33,000 ಪೌರಕಾರ್ಮಿಕರನ್ನು ಖಾಯಂ ಮಾಡದಿದ್ದರೆ ಉಗ್ರ ಪ್ರತಿಭಟನೆಯ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

BBMP

ಬೆಂಗಳೂರು, ಆ.30-ಏಳುನೂರು ಜನಕ್ಕೆ ಒಬ್ಬ ಪೌರಕಾರ್ಮಿಕ ಎಂಬ ಸರ್ಕಾರದ ಹೊಸ ನಿಯಮದಿಂದ ಸುಮಾರು 22 ಸಾವಿರ ಪೌರಕಾರ್ಮಿಕರ ಬದುಕು ಅತಂತ್ರಗೊಳ್ಳುತ್ತದೆ. ಹಾಗಾಗಿ ಹಾಲಿ ಇರುವ 33 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಬೇಕು ಮತ್ತು ನಗರದಲ್ಲಿ ಹೆಚ್ಚುತ್ತಿರುವ ಸಾಂಕ್ರಾಮಿಕ ರೋಗ ತಡೆಗೆ ಅಗತ್ಯ ಕ್ರಮಕೈಗೊಳ್ಳಬೇಕೆಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಒತ್ತಾಯಿಸಿದರು.

ಪಾಲಿಕೆ ಸಭೆಯಲ್ಲಿ ಮಾತನಾಡಿದ ಅವರು, ಸೆಪ್ಟೆಂಬರ್ 7ನೆ ತಾರೀಖಿನಿಂದ 700 ಜನಕ್ಕೆ ಒಬ್ಬ ಪೌರಕಾರ್ಮಿಕ ಎಂಬ ಹೊಸ ನಿಯಮವನ್ನು ಜಾರಿಗೆ ತಂದು 10 ಸಾವಿರ ಪೌರಕಾರ್ಮಿಕರ ನೇಮಕಕ್ಕೆ ಸರ್ಕಾರ ನಿರ್ಧರಿಸಿದೆ. ಪ್ರಸ್ತುತ ಗುತ್ತಿಗೆದಾರರ ಬಳಿ 32 ಸಾವಿರ ಪೌರಕಾರ್ಮಿಕರಿದ್ದಾರೆ. ಹೊಸ ನಿಯಮದಂತೆ 700 ಜನರಿಗೆ ಒಬ್ಬ ಪೌರಕಾರ್ಮಿಕ ಎಂದರೆ ಸುಮಾರು 22 ಸಾವಿರ ಮಂದಿ ಪೌರಕಾರ್ಮಿಕರು ಅತಂತ್ರರಾಗುತ್ತಾರೆ. ಹಾಗಾಗಿ ಈ ಧೋರಣೆ ತಪ್ಪಿಸಿ ಎಲ್ಲ 32 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸಿ ಎಂದು ಆಗ್ರಹಿಸಿದರು.

BB-Pto--02

ನಗರ ಬೆಳೀತಾ ಇದೆ. ಜನಸಂಖ್ಯೆಗೆ ಅನುಗುಣವಾಗಿ ಪೌರಕಾರ್ಮಿಕರು ಇರಬೇಕು. ಎಷ್ಟು ಮಂದಿ ಇರಬೇಕೆಂಬುದನ್ನು ಪಾಲಿಕೆಯಲ್ಲಿ ನಿರ್ಣಯ ಕೈಗೊಳ್ಳಬೇಕು. ಆದರೆ ಸರ್ಕಾರ ಏಕಾಏಕಿ ಹೊಸ ನಿಯಮ ತಂದಿರುವುದು ಸರಿಯಲ್ಲ. ಪೌರಕಾರ್ಮಿಕರ ನೇಮಕಾತಿಗೆ 45 ವರ್ಷ ವಯೋಮಿತಿ ನಿಗದಿಪಡಿಸಿದ್ದೀರಾ, 50 ವರ್ಷದಿಂದ ಕೆಲಸ ನಿರ್ವಹಿಸುತ್ತಿರುವವರ ಗತಿ ಏನು? ಈ ವಿಷಯ ಸರ್ಕಾರದ ಗಮನಕ್ಕೆ ತನ್ನಿ ಎಂದರು. ಹೊರಗುತ್ತಿಗೆ ರದ್ದುಪಡಿಸುವಂತೆ ಸರ್ಕಾರ ಸೂಚಿಸಿದೆ. ಇದು ಕೂಡ ಸೂಕ್ತವಲ್ಲ ಎಂದು ಹೇಳಿದರು.

