ರಾಹುಲ್‍ಗಾಂಧಿಗೆ ದಲಿತ ಹೆಣ್ಣು : ಗೋವಿಂದ ಕಾರಜೋಳಗೆ ಸಿಎಂ ಎದುರೇಟು

ಈ ಸುದ್ದಿಯನ್ನು ಶೇರ್ ಮಾಡಿ

Siddaramaiah--01

ಮೈಸೂರು, ಆ.30-ನೆಹರು ಕುಟುಂಬದಲ್ಲಿ ಆಗಿರುವಷ್ಟು ಅಂತರ್ಜಾತಿ ವಿವಾಹಗಳು ಬೇರೆ ಕುಟುಂಬದಲ್ಲಿ ಆಗಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪರೋಕ್ಷವಾಗಿ ಮಾಜಿ ಸಚಿವ ಗೋವಿಂದ ಕಾರಜೋಳಗೆ ಟಾಂಗ್ ನೀಡಿದರು. ರಾಮಕೃಷ್ಣ ನಗರದಲ್ಲಿರುವ ತಮ್ಮ ನಿವಾಸದಲ್ಲಿಂದು ತಮ್ಮನ್ನು ಭೇಟಿ ಮಾಡಿದ ಪತ್ರಕರ್ತರೊಂದಿಗೆ ಮಾತನಾಡಿದ ಸಿಎಂ, ಎಐಸಿಸಿ ಉಪಾಧ್ಯಕ್ಷ ರಾಹುಲ್‍ಗಾಂಧಿಗೆ ದಲಿತ ಹೆಣ್ಣು ಕೊಡಲು ಸಿದ್ಧರಿದ್ದೇವೆ. ಅವರು ವಿವಾಹವಾಗಲು ಸಿದ್ಧರಿರುವರೆ ಎಂಬ ಬಿಜೆಪಿ ಮುಖಂಡ ಮಾಜಿ ಸಚಿವ ಗೋವಿಂದ ಕಾರಜೋಳ ಅವರ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಇಂದಿರಾಗಾಂದಿ, ರಾಜೀವ್‍ಗಾಂಧಿಯವರು ಅನ್ಯಧರ್ಮೀಯರನ್ನು ಮದುವೆಯಾಗಿದ್ದಾರೆ. ಬಿಜೆಪಿ ನಾಯಕರಿಗೆ ಈ ಬಗ್ಗೆ ಪ್ರಶ್ನಿಸುವ ನೈತಿಕತೆ ಇಲ್ಲ. ಅವರಿಂದ ಪಾಠ ಕಲಿಯುವ ಅಗತ್ಯವೂ ನಮಗಿಲ್ಲ ಎಂದು ಹೇಳಿದರು.

ಐಟಿ ದಾಳಿಗೆ ಖಂಡನೆ:

ಕೇವಲ ಕಾಂಗ್ರೆಸ್ ನಾಯಕರನ್ನು ಗುರಿಯಾಗಿಸಿಕೊಂಡು ಐಟಿ ದಾಳಿ ನಡೆಸುತ್ತಿರುವುದು ರಾಜಕೀಯ ದುರುದ್ದೇಶದಿಂದ ಕೂಡಿದೆ ಎಂದು ಇದೇ ವೇಳೆ ಖಾರವಾಗಿ ನುಡಿದರು. ಸಚಿವ ಡಿ.ಕೆ.ಶಿವಕುಮಾರ್ ಅವರ ಆಪ್ತ ವಿಜಯ ಮಳಗುಂದ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿರುವುದನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದರು.

