ಕೋರ್ಟ್ ಮಾದರಿಯಲ್ಲಿ ವಿಧಾನಪರಿಷತ್ ಸದಸ್ಯರ ವಿಚಾರಣೆ

ಈ ಸುದ್ದಿಯನ್ನು ಶೇರ್ ಮಾಡಿ

8-Members--01

ಬೆಂಗಳೂರು, ಆ.30-ಪ್ರಯಾಣ ಭತ್ಯೆಯನ್ನು ದುರುಪಯೋಗಪಡಿಸಿಕೊಂಡ ಆರೋಪಕ್ಕೆ ಗುರಿಯಾಗಿರುವ ಎಂಟು ಮಂದಿ ವಿಧಾನಪರಿಷತ್ ಸದಸ್ಯರನ್ನು ನ್ಯಾಯಾಲಯ ಮಾದರಿಯಲ್ಲಿ ವಿಚಾರಣೆಗೊಳಪಡಿಸುವುದಾಗಿ ವಿಧಾನಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಧಾನಪರಿಷತ್ ಸದಸ್ಯರು ಬೆಂಗಳೂರು ವಿಳಾಸ ನೀಡಿದ್ದರೂ, ತಮ್ಮ ತವರೂರಿನಿಂದ ಪ್ರಯಾಣ ಮಾಡಿ ಪ್ರಯಾಣ ಭತ್ಯೆ ಪಡೆದುಕೊಂಡಿದ್ದಾರೆ. ಈ ಬಗ್ಗೆ ಬಿಬಿಎಂಪಿ ಸದಸ್ಯ ಪದ್ಮನಾಭರೆಡ್ಡಿ ದೂರು ನೀಡಿದ್ದಾರೆ. ಈ ಪ್ರಕರಣ ಅತ್ಯಂತ ಸೂಕ್ಷ್ಮ ಮತ್ತು ಸಂಕೀರ್ಣದ್ದಾಗಿದ್ದು, ಯಾವ ರೀತಿ ಕ್ರಮಕೈಗೊಳ್ಳಬಹುದು, ಈ ವಿಚಾರದ ಸ್ವರೂಪವೇನು ಎಂಬುದರ ಬಗ್ಗೆ ರಾಜ್ಯದ ಅಡ್ವೊಕೇಟ್ ಜನರಲ್ ಅವರ ಜೊತೆ ಎರಡು ಸುತ್ತಿನ ಸಮಾಲೋಚನೆ ನಡೆಸಿದ್ದೇನೆ ಎಂದರು.

ಸಭಾಪತಿ ಅವರಿಗೆ ಅರೆ ನ್ಯಾಯಾಲಯ ಮಾದರಿಯಲ್ಲೇ ವಿಚಾರಣೆ ನಡೆಸುವ ಅವಕಾಶ ಮತ್ತು ಅಧಿಕಾರ ಇದೆ. ಅದನ್ನು ಬಳಸಿಕೊಂಡು ದೂರುದಾರರು ಮತ್ತು ಆರೋಪಕ್ಕೆ ಗುರಿಯಾಗಿರುವ ವಿಧಾನಪರಿಷತ್ ಸದಸ್ಯರನ್ನು ನ್ಯಾಯಾಲಯ ಮಾದರಿಯಲ್ಲೇ ವಿಚಾರಣೆಗೊಳಪಡಿಸಲಾಗುವುದು. ಅದಕ್ಕೂ ಮುನ್ನ ರಾಜ್ಯದ ಮುಖ್ಯ ಚುನಾವಣಾ ಆಯುಕ್ತ ಅಧಿಕಾರಿ ಅನಿಲ್ ಝಾ ಅವರನ್ನು ಸಂಪರ್ಕಿಸಿ ಅಭಿಪ್ರಾಯ ಸಂಗ್ರಹಿಸಲಾಗುತ್ತದೆ. ಒಟ್ಟಾರೆ ಈ ಪ್ರಕರಣವನ್ನು ತಾತ್ವಿಕ ಹಂತಕ್ಕೆ ತೆಗೆದುಕೊಂಡು ಹೋಗಲು ನಿರ್ಧರಿಸಲಾಗಿದೆ.

ಪಕ್ಷಾಂತರ ನಿಷೇಧ ಕಾಯ್ದೆ ಮತ್ತು ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿ ಆರೋಪಗಳನ್ನು ವಿಚಾರಣೆಗೊಳಪಡಿಸಲಾಗುವುದು. ಆರೋಪ ಸಾಬೀತಾದರೆ ವಿಧಾನಪರಿಷತ್ ಸದಸ್ಯತ್ವಕ್ಕೆ ಕುತ್ತು ಬರಲಿದೆ ಎಂಬ ಪ್ರಶ್ನೆಗೆ ನೇರ ಉತ್ತರ ನೀಡದ ಸಭಾಪತಿಯವರು ಸಾಧ್ಯ-ಸಾಧ್ಯತೆಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ವಾದ-ವಿವಾದಗಳು ಯಾವ ಮಟ್ಟಕ್ಕೆ ಪರಿಣಾಮ ಬೀರುತ್ತದೆ ಎಂಬುದು ಮುಂದಿನ ನಿರ್ಣಯ ಆಧರಿಸಿರುತ್ತದೆ. ಏನೇ ಆದರೂ ಈ ವಿಚಾರಣೆ ವಿಧಾನಮಂಡಲದಲ್ಲಿ ಮೈಲಿಗಲ್ಲಾಗಲಿದ್ದು, ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಲಿದೆ ಎಂದು ಸಭಾಪತಿ ಡಿ.ಎಚ್.ಶಂಕರಮೂರ್ತಿ ಹೇಳಿದರು.

Facebook Comments

Sri Raghav

Admin