ಬೆಂಗಳೂರಿಗರೇ ಹುಷಾರ್..!!

Bengaluru--01

ಬೆಂಗಳೂರು, ಆ.30-ನಗರದಲ್ಲಿ ಸಾಂಕ್ರಾಮಿಕ ರೋಗಗಳು ಉಲ್ಬಣಗೊಂಡಿದ್ದು, ಸಾವಿರಾರು ಮಂದಿ ಡೇಂಘಿ, ಚಿಕೂನ್‍ಗುನ್ಯಾ, ವೈರಲ್ ಫೀವರ್‍ನಂತಹ ಕಾಯಿಲೆಗಳಿಗೆ ತುತ್ತಾಗಿದ್ದಾರೆ. ಇತ್ತೀಚೆಗೆ ಬಿದ್ದ ಭಾರೀ ಮಳೆಯಿಂದ ಹಾಗೂ ರಸ್ತೆಗಳಲ್ಲಿ ಬಿದ್ದಿರುವ ರಾಶಿ ರಾಶಿ ಕಸದ ಹಿನ್ನೆಲೆಯಲ್ಲಿ ನಗರದಾದ್ಯಂತ ರೋಗ ಹರಡುವ ಸೊಳ್ಳೆಗಳು ಉತ್ಪತ್ತಿಯಾಗುತ್ತಿರುವುದು ಸಾಂಕ್ರಾಮಿಕ ರೋಗಗಳ ಉಲ್ಬಣಕ್ಕೆ ಕಾರಣವಾಗಿದೆ.  ನಗರದ ಜನಸಂಖ್ಯೆಯಲ್ಲಿ ಶೇ.40ಕ್ಕೂ ಹೆಚ್ಚು ಮಂದಿ ಸಾಂಕ್ರಾಮಿಕ ರೋಗದಿಂದ ನರಳುತ್ತಿದ್ದಾರೆ.

ಖಾಸಗಿ ಆಸ್ಪತ್ರೆಗಳು ಭರ್ತಿಯಾಗಿದ್ದರೂ ಒಳರೋಗಿಗಳ ದಾಖಲಾತಿ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಪ್ರತಿನಿತ್ಯ ಸಾವಿರಾರು ರೋಗಿಗಳು ಆಸ್ಪತ್ರೆಗೆ ದಾಖಲಾಗಲು ದೌಡಾಯಿಸುತ್ತಿರುವುದು ಆಸ್ಪತ್ರೆ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಹಾಸಿಗೆ ಒದಗಿಸಿಕೊಡುವುದೇ ದುಸ್ತರವಾಗಿದೆ. ನಗರದ ಕೆಲ ಪ್ರಮುಖ ಆಸ್ಪತ್ರೆಗಳ ಮುಖ್ಯಸ್ಥರು ಆಂತರಿಕ ಸುತ್ತೋಲೆ ಹೊರಡಿಸಿ ಮಾರಣಾಂತಿಕ ಡೇಂಘಿ, ಚಿಕೂನ್‍ಗುನ್ಯಾದಂತಹ ರೋಗಿಗಳು ಆಗಮಿಸಿದಾಗ ಹಾಸಿಗೆ ಖಾಲಿ ಇಲ್ಲದಿದ್ದರೆ ರೋಗಿಗಳನ್ನು ದಾಖಲು ಮಾಡಿಕೊಳ್ಳಬೇಡಿ ಎಂದು ಸೂಚಿಸಿದ್ದಾರೆ ಎನ್ನಲಾಗಿದೆ.

ಎಲ್ಲಾ ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿದ್ದು, ಚಿಕಿತ್ಸೆ ನೀಡಲು ಔಷಧಿಗಳ ಕೊರತೆಯೂ ಎದುರಾಗಿದೆ ಎಂಬ ಆತಂಕಕಾರಿ ವಿಷಯ ಬೆಳಕಿಗೆ ಬಂದಿದೆ. ಸಣ್ಣಪುಟ್ಟ ಡಿಸ್ಪೆನ್ಸರಿಗಳಲ್ಲೂ ಬೆಳಿಗ್ಗೆಯಿಂದ ಸಂಜೆಯವರೆಗೂ ರೋಗಿಗಳ ಮಾರುದ್ದ ಸಾಲುಗಳು ಕಂಡು ಬರುತ್ತಿವೆ.

ನಂಬಿಕೆ ಇಲ್ಲ:

ಡೇಂಘಿ, ಚಿಕೂನ್‍ಗುನ್ಯಾದಂತಹ ಮಾರಣಾಂತಿಕ ರೋಗಗಳಿಗೆ ಪಾಲಿಕೆ ಆಸ್ಪತ್ರೆಗಳಲ್ಲಿ ಸೂಕ್ತ ಔಷಧೋಪಚಾರಗಳಿವೆ. ಆದರೆ ರೋಗಗಳಿಗೆ ತುತ್ತಾಗುವ ನಾಗರಿಕರಿಗೆ ಮಾತ್ರ ಬಿಬಿಎಂಪಿ ಆಸ್ಪತ್ರೆಗಳ ಬಗ್ಗೆ ನಂಬಿಕೆ ಇಲ್ಲ. ಹೀಗಾಗಿ ನಾನಾ ರೋಗಗಳಿಗೆ ತುತ್ತಾಗುವ ರೋಗಿಗಳು ಖಾಸಗಿ ಆಸ್ಪತ್ರೆಗಳನ್ನೇ ನಂಬಿಕೊಂಡಿದ್ದಾರೆ. ಇಷ್ಟೆಲ್ಲಾ ಆದರೂ ಬಿಬಿಎಂಪಿ ಆರೋಗ್ಯ ಇಲಾಖೆ ಅಧಿಕಾರಿಗಳು ಮಾತ್ರ ಬಿಬಿಎಂಪಿ ಆಸ್ಪತ್ರೆಗಳ ಕಾರ್ಯವೈಖರಿ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸಲು ಪ್ರಾಮಾಣಿಕ ಪ್ರಯತ್ನವನ್ನೇ ಮಾಡುತ್ತಿಲ್ಲ.

ಮುನ್ನೆಚ್ಚರಿಕೆ:

ನಗರದಲ್ಲಿ ಸಾವಿರಾರು ಮಂದಿ ಸಾಂಕ್ರಾಮಿಕ ರೋಗಗಳಿಗೆ ತುತ್ತಾದ ನಂತರ ಎಚ್ಚೆತ್ತುಕೊಂಡಿರುವ ಬಿಬಿಎಂಪಿ ರೋಗ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ. ರೋಗ ತಡೆಗಟ್ಟುವ ಕುರಿತಂತೆ ಜನರಲ್ಲಿ ಜಾಗೃತಿ ಮೂಡಿಸಲು ಜಾಥಾಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕರಪತ್ರ ಮತ್ತು ಜಾಹೀರಾತು ಮೂಲಕವೂ ರೋಗ ತಡೆಗೆ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.

ಮರಣ ಮೃದಂಗ:

ನಾನಾ ಸಾಂಕ್ರಾಮಿಕ ರೋಗಗಳಿಂದ ನಗರದಲ್ಲಿ ಹಲವಾರು ಮಂದಿ ಈಗಾಗಲೇ ಸಾವನ್ನಪ್ಪಿದ್ದಾರೆ. ಆದರೆ ಯಾವುದೇ ಖಾಸಗಿ ಆಸ್ಪತ್ರೆಗಳು ಡೇಂಘಿ ಅಥವಾ ಚಿಕೂನ್‍ಗುನ್ಯಾದಂತಹ ರೋಗಗಳಿಂದಲೇ ಸಾವನ್ನಪ್ಪಿದರೆ ಅದರ ವಿವರಗಳನ್ನು ಬಹಿರಂಗಪಡಿಸುವಂತಿಲ್ಲ. ಹೀಗಾಗಿ ನಗರದಲ್ಲಿ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದ್ದರೂ ನಿಖರ ಮಾಹಿತಿ ಮಾತ್ರ ಯಾರಿಗೂ ಲಭ್ಯವಾಗುತ್ತಿಲ್ಲ.
ಏನು ಮಾಡಬೇಕು?

ಸಾಮಾನ್ಯ ಜ್ವರ ಬಂದರೂ ಕೂಡಲೇ ಬಿಬಿಎಂಪಿ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ರಕ್ತಪರೀಕ್ಷೆ ಮಾಡಿಸಿಕೊಳ್ಳುವುದು ಒಳಿತು. ಯಾವುದೇ ರೋಗದ ಮುನ್ಸೂಚನೆಯನ್ನು ಉದಾಸೀನ ಮಾಡಬಾರದು. ರಕ್ತ ಪರೀಕ್ಷೆ ಮಾಡಿಕೊಂಡು ಸೂಕ್ತ ಔಷಧೋಪಚಾರಗಳನ್ನು ಮಾಡಿಕೊಂಡರೆ ರೋಗದಿಂದ ಮುಕ್ತರಾಗಬಹುದು.  ರೋಗ ಲಕ್ಷಣಗಳು ಕಾಣಿಸಿಕೊಳ್ಳಲು ಮುಖ್ಯ ಕಾರಣ ಸ್ವಚ್ಛತೆ ಇಲ್ಲದಿರುವುದು. ಹೀಗಾಗಿ ನಾಗರಿಕರು ತಮ್ಮ ಮನೆ ಹಾಗೂ ಆವರಣವನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಮನೆ ಮುಂದಿನ ಪಾಟ್‍ಗಳು, ತೆಂಗಿನ ಚಿಪ್ಪುಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು, ನೀರಿನ ಟ್ಯಾಂಕ್‍ಗಳನ್ನು ಮುಚ್ಚಿಡಬೇಕು.

ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಬಿಸಿನೀರು ಸೇವನೆ ಅತ್ಯಗತ್ಯವಾಗಿದೆ. ಇದರ ಜೊತೆಗೆ ರೋಗ ತಡೆಗಟ್ಟುವ ಸಾಮಥ್ರ್ಯವಿರುವ ಪಪ್ಪಾಯ, ಕಿವಿ ಹಾಗೂ ದಾಳಿಂಬೆ ಹಣ್ಣುಗಳ ಸೇವನೆ ಅತಿಮುಖ್ಯ. ಮನೆಯ ಮುಂದಿನ ಚರಂಡಿಗಳನ್ನು ಶುಚಿಯಾಗಿಟ್ಟುಕೊಳ್ಳಲು ಆದ್ಯತೆ ನೀಡಬೇಕು. ಎಲ್ಲೇ ಸೊಳ್ಳೆ ಉತ್ಪನ್ನ ಸ್ಥಳಗಳು ಕಂಡು ಬಂದರೆ ಕೂಡಲೇ ಸ್ಥಳೀಯ ಪಾಲಿಕೆ ಸದಸ್ಯರಿಗಾಗಲೀ, ಬಿಬಿಎಂಪಿ ಸಿಬ್ಬಂದಿಗಳಿಗಾಗಲೀ ಸುದ್ದಿ ಮುಟ್ಟಿಸುವುದು ಸೂಕ್ತ.

ಕಾಲ ಮಿಂಚಿಲ್ಲ:

ನಗರದಲ್ಲಿ ಈಗಾಗಲೇ ಸಾಂಕ್ರಾಮಿಕ ರೋಗಗಳು ಮರಣ ಮೃದಂಗ ಬಾರಿಸುತ್ತಿದ್ದರೂ ಆತಂಕ ಪಡುವ ಅಗತ್ಯವಿಲ್ಲ. ಪಾಲಿಕೆ ಆಸ್ಪತ್ರೆಗಳಲ್ಲಿ ರಕ್ತ ಪರೀಕ್ಷೆ ಮೂಲಕ ರೋಗ ಪತ್ತೆ ಹಚ್ಚುವುದು ಹಾಗೂ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಇದ್ದು, ಇದನ್ನು ನಾಗರಿಕರು ಸದುಪಯೋಗಪಡಿಸಿಕೊಂಡು ರೋಗ ಉಲ್ಬಣಗೊಳ್ಳುವ ಮುನ್ನವೇ ಸೂಕ್ತ ಚಿಕಿತ್ಸೆ ಪಡೆದು ರೋಗಮುಕ್ತರಾಗಬಹುದು. ಈ ನಿಟ್ಟಿನಲ್ಲಿ ನಾಗರಿಕರು ಚಿಂತಿಸುವ ಅಗತ್ಯವಿದೆ.

Facebook Comments

Sri Raghav

Admin