ನಗರದಲ್ಲಿ ಎಚ್1ಎನ್1, ಡೇಂಘಿ ರೋಗ ಉಲ್ಬಣಗೊಂಡಿದೆ. ನಾಗಶೆಟ್ಟಿಹಳ್ಳಿಯಲ್ಲಿ ನಿನ್ನೆಯಷ್ಟೆ ಗರ್ಭಿಣಿಯೊಬ್ಬರು ಡೇಂಘಿಯಿಂದ ಮೃತಪಟ್ಟಿದ್ದಾರೆ. ಇನ್ನೆಷ್ಟು ಅಮಾಯಕರು ಬಲಿಯಾಗಿದ್ದರೋ ಇವೆಲ್ಲದರ ಬಗ್ಗೆ ಮಾಹಿತಿ ತರಿಸಿ ಎಂದು ರೆಡ್ಡಿ ಒತ್ತಾಯಿಸಿದರು.  ಸಾಂಕ್ರಾಮಿಕ ರೋಗಗಳು ಹೆಚ್ಚಾಗಿದ್ದರೂ ಆರೋಗ್ಯ ಅಧಿಕಾರಿಗಳು ಯಾವುದೇ ಮುನ್ನೆಚ್ಚರಿಕೆ ಕ್ರಮಕೈಗೊಂಡಿಲ್ಲ. ಎಷ್ಟು ಮಂದಿಗೆ ಎಚ್1ಎನ್1, ಡೇಂಘಿ ಬಂದಿದೆ ಎಂಬ ವರದಿ ತರಿಸಿಕೊಡಿ. ನಾವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.

BB-Protest--01

ಈ ವೇಳೆ ಮುಖ್ಯ ಆರೋಗ್ಯಾಧಿಕಾರಿ ಡಾ.ಲೋಕೇಶ್ ಅವರಿಗೆ ಮೇಯರ್ ಜಿ.ಪದ್ಮಾವತಿ ಈ ಕುರಿತು ವರದಿ ನೀಡುವಂತೆ ಸೂಚಿಸಿದರು.
ನಗರದಲ್ಲಿ ಎಷ್ಟು ಕಾಯಿಲೆ ಇದೆ ಎಂದು ಆರೋಗ್ಯ ಅಧಿಕಾರಿಗಳು ಹೇಳ್ತಾರೆ, ಆದ್ರೆ ರೋಗಿಗಳು ಎಷ್ಟು ಮಂದಿ ಎಂಬ ಮಾಹಿತಿ ಕೊಡಲ್ಲ ಎಂದು ಪದ್ಮನಾಭರೆಡ್ಡಿ ಲೇವಡಿ ಮಾಡಿದರು. ಈ ವೇಳೆ ಡಾ.ಲೋಕೇಶ್ ಮಾತನಾಡಿ, ನಮ್ಮಲ್ಲಿ ಹೊಸ ಸಾಫ್ಟ್‍ವೇರ್ ಅಭಿವೃದ್ದಿ ಪಡಿಸಿದ್ದೇವೆ. ಎಲ್ಲಾ ಖಾಸಗಿ ಆಸ್ಪತ್ರೆಗಳು ಪ್ರತಿ ಸೋಮವಾರ ರೋಗಿಗಳ ವಿವರವನ್ನು ಅದರಲ್ಲಿ ನಮೂದಿಸುತ್ತಾರೆ. ಅದರ ಪ್ರಕಾರ ಈವರೆಗೆ ಸುಮಾರು 4 ಸಾವಿರ ಡೇಂಘಿ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೆ ರೆಡ್ಡಿ, ನೀವು ಸುಳ್ಳು ಹೇಳಬೇಡಿ ಸೊಳ್ಳೆಗಳು ಎಷ್ಟಿವೆ ಎಂದು ಹೇಳ್ತೀರ ಎಂದು ರೇಗಿಸಿದರು.  ಮಣಿಪಾಲ್ ಆಸ್ಪತ್ರೆಯೊಂದರಲ್ಲೇ 400ಕ್ಕೂ ಹೆಚ್ಚು ಡೇಂಘಿ ರೋಗಿಗಳಿದ್ದಾರೆ. ನಿಮ್ಮ ಪ್ರಕಾರ ನಗರದಲ್ಲಿ 500 ಆಸ್ಪತ್ರೆಗಳಿವೆ ಅಂತೀರಾ, ಹಾಗಾದ್ರೆ ರೋಗಿಗಳು ಎಷ್ಟು ಮಂದಿ ಇರುತ್ತಾರೆ ನೀವೇ ಹೇಳಿ ಎಂದರು.
ನೀವು ತಪ್ಪು ಮಾಹಿತಿ ನೀಡಿದರೂ ನಮ್ಮ ಆಯುಕ್ತರು ಧೃತರಾಷ್ಟ್ರ ಇದ್ದಂತೆ. ಧೃತರಾಷ್ಟ್ರನಿಗೆ ಪುತ್ರ ವ್ಯಾಮೋಹ ಇತ್ತು. ಮಕ್ಕಳು ಏನೇ ತಪ್ಪು ಮಾಡಿದರು ಮುಚ್ಚಿಟ್ಟುಕೊಳ್ಳುತ್ತಿದ್ದರು. ಅದೇ ರೀತಿ ನಮ್ಮ ಕಮೀಷನರ್‍ಗೆ ಅಧಿಕಾರಿಗಳ ಕಾಪಾಡೋ ವ್ಯಾಮೋಹ ಎಂದು ಛೇಡಿಸಿದರು.

BBMp--Pro--03

ಕಮೀಷನ್ ವಿರುದ್ಧವೂ ತನಿಖೆಯಾಗಲಿ:

ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಬಿಜೆಪಿ ಸದಸ್ಯ ಮಂಜುನಾಥ್‍ರಾಜು ಅವರು, ನಗರದಲ್ಲಿ 7ತ್ಯಾಜ್ಯ ಸಂಸ್ಕರಣಾ ಘಟಕಗಳಿವೆ. ಅಲ್ಲಿ ಶೇ.100ರಷ್ಟು ತ್ಯಾಜ್ಯ ಸಂಸ್ಕರಣೆಯಾಗುತ್ತಿದೆ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ಹಾಗೂ ವಿಶೇಷ ಆಯುಕ್ತ ಸರ್ಫರಾಜ್ ಖಾನ್ ಮಾಹಿತಿ ನೀಡಿದ್ದಾರೆ. ಇದು ಸುಳ್ಳು. ನಿಗದಿಯಂತೆ ಅಲ್ಲಿ ಸಂಸ್ಕರಣೆ ಆಗ್ತಿಲ್ಲ. ನಾಳೇನೇ ನಮ್ಮನ್ನೆಲ್ಲ ಕರೆದೊಯ್ದು ತಪಾಸಣೆ ನಡೆಸಿ ಸುಳ್ಳು ಮಾಹಿತಿ ನೀಡಿರುವ ಕಮೀಷನರ್ ವಿರುದ್ಧ ತನಿಖೆಯಾಗಲಿ ಎಂದು ಆಗ್ರಹಿಸಿದರು.

ಕಸವಿಲೇವಾರಿ ಘಟಕಗಳಲ್ಲಿ ಯಾವುದೇ ರಕ್ಷಣಾತ್ಮಕ ಕ್ರಮಕೈಗೊಂಡಿಲ್ಲ. ಅಗ್ನಿ ನಿಯಂತ್ರಕ ವ್ಯವಸ್ಥೆ ಮಾಡಿಲ್ಲ. ಈಗಾಗಲೇ ಎರಡು ಕಡೆ ಅನಾಹುತ ಆಗಿದೆ ಎಂದು ಹೇಳಿದರು. ಕಸ ಸಂಸ್ಕರಣೆ ಮಾಡುವಾಗ ಬರುವ ಲಿಕೆಟ್ ಅನ್ನು ಏನು ಮಾಡಲಾಗುತ್ತಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಬಿಡಬ್ಲ್ಯುಎಸ್‍ಎಸ್‍ಬಿ, ತ್ಯಾಜ್ಯ ಸಂಸ್ಕರಣಾ ಘಟಕಗಳಲ್ಲಿ ಒಂದು ಲೀಟರ್ ಲಿಕೆಟ್‍ಗೆ 4 ರೂ. ಕೊಡುತ್ತಿದ್ದೀರಾ. ತ್ಯಾಜ್ಯ ಸಂಸ್ಕರಣೆ ಅವ್ಯವಸ್ಥೆಯಿಂದ ಕೂಡಿದೆ. ಇದಕ್ಕೆ ಉತ್ತರ ಕೊಡಿ ಎಂದು ಮಂಜುನಾಥರಾಜು ಒತ್ತಾಯಿಸಿದರು.

ಮಾಜಿ ಮೇಯರ್ ಕಟ್ಟೆ ಸತ್ಯನಾರಾಯಣ ಮಾತನಾಡಿ, ಈಗ ಇರುವ ಕಾಂಪ್ಯಾಕ್ಟರ್‍ಗಳೇ ಸರಿಯಾಗಿ ಕೆಲಸ ಮಾಡುತ್ತಿಲ್ಲ. ಇದರ ಜೊತೆಗೆ 600 ಕೋಟಿ ರೂ.ವೆಚ್ಚ ಮಾಡಿ ಯಂತ್ರೋಪಕರಣ ಖರೀದಿ ಮಾಡುತ್ತಿದ್ದೀರಾ, ಇದು ಯಾವ ಪುರುಷಾರ್ಥಕ್ಕೆ ಎಂದು ಹೇಳಿದರು. ನಮ್ಮಲ್ಲಿ ಟೀಚರ್‍ಗಳಿಗೆ ಸಂಬಳ ಕೊಡಲು ಹಣವಿಲ್ಲ, ಆದರೆ ವಾರ್ಡ್‍ಗೊಬ್ಬ ಕಸವಿಲೇವಾರಿ ಉಸ್ತುವಾರಿ ಎಂಜಿನಿಯರ್‍ಗಳನ್ನು ನೇಮಿಸಿದ್ದೀರಾ. ತಲಾ 16 ಸಾವಿರ ಸಂಬಳ ಕೊಡುತ್ತಿದ್ದೀರಾ ಇದರ ಅಗತ್ಯವಿಲ್ಲ. ಕೂಡಲೇ ಈ ಎಂಜಿನಿಯರ್‍ಗಳನ್ನು ತೆಗೆದುಹಾಕಿ ಎಂದು ಆಗ್ರಹಿಸಿದರು.

33 ಸಾವಿರ ಪೌರಕಾರ್ಮಿಕರನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಪಟ್ಟು ಹಿಡಿದು ಬಾವಿಗಿಳಿದು ಪ್ರತಿಭಟನೆ ನಡೆಸಿದರು. ಈ ವೇಳೆ ಆಡಳಿತ ಮತ್ತು ಪ್ರತಿಪಕ್ಷದ ಸದಸ್ಯರ ನಡುವೆ ಗಲಾಟೆ ನಡೆಯಿತು. ಹಾಗಾಗಿ ಮಧ್ಯಾಹ್ನಕ್ಕೆ ಸಭೆಯನ್ನು ಮುಂದೂಡಲಾಯಿತು.

ಉಗ್ರ ಪ್ರತಿಭಟನೆ: ಬಿಜೆಪಿ ಎಚ್ಚರಿಕೆ : 

ಬೆಂಗಳೂರು, ಆ.30-ಮೂವತ್ತಮೂರು ಸಾವಿರ ಪೌರಕಾರ್ಮಿಕರನ್ನು ಖಾಯಂ ಮಾಡದೆ ಇದ್ದರೆ ನಾವು ನಗರಾದ್ಯಂತ ಉಗ್ರ ಪ್ರತಿಭಟನೆ ಮಾಡುತ್ತೇವೆ ಎಂದು ಪ್ರತಿಪಕ್ಷದ ನಾಯಕ ಪದ್ಮನಾಭರೆಡ್ಡಿ ಎಚ್ಚರಿಸಿದರು. ಪಾಲಿಕೆ ಸಭೆಯನ್ನು ಮುಂದೂಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪೌರಕಾರ್ಮಿಕರಿಗೆ ನಾವು ಅನ್ಯಾಯವಾಗಲು ಬಿಡಲ್ಲ. ಅವರೊಂದಿಗೆ ನಾವಿದ್ದೇವೆ ಎಂದು ಹೇಳಿದರು. ಈಗಾಗಲೇ ಕೌನ್ಸಿಲ್ ಸಭೆಯಲ್ಲಿ ಹೋರಾಟ ಮಾಡಿದ್ದೇವೆ. ಒಂದು ವೇಳೆ 33 ಸಾವಿರ ಪೌರಕಾರ್ಮಿಕರನ್ನು ಖಾಯಂ ಮಾಡದೆ ಹೋದರೆ ನವು ನಗರಾದ್ಯಂತ ಪ್ರತಿಭಟನೆ ಮಾಡುತ್ತೇವೆ ಎಂದು ತಿಳಿಸಿದರು.

Facebook Comments

Sri Raghav

Admin