ವಿಧಾನಸಭಾ ಚುನಾವಣೆಗೂ ಮುನ್ನ ಕಾಂಗ್ರೆಸ್ ಪಕ್ಷದವರ ಆತ್ಮಸ್ಥೈರ್ಯ ಕುಗ್ಗಿಸಲು ಐಟಿ ದಾಳಿ ನಡೆಸಲಾಗುತ್ತಿದೆ. ಇದರಿಂದ ನಾವೇನೂ ಧೃತಿಗೆಡುವುದೂ ಇಲ್ಲ. ಬಿಜೆಪಿಯವರು ಅಂದುಕೊಂಡಂತೆ ಏನೂ ಆಗುವುದಿಲ್ಲ ಎಂದು ಹೇಳಿದರು.
ದಲಿತರ ಬೀಗತನ; ಬಿಜೆಪಿಗೆ ಡಿಕೆಶಿ ತಿರುಗೇಟು :

DKS-011

ಕನಕಪುರ, ಆ.30- ನಿಮಗೆ ತಾಕತ್ತಿದ್ದರೆ ನಮ್ಮ ಮುಖ್ಯಮಂತ್ರಿಗಳು ಹಾಕಿರುವ ದಲಿತರ ಮನೆಯಲ್ಲಿ ಬೀಗತನದ ಸವಾಲನ್ನು ಸ್ವೀಕರಿಸಿ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಬಿಜೆಪಿಯವರಿಗೆ ತಿರುಗೇಟು ನೀಡಿದರು.ತಾಲೂಕಿನ ಕಬ್ಬಾಳದಲ್ಲಿರುವ ಕಬ್ಬಾಳಮ್ಮ ದೇವಿಯ ದರ್ಶನ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಲಿತರ ಮೇಲೆ ಕಾಳಜಿ ಇದ್ದರೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್‍ಗಾಂಧಿಯವರು ದಲಿತ ಹೆಣ್ಣು ಮಗಳನ್ನು ವಿವಾಹವಾಗುವಂತೆ ಬಿಜೆಪಿ ಮುಖಂಡರು ಹೇಳಿದ್ದರು. ಮೊದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಕಿರುವ ಬೀಗತನದ ಸವಾಲನ್ನು ಬಿಜೆಪಿಯವರು ಸ್ವೀಕರಿಸಲಿ ಎಂದು ನೇರವಾಗಿ ಸವಾಲು ಹಾಕಿದರು.

ಬಿ.ಎಸ್.ಯಡಿಯೂರಪ್ಪ ಅವರಿಗೆ ಇಷ್ಟು ದಿನ ದಲಿತರ ಮೇಲೆ ಇಲ್ಲದ ಕಾಳಜಿ ಈಗ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ ಸಚಿವರು, ದಲಿತರಿಗೆ ಭೋಜನ ಕೂಟ ಏರ್ಪಡಿಸಿರುವುದು ರಾಜಕೀಯ ನಾಟಕ. ದಲಿತರ ಮೇಲೆ ನಿಜವಾದ ಕಾಳಜಿ ಇದ್ದರೆ ಅವರೊಂದಿಗೆ ಬೀಗತನ ಮಾಡಿ ಎಂದು ಹೇಳಿದರು.

ಐಟಿ ದಾಳಿಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಎಲ್ಲ ಆರೋಪಗಳಿಂದ ಮುಕ್ತಿಗೊಳಿಸುವಂತೆ ಸ್ಥಳೀಯ ಕಾರ್ಯಕರ್ತರು ಹಾಗೂ ಮುಖಂಡರು ಕಬ್ಬಾಳಮ್ಮನಿಗೆ ಹರಕೆ ಹೊತ್ತುಕೊಂಡಿದ್ದರು. ಈ ಹಿನ್ನೆಲೆಯಲ್ಲಿ ಸಚಿವ ಡಿ.ಕೆ.ಶಿವಕುಮಾರ್ ತಮ್ಮ ಕುಟುಂಬ ಸಮೇತರಾಗಿ ಕಬ್ಬಾಳಮ್ಮ ದೇವಾಲಯಕ್ಕೆ ಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಇದಕ್ಕೂ ಮುನ್ನ ತಮ್ಮ ಮನೆದೇವರಾದ ಕೆಂಕೆರಮ್ಮ ಸನ್ನಿಧಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು.

Facebook Comments

Sri Raghav

Admin