ರಮಾನಾಥ ರೈ ರಾಜೀನಾಮೆಗೆ ಆಗ್ರಹಿಸಿ ಸೆ.5ರಿಂದ ಬಿಜೆಪಿಯಿಂದ ‘ಮಂಗಳೂರು ಚಲೋ’ ರಥಯಾತ್ರೆ

Ramanath-Rai-BJP

ಬೆಂಗಳೂರು, ಆ.30- ಅರಣ್ಯ ಸಚಿವ ರಮಾನಾಥ ರೈ ರಾಜೀನಾಮೆಗೆ ಒತ್ತಾಯಿಸಿ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋಗೆ ಸೆಪ್ಟೆಂಬರ್ 5ರಂದು ಚಾಲನೆ ದೊರೆಯಲಿದೆ. ರಾಜ್ಯ ಸರ್ಕಾರದ ಭ್ರಷ್ಟಾಚಾರ ಹಾಗೂ ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯೆ ಪ್ರಕರಣದಲ್ಲಿ ರಮಾನಾಥ ರೈ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿ ಬಿಜೆಪಿ ಮಂಗಳೂರು ಚಲೋ ಜತೆಗೆ ಐದು ಪ್ರಮುಖ ನಗರಗಳಿಂದ ರಥಯಾತ್ರೆ ಹಮ್ಮಿಕೊಂಡಿದೆ. ಸೆ.5ರಂದು ಏಕಕಾಲದಲ್ಲಿ ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ-ಧಾರವಾಡ ಹಾಗೂ ಚಿಕ್ಕಮಗಳೂರಿನಿಂದ ರಥಯಾತ್ರೆ ನಡೆಯಲಿದೆ. ಬಿಜೆಪಿ ಯುವಮೋರ್ಚಾ ಸಾರಥ್ಯದಲ್ಲಿ ನಡೆಯಲಿರುವ ರಥಯಾತ್ರೆಗೆ ಈಗಾಗಲೇ ಭರದ ಸಿದ್ಧತೆ ನಡೆಯುತ್ತಿದ್ದು, ಸೆ.7ರಂದು ಮಂಗಳೂರಿನಲ್ಲಿ ಬೃಹತ್ ಕಾರ್ಯಕರ್ತರ ಸಮಾವೇಶ ನಡೆಯಲಿದೆ.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಪ್ರಮುಖರೆಲ್ಲರೂ ಭಾಗವಹಿಸಲಿದ್ದು, ಸುಮಾರು 2 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಪಾಲ್ಗೊಳ್ಳಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಬೆಂಗಳೂರಿನಲ್ಲಿ ರಥಯಾತ್ರೆಗೆ ಮಾಜಿ ಉಪಮುಖ್ಯಮಂತ್ರಿ ಹಾಗೂ ಮುಖಂಡ ಆರ್.ಅಶೋಕ್, ಮೈಸೂರಿನಲ್ಲಿ ಸಂಸದ ಪ್ರತಾಪ್ ಸಿಂಹ, ಶಿವಮೊಗ್ಗದಲ್ಲಿ ಕೆ.ಎಸ್.ಈಶ್ವರಪ್ಪ, ಚಿಕ್ಕಮಗಳೂರಿನಲ್ಲಿ ಶಾಸಕ ಸಿ.ಟಿ.ರವಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಜಗದೀಶ್ ಶೆಟ್ಟರ್ ಚಾಲನೆ ಕೊಡುವರು. ರಥಯಾತ್ರೆ ಜತೆಗೆ ಬೈಕ್ ರ್ಯಾಲಿಯನ್ನೂ ಹಮ್ಮಿಕೊಳ್ಳಲಾಗಿದೆ. ಒಂದೊಂದು ರಥಯಾತ್ರೆಗೆ ಸುಮಾರು 2 ಸಾವಿರ ದ್ವಿಚಕ್ರ ವಾಹನಗಳು ಸಾಥ್ ನೀಡಲಿವೆ. ಆದರೆ, ಈವರೆಗೂ ಪೊಲೀಸರು ಅನುಮತಿ ನೀಡಿಲ್ಲ ಎಂದು ತಿಳಿದುಬಂದಿದೆ.

