ಯುಪಿ ಮಾದರಿಯಲ್ಲಿ ಕರ್ನಾಟಕದ ‘ಯೋಗಿ’ಯಾಗುವರೇ ಮಾದಾರ ಚೆನ್ನಯ್ಯ ಸ್ವಾಮೀಜಿ..?

ಈ ಸುದ್ದಿಯನ್ನು ಶೇರ್ ಮಾಡಿ

Madara-Channayya-Swamiji

ಬೆಂಗಳೂರು, ಆ.30- ಕರ್ನಾಟಕದಲ್ಲಿ ಕಮಲ ಅರಳಿಸುವ ಹೊಣೆಗಾರಿಕೆ ವಹಿಸಿಕೊಂಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಉತ್ತರ ಪ್ರದೇಶ ಮಾದರಿಯಲ್ಲೇ ಚುನಾವಣಾ ತಂತ್ರಗಾರಿಕೆ ರೂಪಿಸುತ್ತಿದ್ದಾರೆ. ಸಾಧು, ಸಂತರಿಗೂ ಟಿಕೆಟ್ ನೀಡುವ ಚಿಂತನೆ ನಡೆಸಿದ್ದು, ಮಾದಾರ ಚೆನ್ನಯ್ಯ ಸ್ವಾಮೀಜಿ ಕರ್ನಾಟಕದ ಯೋಗಿ ಆದಿತ್ಯನಾಥ್ ಆಗುತ್ತಾರೆ ಎನ್ನುವ ಪ್ರಶ್ನೆ ಉದ್ಭವಿಸುವಂತೆ ಮಾಡಿದೆ. ಹೌದು, ರಾಜ್ಯ ಬಿಜೆಪಿಯನ್ನು ನಂಬಿ ಕುಳಿತರೆ ಪ್ರಯೋಜನವಿಲ್ಲ ಎನ್ನುವುದನ್ನು ಮನಗಂಡಿರುವ ಅಮಿತ್ ಶಾ, ನೇರವಾಗಿಯೇ ರಾಜ್ಯ ಚುನಾವಣಾ ಉಸ್ತುವಾರಿಯನ್ನು ತಮ್ಮ ತೆಕ್ಕೆಗೆ ತೆಗೆದುಕೊಂಡಿದ್ದಾರೆ. ಆಡಳಿತಾರೂಢ ಕಾಂಗ್ರೆಸ್ ಸರ್ಕಾರದ ಲಿಂಗಾಯತ ಸ್ವತಂತ್ರ ಧರ್ಮ, ಪ್ರತ್ಯೇಕ ನಾಡಧ್ವಜ ಸೇರಿದಂತೆ ಯಾವುದೇ ತಂತ್ರಕ್ಕೂ ಪ್ರತಿತಂತ್ರ ರೂಪಿಸಲು ಶಾ ಮುಂದಾಗಿದ್ದಾರೆ. ಉತ್ತರ ಪ್ರದೇಶ ಮಾದರಿಯನ್ನೇ ಅನುಸರಿಸಲು ನಿರ್ಧರಿಸಿದ್ದಾರೆ. ಅದರ ಭಾಗವಾಗಿ ಸಾಧು-ಸಂತರನ್ನೂ ಕಣಕ್ಕಿಳಿಸಿ ಆಯಾ ಸಮುದಾಯದ ಇಡೀ ವರ್ಗದ ಮತ ಬುಟ್ಟಿಗೆ ಕೈಹಾಕಲು ಮಾಸ್ಟರ್ ಪ್ಲಾನ್ ರೂಪಿಸಿದ್ದಾರೆ.

ಆದರೆ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡುವ ಬದಲು 2019 ರ ಲೋಕಸಭಾ ಚುನಾವಣೆಯಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ ಅವರನ್ನು ಕಣಕ್ಕಿಳಿಸಲು ಬಿಜೆಪಿ ಚಿಂತನೆ ನಡೆಸಿದೆ. ಚಿತ್ರದುರ್ಗದ ಪ್ರಮುಖ ಶ್ರೀಗಳಲ್ಲಿ ಮಾದಾರ ಚೆನ್ನಯ್ಯ ಸ್ವಾಮೀಜಿ ಕೂಡ ಒಬ್ಬರು. ಹೀಗಾಗಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಮಾದಾರ ಚೆನ್ನಯ್ಯ ಸ್ವಾಮೀಜಿಯನ್ನು ಸ್ಫರ್ಧೆಗಿಳಿಸಲು ಅಮಿತ್ ಶಾ ಚಿಂತನೆ ನಡೆಸಿದ್ದಾರೆ.

ಹೇಗಿದ್ದರೂ ಚಿತ್ರದುರ್ಗ ಪರಿಶಿಷ್ಟ ಜಾತಿಗೆ ಮೀಸಲು ಇರುವ ಲೋಕಸಭಾ ಕ್ಷೇತ್ರ. ಹೀಗಾಗಿ ಚಿತ್ರದುರ್ಗದಿಂದ ಮಾದಾರ ಚೆನ್ನಯ್ಯರನ್ನು ಕಣಕ್ಕಿಳಿಸಲು ಬಿಜೆಪಿ ಪ್ಲಾನ್ ಮಾಡಿದೆ. ಇದರಿಂದ ಶ್ರೀಗಳ ಭಕ್ತ ಸಮೂಹ ಹಾಗೂ ಅವರ ಇಡೀ ಸಮುದಾಯದ ಮತಗಳು ಬಿಜೆಪಿಗೆ ಬರಲಿವೆ ಎನ್ನುವುದು ಶಾ ಲೆಕ್ಕಾಚಾರ.
ಬಿಜೆಪಿ ನಾಯಕರ ಜೊತೆಗೆ ಒಳ್ಳೆಯ ಸಂಬಂಧ ಇಟ್ಟುಕೊಂಡಿರುವ ಮಾದಾರ ಚೆನ್ನಯ್ಯ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ನಿವಾಸದಲ್ಲಿ ನಡೆದ ದಲಿತರ ಕಡೆಗೆ ಬಿಜೆಪಿ ನಡಿಗೆ ಕಾರ್ಯಕ್ರಮದಲ್ಲೂ ಭಾಗಿಯಾಗಿದ್ದರು. ದಲಿತರಿಗೆ ಬಿಎಸ್‍ವೈ ನೀಡಿದ ಭೋಜನ ಆತಿಥ್ಯದಲ್ಲಿಯೂ ಪಾಲ್ಗೊಳ್ಳುವ ಮೂಲಕ ಬಿಜೆಪಿ ಪರ ಪರೋಕ್ಷ ನಿಲುವು ಹೊಂದಿರುವ ಸುಳಿವನ್ನು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾದಾರ ಚೆನ್ನಯ್ಯ ಸ್ವಾಮೀಜಿ, ಸಾಧು ಸಂತರಿಗೆ ಬಿಜೆಪಿ ಟಿಕೆಟ್ ನೀಡಲು ನಿರ್ಧರಿಸಿದ್ದು ನನ್ನ ಹೆಸರು ಕೇಳಿ ಬಂದರೆ ಆಗ ನೋಡೋಣ. ಕಾಲ ಹೇಗಿರುತ್ತೋ ಗೊತ್ತಿಲ್ಲ ಎಂದು ಪರೋಕ್ಷವಾಗಿ ತಮ್ಮ ಸಮ್ಮತಿಯನ್ನು ವ್ಯಕ್ತಪಡಿಸಿದರು. ನಮ್ಮ ಸಮುದಾಯದಲ್ಲಿ ಅನೇಕ ಯುವಕರು ರಾಜಕೀಯದಲ್ಲಿ ಬೆಳೆಯುವವರಿದ್ದಾರೆ. ಅವರಿಗೆಲ್ಲಾ ಮಾರ್ಗದರ್ಶನ ಮಾಡಬೇಕು. ಯುವಕರು ರಾಜಕೀಯದಲ್ಲಿ ಮುಂದೆ ಬಂದರೆ ಸಂತೋಷ ಎಂದು ರಾಜಕೀಯ ಪ್ರವೇಶದ ಅಪೇಕ್ಷೆಯನ್ನು ವ್ಯಕ್ತಪಡಿಸಿದರು.

ಉತ್ತರ ಪ್ರದೇಶದಲ್ಲಿ ಲೋಕಸಭಾ ಸದಸ್ಯರಾಗಿದ್ದ ಯೋಗಿ ಆದಿತ್ಯನಾಥ್ ಅವರನ್ನು ವಿಧಾನಸಭಾ ಚುನಾವಣೆಯಲ್ಲಿ ಬಳಸಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿ ಇಲ್ಲಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಬಿಂಬಿಸಿ ದಲಿತ ಸಮುದಾಯದ ಮತದಾರರ ಓಲೈಕೆಗೆ ಮುಂದಾಗಿದೆ. ಜೊತೆಗೆ ನಂತರ ನಡೆಯುವ ಲೋಕಸಭಾ ಚುನಾವಣೆಯಲ್ಲಿಯೂ ಇದರ ಲಾಭ ಪಡೆಯಲು ಬಿಜೆಪಿ ನಾಯಕ ಅಮಿತ್ ಶಾ ಸ್ಕೆಚ್ ಹಾಕಿದ್ದಾರೆ.ಆದರೆ ಅಮಿತ್ ಶಾ ಪ್ಲಾನ್ ಇಲ್ಲಿ ಸಕ್ಸಸ್ ಆಗುತ್ತಾ? ಶ್ರೀಗಳು ಚುನಾವಣೆಗೆ ಸ್ಪರ್ಧಿಸಲು ಅಧಿಕೃತವಾಗಿ ಒಪ್ಪಿಗೆ ಕೊಡುತ್ತಾರಾ ಎನ್ನುವುದು ಸದ್ಯದ ಪ್ರಶ್ನೆಯಾಗಿದೆ.

Facebook Comments

Sri Raghav

Admin