ಕಾಮ ಕೆಣಕುವ ಅಶ್ಲೀಲ ಸಿನಿಮಾ ಪೋಸ್ಟರ್ ತೆರವುಗೊಳಿಸಲು ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

Posters

ಗೌರಿಬಿದನೂರು, ಆ.30- ಪಟ್ಟಣದ ಶಾಲಾ-ಕಾಲೇಜುಗಳ ಬಳಿಯ ಗೋಡೆಗಳ ಮೇಲೆ ಅಶ್ಲೀಲ ಚಲನಚಿತ್ರಗಳ ಬಿತ್ತಿಪತ್ರ (ವಾಲ್‍ಪೋಸ್ಟ್)ಗಳನ್ನು ಹಾಕುತ್ತಿರುವುದರಿಂದ ವಿದ್ಯಾರ್ಥಿಗಳು ಹಾಗೂ ಮಹಿಳೆಯರು ರಸ್ತೆಯಲ್ಲಿ ಓಡಾಡಲು ಇರಿಸು ಮುರಿಸಾಗುವಂತಹ ಪರಿಸ್ಥಿತಿ ಉಂಟಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ನರಸಿಂಹಮೂರ್ತಿ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಇತ್ತೀಚೆಗೆ ಬಿಡುಗಡೆಯಾಗಿರುವ ತೆಲುಗು ಚಲನಚಿತ್ರವೊಂದರ ಪೋಸ್ಟರ್‍ಗಳು ಆಶ್ಲೀಲವಾಗಿದ್ದು, ಅವುಗಳನ್ನು ಪಟ್ಟಣದ ಶಾಲಾ-ಕಾಲೇಜು , ದೇವಾಲಯಗಳಿರುವ ಕಡೆಗಳ ಗೋಡೆಗಳ ಮೇಲೆ ಹಾಕಿದ್ದಾರೆ, ಅಶ್ಲೀಲ ದೃಶ್ಯಗಳು ಯುವಕ ಯುವತಿಯರನ್ನು ದಿಕ್ಕು ತಪ್ಪಿಸುವಂತಿದ್ದು, ಕಾಮ ಪ್ರಚೋದನೆಯಂತಹ ಒಂದು ರೀತಿ ಕಟ್ಟ ಸಂದೇಶವನ್ನು ಸಾರ್ವಜನಿಕರಿಗೆ ನೀಡುವಂತಿದೆ ಎಂದು ದೂರಿದ್ದಾರೆ.

ಇಂತಹ ಪೋಸ್ಟರ್‍ಗಳನ್ನು ಹಾಕುವುದನ್ನು ನಿಷೇಧಿಸಬೇಕು. ಈ ಬಗ್ಗೆ ತಾಲೂಕು ಆಡಳಿತ ಸಂಬಂಧಪಟ್ಟ ಚಿತ್ರಮಂದಿರದ ಮಾಲೀಕರುಗಳಿಗೆ ಮುನ್ನೆಚ್ಚರಿಕೆಯನ್ನು ನೀಡಬೇಕಿದೆ. ಸಮಾಜದ ಸಾಮರಸ್ಯ ಕದಡುವ ಹಾಗೂ ಅಶ್ಲೀಲತೆಯನ್ನು ಪ್ರಚಾರ ಮಾಡುವಂತಹ ಪೋಸ್ಟರ್‍ಗಳನ್ನು ನಿಷೇಧಿಸಬೇಕು ಎಂದು ತಿಳಿಸಿದ್ದಾರೆ.

ಪ್ರಚಾರದ ತಂತ್ರಗಾರಿಕೆ:

ಚಲನಚಿತ್ರದ ಪ್ರಚಾರದ ಅಬ್ಬರಕ್ಕಾಗಿ ಇಂತಹ ಅಶ್ಲೀಲ ಚಿತ್ರಗಳನ್ನು ಪೋಸ್ಟರ್ ಮೂಲಕ ಪ್ರಚಾರ ಮಾಡಿ ಸಾರ್ವಜನಿಕರನ್ನು ಹಾಗೂ ಯುವಕರನ್ನು ಸೆಳೆಯುವ ತಂತ್ರ ಇದಾಗಿದ್ದು, ಇದರಿಂದ ಯುವ ಜನತೆಯನ್ನು ತಪ್ಪು ಹಾದಿಗೆ ಸೆಳೆಯುವಂತಾಗಿದೆ ಕೂಡಲೇ ಇಂತಹ ಅಶ್ಲೀಲ ಪೋಸ್ಟರ್‍ಗಳನ್ನು ತೆರವುಗೊಳಿಸಲು ತಾಲೂಕು ಆಡಳಿತಕ್ಕೆ ಕಟ್ಟುನಿಟ್ಟಿನ ಕ್ರಮವನ್ನು ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಶಾಲಾ-ಕಾಲೇಜುಗಳ ಬಳಿಯಲ್ಲಿ ಅಶ್ಲೀಲ ದೃಶ್ಯಗಳ ಪೋಸ್ಟರ್‍ಗಳನ್ನು ಅಂಟಿಸುವುದು ಸರಿಯಲ್ಲ, ಈ ಬಗ್ಗೆ ತಾಲೂಕು ಆಡಳಿತ ಕ್ರಮಕ್ಕೆ ಮುಂದಾಗಬೇಕು, ಇಂತಹ ದೃಶ್ಯಗಳನ್ನು ರಸ್ತೆಯ ಬದಿಯಲ್ಲಿ ಹಾಕುವುದರಿಂದ ಮಹಿಳೆಯರು ,ಯುವತಿಯರು ರಸ್ತೆಯಲ್ಲಿ ಓಡಾಡಲು ಇರಿಸು ಮುರಿಸು ಉಂಟಾಗುತ್ತಿದೆ. ಇಂತಹ ಪೋಸ್ಟರ್‍ಗಳಿಂದ ಸಮಾಜ ತಲೆ ತಗ್ಗಿಸುವಂತಾಗುತ್ತದೆ ಎಂದು ಕರುನಾಡ ಕನ್ನಡಿಗರ ವೇದಿಕೆ ಅಧ್ಯಕ್ಷ ಜಿ.ಬಾಲಾಜಿ ಆಗ್ರಹಿಸಿದ್ದಾರೆ.

Facebook Comments

Sri Raghav

Admin