅಮೆರಿಕಾದ ಪ್ರಸಿದ್ಧ ಎಲ್ಗಿನ್ ಸಂಸ್ಥೆಯು ಕೇವಲ 65 ಲಕ್ಷ ರೂ.ಗಳಿಗೆ ವಿಶ್ವದರ್ಜೆಯ ಮೆಕಾನಿಕಲ್ ಸ್ವೀಪಿಂ ಗ್ ಮಿಷನ್ ವಾಹನಗಳನ್ನು ಪೂರೈಸಲು ಸಿದ್ಧವಿದ್ದರೂ ಟಿಪಿಎಸ್ ಎಂಬ ಸಂಸ್ಥೆಯಿಂದ ತಲಾ 1.3 ಕೋಟಿ ರೂ.ಗಳನ್ನು ಕೊಟ್ಟು ಕಳಪೆ ಗುಣಮಟ್ಟದ ಮಿಷನ್‍ಗಳನ್ನು ಪಡೆಯಲಾಗಿದೆ. ಒಂದಕ್ಕೆ ಮೂರು ಪಟ್ಟು ಹೆಚ್ಚು ಹಣ ಪಾವತಿಸಿ ಯಂತ್ರೋಪಕರಣ ಖರೀದಿಸುವ ಮೂಲಕ ಹಣವನ್ನು ಕೊಳ್ಳೆ ಹೊಡೆಯಲಾಗಿದೆ. ಯಂತ್ರೋಪಕರಣಗಳ ಖರೀದಿ ಹಾಗೂ ಸ್ಥಾಪನೆಗೆ ಸಂಬಂಧಿಸಿದ ಖರ್ಚು-ವೆಚ್ಚಗಳ ಬಗ್ಗೆ ಶ್ಚೇತಪತ್ರ ಹೊರಡಿಸಬೇಕು. ಈ ಬೃಹತ್ ಹಗರಣವನ್ನು ಸಿಬಿಐಗೆ ವಹಿಸಬೇಕು. ಟಿಪಿಎಸ್ ಸಂಸ್ಥೆಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದು ಎನ್.ಆರ್.ರಮೇಶ್ ಆಗ್ರಹಿಸಿದರು. ಟಿಪಿಎಸ್ ಸಂಸ್ಥೆಯ ಮಹದೇವ್ ಭಟ್ ಮತ್ತು ಪಾಲಿಕೆ ಎಸ್‍ಡಬ್ಲ್ಯು ಎಂ ಇಲಾಖೆ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸಿರುವುದಾಗಿ ರಮೇಶ್ ಹೇಳಿದರು.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin