ಸುಧಾರಿತ ಆರೋಗ್ಯ ವ್ಯವಸ್ಥೆಯಲ್ಲಿ ಕರ್ನಾಟಕವನ್ನು ವಿಶ್ವಕ್ಕೆ ಮಾದರಿ ಮಾಡುವ ಗುರಿ

Health--01

ಬೆಂಗಳೂರು, ಆ.29- ಕೇಂದ್ರ ನೀತಿ ಆಯೋಗ ಆರೋಗ್ಯ, ಶಿಕ್ಷಣ, ಅಪೌಷ್ಟಿಕತೆಯಲ್ಲಿರುವ ಸಮಸ್ಯೆ ನಿವಾರಿಸುವತ್ತ ಗಮನ ಹರಿಸಿದೆ. ಕರ್ನಾಟಕವನ್ನು ಸುಧಾರಿತ ಆರೋಗ್ಯ ವ್ಯವಸ್ಥೆಯಲ್ಲಿ ವಿಶ್ವಕ್ಕೆ ಮಾದರಿ ಮಾಡುವ ಗುರಿ ರೂಪಿಸಲಾಗಿದೆ ಎಂದು ಕೇಂದ್ರ ನೀತಿ ಆಯೋಗದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಮಿತಾಬ್ ಕಾಂತ್ ತಿಳಿಸಿದರು. ವಿಕಾಸಸೌಧದಲ್ಲಿ ಮಾನವ ಸಂಪನ್ಮೂಲ ಸುಸ್ಥಿರ ಪರಿವರ್ತನಾ ಸಂಸ್ಥೆ ಹಮ್ಮಿಕೊಂಡಿದ್ದ ಕರ್ನಾಟಕ ಆರೋಗ್ಯ ವ್ಯವಸ್ಥೆಯ ಸುಧಾರಣಾ ಕಾರ್ಯಾಗಾರವನ್ನುದ್ದೇಶಿಸಿ ದೆಹಲಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಅವರು ಮಾತನಾಡಿದರು.

WhatsApp Image 2017-08-29 at 1.09.54 PM

ಶಿಕ್ಷಣ, ಆರೋಗ್ಯ, ಅಪೌಷ್ಠಿಕತೆ ಕುರಿತು ನೀತಿ ಆಯೋಗ ಅಸ್ಸೋಂ, ಕರ್ನಾಟಕ, ಉತ್ತರ ಪ್ರದೇಶ ರಾಜ್ಯಗಳನ್ನು ಆಯ್ಕೆ ಮಾಡಿಕೊಂಡಿದೆ. ಅದರಲ್ಲೂ ಕರ್ನಾಟಕ ಆರೋಗ್ಯ ಸುಧಾರಣೆಯಲ್ಲಿ ಪ್ರಗತಿಪರ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಿಗೆ ಪ್ರೋತ್ಸಾಹ ನೀಡಿ ಇನ್ನಷ್ಟು ಸುಧಾರಣೆ ಮಾಡಲು ನೀತಿ ಆಯೋಗ ಬಯಸುತ್ತದೆ. ಹಾಗಾಗಿ ಆರೋಗ್ಯ ಸುಧಾರಣೆಯಲ್ಲಿ ಮುಂಚೂಣಿ ನಾಯಕತ್ವ ವಹಿಸುವ ವ್ಯಕ್ತಿಗಳು ಮತ್ತು ಸಂಸ್ಥೆಗಳನ್ನು ಗುರುತಿಸಲಾಗುವುದು. ಈ ಮೂಲಕ ಜಿಲ್ಲೆ ಜಿಲ್ಲೆಗಳ ನಡುವೆ ಆರೋಗ್ಯಕರ ಪೈಪೋಟಿ ಏರ್ಪಡುವಂತೆ ಮಾಡಿ ಕರ್ನಾಟಕವನ್ನು ವಿಶ್ವದಲ್ಲೇ ಸುಧಾರಿತ ಆರೋಗ್ಯ ವ್ಯವಸ್ಥೆ ಹೊಂದಿರುವ ರಾಜ್ಯ ಮಾಡುವ ಸಂಕಲ್ಪ ಇದೆ ಎಂದು ಹೇಳಿದರು.

WhatsApp Image 2017-08-29 at 1.10.23 PM

ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‍ಚಂದ್ರ ಕುಂಟಿಆ ದಕ್ಷಿಣ ಭಾರತದಲ್ಲೇ ಕರ್ನಾಟಕ ಅತಿ ಹೆಚ್ಚು ವೈದ್ಯಕೀಯ, ದಂತ ವೈದ್ಯಕೀಯ ಹಾಗೂ ನರ್ಸಿಂಗ್ ಕಾಲೇಜುಗಳನ್ನು ಹೊಂದಿದೆ. ಆದರೆ, ಇವುಗಳಿಂದ ಶಿಕ್ಷಣ ಪಡೆದು ಹೊರಬರುವ ಮಾನವ ಸಂಪನ್ಮೂಲವನ್ನು ಸರಿಯಾಗಿ ಬಳಸಿಕೊಳ್ಳಲು ಆಗುತ್ತಿಲ್ಲ. ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ ಎಂದರು.  ಕರ್ನಾಟಕ ಆರೋಗ್ಯ ಸುಧಾರಣೆ ಹಾಗೂ ಮಾನವ ಸಂಪನ್ಮೂಲ ಅಭಿವೃದ್ಧಿ-ಆರೋಗ್ಯ ಇಲಾಖೆಯನ್ನು ಮಾತ್ರ ಅವಲಂಬಿಸಿಲ್ಲ. ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯನ್ನೂ ಒಳಗೊಂಡಿದೆ. ಎಲ್ಲರೂ ಒಟ್ಟಾಗಿ ಸೇರಿ ಸುಧಾರಣೆಗೆ ಕೈ ಜೋಡಿಸಬೇಕು ಎಂದು ಹೇಳಿದರು.

WhatsApp Image 2017-08-29 at 1.10.03 PM

ಕರ್ನಾಟಕದಲ್ಲಿನ ಅಪೌಷ್ಟಿಕತೆ ನಿವಾರಣೆಗೆ ಹೆಚ್ಚು ಗಮನ ಹರಿಸಬೇಕಿದೆ. 2007ರಿಂದ 2016ರ ನಡುವೆ ತೆಗೆದುಕೊಂಡ ಸುಧಾರಣಾ ಕ್ರಮದಿಂದಾಗಿ ಶಿಶುಮರಣ ಪ್ರಮಾಣ 1000ಕ್ಕೆ 47 ರಿಂದ 28ಕ್ಕೆ ಇಳಿದಿದೆ. 2007 ರಿಂದ 2015ರ ನಡುವೆ ತಾಯಂದಿರ ಮರಣದ ಪ್ರಮಾಣ 1 ಲಕ್ಷ ಪ್ರಕರಣಗಳಲ್ಲಿ 178 ರಿಂದ 133ಕ್ಕೆ ಇಳಿದಿದೆ. ಆಸ್ಪತ್ರೆಯಲ್ಲಿ ಹೆರಿಗೆಯ ಪ್ರಮಾಣ ಶೇ.99ಕ್ಕೆ ಏರಿಕೆಯಾಗಿದೆ. ಸಾಕಷ್ಟು ಸುಧಾರಣೆಗಳಾಗಿವೆ. ಇನ್ನೂ ಪ್ರಾಮಾಣಿಕ ಪ್ರಯತ್ನ ಮಾಡುವ ಮೂಲಕ ಮತ್ತಷ್ಟು ಅಭಿವೃದ್ಧಿ ಮಾಡಲು ಸಾಧ್ಯ ಎಂದು ಹೇಳಿದರು.

ಕಾರ್ಯಾಗಾರದಲ್ಲಿ ಮಾತನಾಡಿದ ಡಾ.ದೇವಿಶೆಟ್ಟಿ, ರಾಜ್ಯದಲ್ಲಿ ವರ್ಷಕ್ಕೆ ಹನ್ನೆರಡೂವರೆ ಸಾವಿರ ಸರ್ಜರಿಗಳಾಗುತ್ತಿವೆ. ಇದಕ್ಕೆ 23 ರಿಂದ 30 ಸಾವಿರ ಕೋಟಿ ಹಣಕಾಸು ವೆಚ್ಚವಾಗುತ್ತಿದೆ. ಇಷ್ಟು ಹಣ ಭರಿಸುವುದು ಕಷ್ಟಸಾಧ್ಯ. ಖಾಸಗಿ ಸಂಸ್ಥೆಗಳು ನೀಡುತ್ತಿರುವ ವಿಮಾ ಸೌಲಭ್ಯವನ್ನು ಶೇ.90ರಷ್ಟು ಖಾಸಗಿ ವೈದ್ಯಕೀಯ ಸಂಸ್ಥೆಗಳು ಬಳಸಿಕೊಳ್ಳುತ್ತಿವೆ. ಸರ್ಕಾರ ಕೂಡ ಸುಧಾರಿತ ವಿಮಾ ಸೌಲಭ್ಯ ತರಲು ಮುಂದಾಗಿದೆ. ಆನಂತರ ವೈದ್ಯಕೀಯ ಸೇವೆಯ ಗುಣಮಟ್ಟ ಹೆಚ್ಚಿಸುವತ್ತ ಗಮನ ಹರಿಸಬೇಕಿದೆ ಎಂದು ಹೇಳಿದರು.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಮಾತನಾಡಿ, ಸರ್ಜರಿಗಳ ಸಂಖ್ಯೆ ಹೆಚ್ಚಾಗುವುದನ್ನು ತಡೆಯಲು ಜೀವನ ಕ್ರಮ ಸುಧಾರಣೆಯಂತಹ ಮುಂಜಾಗ್ರತಾ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಸಲಹೆ ನೀಡಿದರು.

Facebook Comments

Sri Raghav

Admin