ಇನ್ಮುಂದೆ ರೈತರಿಗೆ ಸಿಗಲಿವೆ ನಂ-1 ಪ್ರಾಮಾಣಿಕೃತ ಬಿತ್ತನೆ ಬೀಜ

Seeds1

ತುಮಕೂರು, ಆ.30-ಹೆಚ್ಚಿನ ಶ್ರಮವಹಿಸಿ ದುಡಿಯುವ ರೈತರಿಗೆ ಉತ್ತಮ ಇಳುವರಿ ಪಡೆಯಲು ನಂಬರ್-1 ಪ್ರಮಾಣೀಕೃತ ಬಿತ್ತನೆ ಬೀಜಗಳನ್ನು ಪೂರೈಸಲು ಸರ್ಕಾರ ಯೋಜನೆ ರೂಪಿಸಿ ಅನುಷ್ಟಾನಗೊಳಿಸಲು ಮುಂದಾಗಿದೆ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ತಿಳಿಸಿದರು.
ಜಿಲ್ಲೆಯ ಶಿರಾ ತಾಲ್ಲೂಕಿನ ಭುವನಹಳ್ಳಿಯಲ್ಲಿ ರೂ. 357 ಲಕ್ಷ ವೆಚ್ಚದಲ್ಲಿ ಕರ್ನಾಟಕ ರಾಜ್ಯ ಬೀಜ ನಿಗಮದ ವತಿಯಿಂದ ನಿರ್ಮಿಸಿರುವ ಬಿತ್ತನೆ ಬೀಜ ಸಂಸ್ಕರಣ ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಒದಗಿಸದಿದ್ದರೆ ರೈತನ ಶ್ರಮ ಹಾಗೂ ಹಣ ಎಲ್ಲವೂ ಮಣ್ಣುಪಾಲಾಗುತ್ತದೆ. ಇದನ್ನರಿತ ರಾಜ್ಯ ಸರ್ಕಾರ ರೈತರಿಂದಲೇ ಬಿತ್ತನೆ ಬೀಜಗಳನ್ನು ಉತ್ಪಾದಿಸಿ ಶೇ. 100 ರಷ್ಟು ಉತ್ತಮ ಗುಣಮಟ್ಟದ ಪ್ರಾಮಾಣಿಕೃತ ನಂಬರ್-1 ಬಿತ್ತನೆ ಬೀಜಗಳನ್ನು ರೈತರಿಗೆ ಸರಬರಾಜು ಮಾಡಲು ಮುಂದಿನ ಮೂರು ವರ್ಷಗಳ ಬೇಡಿಕೆಯನ್ನು ಆಧರಿಸಿ ಯೋಜನೆ ರೂಪಿಸಲಾಗಿದೆ ಎಂದು ಅವರು ತಿಳಿಸಿದರು.