ಈ ಹಿಂದೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಪ್ರಕರಣದಲ್ಲಿ ರಮಾನಾಥ ರೈ ಕುಮ್ಮಕ್ಕಿನಿಂದಲೇ ನಡೆದಿದೆ ಎಂಬುದು ಬಿಜೆಪಿ ಆರೋಪವಾಗಿತ್ತು. ಹಿಂದೂ ಕಾರ್ಯಕರ್ತರನ್ನು ಗುರಿಯಾಗಿಟ್ಟುಕೊಂಡು ಕೆಲವು ಮೂಲಭೂತ ಸಂಘಟನೆಗಳು ಹಲ್ಲೆ ನಡೆಸುತ್ತಿದ್ದು, ತಕ್ಷಣವೇ ಈ ಸಂಘಟನೆಗಳನ್ನು ನಿಷೇಧ ಮಾಡುವುದು ಹಾಗೂ ರೈ ರಾಜೀನಾಮೆ ಕೊಡಬೇಕೆಂಬುದು ಬಿಜೆಪಿ ಒತ್ತಾಯವಾಗಿದೆ.ಬೆಂಗಳೂರಿನಲ್ಲಿ ಆರಂಭವಾಗಲಿರುವ ರಥಯಾತ್ರೆಯು ಫ್ರೀಡಂಪಾರ್ಕ್‍ನಿಂದ ನೆಲಮಂಗಲ, ಕುಣಿಗಲ್, ಅರಸೀಕೆರೆ, ಚನ್ನರಾಯಪಟ್ಟಣ, ಹಾಸನ, ಸಕಲೇಶಪುರ, ಉಪ್ಪಿನಂಗಡಿ, ಮಾಣಿ, ಕಲ್ಲಡ್ಕ, ಬಂಟ್ವಾಳದಿಂದ ಮಂಗಳೂರು ತಲುಪಲಿದೆ.

ಮೈಸೂರಿನಿಂದ ಹೊರಡಲಿರುವ ಯಾತ್ರೆ ಇಲವಾಲ, ಹುಣಸೂರು, ಪಿರಿಯಾಪಟ್ಟಣ, ಕುಶಾಲನಗರ, ಮಡಿಕೇರಿ, ಸುಳ್ಯ, ಪುತ್ತೂರು, ಮಾಣಿ, ಕಲ್ಲಡ್ಕ ಹಾಗೂ ಬಂಟ್ವಾಳದಿಂದ ಮಂಗಳೂರಿಗೆ ಆಗಮಿಸಲಿದೆ.  ಚಿಕ್ಕಮಗಳೂರಿನಿಂದ ಹೊರಡಲಿರುವ ಯಾತ್ರೆಯು ತರೀಕೆರೆ, ಬೀರೂರು, ಕಡೂರು, ಸಖರಾಯಪಟ್ಟಣ, ಚಿಕ್ಕಮಗಳೂರು, ಆಲೂರು, ಮೂಡಿಗೆರೆ, ಕೊಟ್ಟಿಗೆಹಾರ, ಉಜಿರಿ, ಶೃಂಗೇರಿ, ಕೊಪ್ಪ, ಬಾಳೆಹೊನ್ನೂರು ಮೂಲಕ ಮಂಗಳೂರು ತಲುಪಲಿದೆ.
ಶಿವಮೊಗ್ಗದಿಂದ ರಥಯಾತ್ರೆಯು ಗಾಜನೂರು, ತೀರ್ಥಹಳ್ಳಿ, ಆಗುಂಬೆ, ಹೆಬ್ರಿ, ಕಾರ್ಕಳ, ಮಾಣಿ, ಸುಳ್ಯದಿಂದ ನೇರವಾಗಿ ಮಂಗಳೂರಿಗೆ ಆಗಮಿಸುವುದು. ಹುಬ್ಬಳ್ಳಿ-ಧಾರವಾಡದಿಂದ ಹೊರಡಲಿರುವ ಯಾತ್ರೆ ಕಲಘಟಗಿ, ಯಲ್ಲಾಪುರ, ಅಂಕೋಲ, ಕುಮುಟ, ಹೊನ್ನಾವರ, ಭಟ್ಕಳ, ಕುಂದಾಪುರ, ಉಡುಪಿಯಿಂದ ಮಂಗಳೂರು ತಲುಪುವುದು.

ಈಗಾಗಲೇ ಕಾರ್ಯಕ್ರಮಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭರದ ಸಿದ್ಧತೆಗಳು ಆರಂಭಗೊಂಡಿದ್ದು, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು, ಮಡಿಕೇರಿ, ಉತ್ತರ ಕನ್ನಡ ಜಿಲ್ಲೆಯಿಂದ ಕಾರ್ಯಕರ್ತರನ್ನು ಕರೆತರುವಂತೆ ಪಕ್ಷದ ಮುಖಂಡರಿಗೆ ಸೂಚಿಸಲಾಗಿದೆ. ಬಿಜೆಪಿಯ ಶಕ್ತಿ ಪ್ರದರ್ಶನ ಇದಾಗಲಿದ್ದು, ಅಂದು ಕಾಂಗ್ರೆಸ್ ವಿರುದ್ಧ ಕಮಲ ಪಡೆ ರಣಕಹಳೆ ಮೊಳಗಿಸಲಿದೆ.

Facebook Comments

Sri Raghav

Admin