ಸ್ವಾಭಿಮಾನಿ ವೃದ್ಧೆಗೆ ಸಿಗುವುದೇ ಸೂರು..?

ಈ ಸುದ್ದಿಯನ್ನು ಶೇರ್ ಮಾಡಿ

Old-Women--01

ಮಧುಗಿರಿ, ಆ.29- ಗುಡಿಸಲು ಮುಕ್ತ ನಾಡಿನ ಕನಸು ಕಾಣುತ್ತಿರುವ ರಾಜ್ಯದಲ್ಲಿ ಕನಿಷ್ಠ ವಾಸಿಸಲು ಸೂರು ಇಲ್ಲದೆ 80 ವರ್ಷದ ಮುದಕಿಯೊಬ್ಬರು ಶಿಥಿಲಾವಸ್ಥೆಯಲ್ಲಿರುವ ಪೆಟ್ಟಿಗೆ ಅಂಗಡಿಯಲ್ಲಿ ತನ್ನ ಜೀವಿತದ ಕೊನೆಯ ಕ್ಷಣಗಳನ್ನು ಕಳೆಯುತ್ತಿರುವುದು ದುರಂತವೇ ಸರಿ. ನಗರದ ಡಾಲರ್ಸ್ ಕಾಲೋನಿ ಎಂದೇ ಹೆಸರು ಪಡೆದ ಪ್ರತಿಷ್ಠಿತ ರಾಘವೇಂದ್ರ ಬಡಾವಣೆಯಲ್ಲಿ ಕಳೆದ ಹಲವು ವರ್ಷಗಳಿಂದ 80 ವರ್ಷದ ವೃದ್ಧೆ ಯಲ್ಲಮ್ಮ ಒಂದು ಪೆಟ್ಟಿಗೆ ಅಂಗಡಿಯಲ್ಲಿ ವಾಸಿಸುತ್ತಿದ್ದರೂ ಕೂಡ ಈಕೆಗೆ ಯಾರೊಬ್ಬರು ಕನಿಷ್ಠ ಸೂರನ್ನು ಕಲ್ಪಿಸದಿರುವುದು ಜನಪ್ರತಿನಿಧಿಗಳ ಜನ ಸೇವೆಗೆ ಸಾಕ್ಷಿಯಾಗಿದೆ.

ನಗರದಲ್ಲಿ ತನ್ನ ಪತಿ ಹಾಗೂ ಮಗನೊಂದಿಗೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದ ಯಲ್ಲಮ್ಮ ತನ್ನ ಪತಿ ಹಾಗೂ ತನಗಿದ್ದ ಒಬ್ಬ ಮಗ ಅನಾರೋಗ್ಯದಿಂದ ಮರಣ ಹೊಂದಿದ ನಂತರ ಒಬ್ಬಂಟಿಯಾದ ವೃದ್ಧೆ ಬಾಡಿಗೆ ಹಣ ಕಟ್ಟಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದರು. ತನ್ನ ವಾಸಕ್ಕೆ ಈ ಮುರಿದ ಪೆಟ್ಟಿಗೆ ಅಂಗಡಿಯನ್ನು ಕಳೆದ ಹಲವು ವರ್ಷಗಳಿಂದ ಅವಲಂಬಿಸಿದ್ದು, ಇಂದಿಗೂ ತನ್ನ ಜೀವನೋಪಾಯಕ್ಕಾಗಿ ಬಡಾವಣೆಯಲ್ಲಿನ ಮನೆಗಳಲ್ಲಿ ಅಕ್ಕಿ, ರಾಗಿ, ಸ್ವಚ್ಛಗೊಳಿಸಿ ಅವರು ನೀಡುವ 10 ರಿಂದ 20ರೂ.ಗಳನ್ನೇ ನಂಬಿ ಸ್ವಾಭಿಮಾನದ ಜೀವನ ನಡೆಸುತ್ತಿದ್ದಾರೆ.

ಈ ಇಳಿ ವಯಸ್ಸಿನಲ್ಲೂ ಕೂಡ ಭಿಕ್ಷೆ ಬೇಡದೆ ದುಡಿದು ತಿನ್ನುತ್ತಿರುವ ಈಕೆ ಸಮಾಜಕ್ಕೆ ಮಾದರಿಯಾಗಿದ್ದಾಳೆ. ಎಲ್ಲಾ ಇರುವವರ ನಡುವೆ ಏನೂ ಇಲ್ಲದಿರುವ ಈಕೆಗೆ ನಮ್ಮ ಜನ ಸೇವಕರು ಕನಿಷ್ಠ ಒಂದು ಸೂರನ್ನು ನಿರ್ಮಿಸಿ ಕೊಡುತ್ತಾರೆಯೋ ಕಾದು ನೋಡಬೇಕಾಗಿದೆ.

Facebook Comments

Sri Raghav

Admin