Krishna-Byre

ಕಳೆದ ಹಲವಾರು ವರ್ಷಗಳಿಂದ ರೈತರು ಬಿತ್ತನೆ ಮಾಡುವ ಸಮಯ ಪ್ರಾರಂಭವಾಗುವ ಹೊತ್ತಿಗೆ ಬೀಜ ಒದಗಿಸಲು ಏಪ್ರಿಲ್‍ನಲ್ಲಿ ಬಿತ್ತನೆ ಬೀಜ ಪೂರೈಕೆ ಮಾಡಲು ಬಿತ್ತನೆ ಬೀಜ ಒದಗಿಸುವ ಸಂಸ್ಥೆಗಳಿಗೆ ಬೇಡಿಕೆ ನೀಡಿ ಖರೀದಿಸಲಾಗುತ್ತಿತ್ತು. ಈ ರೀತಿ ತರಾತುರಿಯಲ್ಲಿ ಬಿತ್ತನೆ ಬೀಜ ಖರೀದಿ ಮಾಡುತ್ತಿದ್ದರಿಂದ 2ನೇ ದರ್ಜೆಯ ಬಿತ್ತನೆ ಬೀಜಗಳು ಸರಬರಾಜು ಆಗುತ್ತಿದ್ದವು. ಇದರಿಂದ ರೈತರು ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಇದೀಗ ಇದನ್ನು ತಪ್ಪಿಸಿ ನಂಬರ್-1 ಪ್ರಾಮಾಣಿಕೃತ ಬಿತ್ತನೆ ಬೀಜ ಒದಗಿಸಲು ದೀರ್ಘಾವಧಿ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಮಾರುಕಟ್ಟೆಯಲ್ಲಿ ಕೃಷಿ ಉತ್ಪನ್ನಗಳು ಏಕಕಾಲದಲ್ಲಿ ಹೆಚ್ಚಿಗೆ ಸರಬರಾಜಾದಾಗ ರೈತರ ಬೆಳೆಗಳಿಗೆ ಉತ್ತಮ ಬೆಲೆ ಸಿಗುವುದಿಲ್ಲ. ಅಂತಹ ಸಮಯದಲ್ಲಿ ರೈತರ ಉತ್ಪನ್ನಗಳನ್ನು ಗೋದಾಮುಗಳಲ್ಲಿ ಸಂರಕ್ಷಿಸಿಡಲು ನಬಾರ್ಡ್‍ನ ರೂ. 775 ಕೋಟಿ ನೆರವಿನಿಂದ ಹಾಗೂ ಕೃಷಿ ಇಲಾಖೆ ಅನುದಾನ ಸೇರಿ ಒಟ್ಟು 998 ಕೋಟಿ ರೂ.ಗಳ ವೆಚ್ಚದಲ್ಲಿ ಆಧುನಿಕ ಮಾದರಿಯ 22.78 ಲಕ್ಷ ಟನ್ ಸಾಮಥ್ರ್ಯದ ಗೋದಾಮುಗಳನ್ನು ನಿರ್ಮಿಸಲಾಗುತ್ತಿದೆ ಎಂದು ಅವರು ಹೇಳಿದರು.

ಕಾನೂನು ಸಂಸದೀಯ ಹಾಗೂ ಸಣ್ಣ ನೀರಾವರಿ ಮತ್ತು ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಮಾತನಾಡಿ, ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಸಿರಿಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ಸಿರಿಧಾನ್ಯಗಳ ಸಂಸ್ಕರಣೆಗೆ ಒಂದು ಸಂಸ್ಕರಣಾ ಘಟಕ ಹಾಗೂ ಪ್ರತ್ಯೇಕ ಗೋದಾಮು ಈ ಭಾಗದಲ್ಲಿ ಆರಂಭಿಸುವಂತೆ ಕೃಷಿ ಸಚಿವರಲ್ಲಿ ಮನವಿ ಮಾಡಿದರು.  ಶಾಸಕ ರಮೇಶ್ ಬಾಬು ಮಾತನಾಡಿ, ಶಿರಾದಲ್ಲಿ ಆರಂಭಿಸಿರುವ ಬಿತ್ತನೆ ಬೀಜ ಸಂಸ್ಕರಣಾ ಘಟಕ ಈ ಭಾಗದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ. ಇದೇ ರೀತಿ ಜಿಲ್ಲೆಯ ಇತರೆ ತಾಲ್ಲೂಕುಗಳಿಗೂ ಗೋದಾಮುಗಳನ್ನು ನಿರ್ಮಿಸಿಕೊಡುವಂತೆ ಬೇಡಿಕೆ ಇಟ್ಟರು.

ತುಮಕೂರು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಲತಾ ರವಿಕುಮಾರ್, ಕರ್ನಾಟಕ ರಾಜ್ಯ ಬೀಜ ನಿಗಮದ ನಿರ್ದೇಶಕರಾದ ವಡಗೂರು ಡಿ.ಎಲ್.ನಾಗರಾಜು ಮುಂತಾದವರು ಹಾಜರಿದ್ದರು. ವಿ.ಡಿ.ರೂಪಾದೇವಿ, ಜಂಟಿ ಕೃಷಿ ನಿರ್ದೇಶಕರು ವಂದಿಸಿದರು.

Facebook Comments

Sri Raghav

Admin