ಹಾರ್ವೆ ಚಂಡಮಾರುತದ ರುದ್ರನರ್ತನಕ್ಕೆ 30ಕ್ಕೂ ಹೆಚ್ಚು ಮಂದಿ ಬಲಿ

Texas-Hurricane

ಹ್ಯೂಸ್ಟನ್, ಆ.30-ಅಮೆರಿಕದ ಟೆಕ್ಶಾಸ್‍ನಲ್ಲಿ ಹಾರ್ವೆ ಚಂಡಮಾರುತದ ರೌದ್ರಾವತಾರ ಮುಂದುವರಿದಿದ್ದು, ಭಾರೀ ಮಳೆ ಮತ್ತು ಪ್ರವಾಹಕ್ಕೆ ಸಿಲುಕಿ 30ಕ್ಕೂ ಹೆಚ್ಚು ಮಂದಿ ಮೃತಪಟ್ಟು. ಅನೇಕರು ಗಾಯಗೊಂಡಿದ್ದಾರೆ. ನಾಪತ್ತೆಯಾದವರ ಪತ್ತೆಗಾಗಿ ತೀವ್ರ ಶೋಧ ನಡೆಯುತ್ತಿದೆ.  ಚಂಡಮಾರುತದಿಂದ ಅಮೆರಿಕದ ನಾಲ್ಕನೇ ಅತಿದೊಡ್ಡ ನಗರವಾದ ಹ್ಯೂಸ್ಟನ್‍ನಲ್ಲಿ ಜನವಸತಿ ಪ್ರದೇಶಗಳು ಮತ್ತು ಹೆದ್ದಾರಿಗಳು ನೀರಿನಲ್ಲಿ ಮುಳುಗಡೆಯಾಗಿದ್ದು, ಲಕ್ಷಾಂತರ ಮಂದಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಟೆಕ್ಸಾಸ್‍ನಲ್ಲಿ ಪ್ರವಾಹದಿಂದ ಪಾರಾಗಲು ವ್ಯಾನಿನನಲ್ಲಿ ತೆರಳುತ್ತಿದ್ದ ನಾಲ್ವರು ಮಕ್ಕಳೂ ಸೇರಿದಂತೆ ಒಂದೇ ಕುಟುಂಬದ ಆರು ಮಂದಿ ಜಲಸಮಾಧಿಯಾಗಿದ್ದಾರೆ. ಹ್ಯೂಸ್ಟನ್ ಉತ್ತರ ಭಾಗದಲ್ಲಿ ಮನೆಯೊಂದರ ಮೇಲೆ ಓಕ್ ಮರ ಬಿದ್ದು ಇಬ್ಬರು ಮೃತಪಟ್ಟಿದ್ದಾರೆ.  ಕಳೆದ ನಾಲ್ಕು ದಿನಗಳಿಂದ ಚಂಡಮಾರುತದ ಪ್ರಭಾವದಿಂದ ಟೆಕ್ಸಾಸ್‍ನಲ್ಲಿ ಭೀಕರ ಮಳೆಯಿಂದ ಜಲಪ್ರಳಯ ಸೃಷ್ಟಿಯಾಗಿದ್ದು, ರಸ್ತೆಗಳಲ್ಲಿ ಎದೆಮಟ್ಟದ ನೀರು ನಿಂತಿದೆ. ರಾಜ್ಯದಾದ್ಯಂತ ಸುಮಾರು 1.3 ಕೋಟಿ ಮಂದಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ನೀರಿನ ಮಟ್ಟ ಏರುತ್ತಿರುವ ಕಾರಣ ಅನೇಕರು ಮನೆಗಳ ಮೇಲ್ಧಾವಣಿ ಏರಿ ಕುಳಿತಿದ್ದಾರೆ. ತಾತ್ಕಾಲಿಕ ಬಿಡಾರಗಳಲ್ಲಿ ಆಶ್ರಯ ಪಡೆದಿರುವ ಜನರು ರಕ್ಷಣಾ ಹೆಲಿಕಾಪ್ಟರ್ ಅಥವಾ ದೋಣಿಗಳನ್ನು ಎದುರು ನೋಡುತ್ತಿದ್ದಾರೆ. ಹಾರ್ವೆಯಿಂದಾಗಿ ವಾಯುವ್ಯ ಟೆಕ್ಸಾಸ್ ನದಿಯಂತಾಗಿದೆ ಎಂದು ರೆಡ್‍ಕ್ರಾಸ್ ಸಂಸ್ಥೆಯ ವಿಪತ್ತು ನಿರ್ವಹಣಾ ಅಧಿಕಾರಿ ಬ್ರಾಡ್ ಕಿಸರ್‍ಮ್ಯಾನ್ ಹೇಳಿದ್ದಾರೆ.  ರಕ್ಷಣೆ ಮತ್ತು ಪರಿಹಾರ ಕಾರ್ಯಗಳು ಯುದ್ಧೋಪಾದಿಯಲ್ಲಿ ಸಾಗಿವೆ.

ಈ ಪ್ರಾಂತ್ಯದಲ್ಲಿ ಮುಂದಿನ ವಾರದವರೆಗೂ ಹಾರ್ವೆ ಅಬ್ಬರ ಮುಂದುವರಿಯುವ ಸಾಧ್ಯತೆ ಇದ್ದು, ಪ್ರವಾಹದ ಮಟ್ಟ ಮತ್ತಷ್ಟು ಏರಿಕೆಯಾಗುವ ಭೀತಿ ಇದೆ. ಅನಾಹುತಗಳೊಂದಿಗೆ ಸಾವು-ನೋವಿನ ಸಂಖ್ಯೆಯೂ ಹೆಚ್ಚಾಗುವ ಆತಂಕವೂ ಎದುರಾಗಿದೆ.

Facebook Comments

Sri Raghav

Admin