ನಾಳೆ ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ

ಈ ಸುದ್ದಿಯನ್ನು ಶೇರ್ ಮಾಡಿ

Minister-Cabinet

ಬೆಂಗಳೂರು, ಆ.31- ಬಹು ನಿರೀಕ್ಷಿತ ರಾಜ್ಯ ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯುವ ಸಾಧ್ಯತೆ ಇದೆ. ನೂತನ ಸಚಿವರಾಗಿ ಎಚ್.ಎಂ.ರೇವಣ್ಣ, ಗೀತಾ ಮಹದೇವ ಪ್ರಸಾದ್, ಆರ್.ಬಿ.ತಿಮ್ಮಾಪುರ್ ಅವರು ರಾಜಭನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದುಬಂದಿದೆ.ಷಡಕ್ಷರಿ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ ಎಂದು ಹೇಳಲಾಗುತ್ತಿತ್ತಾದರೂ ಕೊನೆ ಕ್ಷಣದಲ್ಲಿ ಗೀತಾ ಮಹದೇವ ಪ್ರಸಾದ್‍ಗೆ ಈ ಸ್ಥಾನ ಸಿಗುವ ಸಾಧ್ಯತೆ ಹೆಚ್ಚಾಗಿದ್ದು, ಗೀತಾ ಮಹದೇವ ಪ್ರಸಾದ್ ಅಥವಾ ಷಡಕ್ಷರಿ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ದೊರೆಯಲಿದೆ.

ಒಟ್ಟಾರೆ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಯಾದರೆ ನಾಳೆ ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರು ಸಂಜೆ 5 ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಕಳೆದ ಒಂದು ತಿಂಗಳಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಪುಟ ವಿಸ್ತರಣೆಗೆ ಸಾಕಷ್ಟು ಕಸರತ್ತು ನಡೆಸಿದ್ದರು. ಹಲವರ ಹೆಸರುಗಳು ಪ್ರಸ್ತಾಪವಾಗಿದ್ದವು. ಕಳೆದ ಆಗಸ್ಟ್ 21ರಂದೇ ಸಂಪುಟ ವಿಸ್ತರಣೆಗೆ ಎಲ್ಲ ಸಿದ್ಧತೆಗಳು ನಡೆದಿದ್ದರೂ ಕೊನೆ ಕ್ಷಣದಲ್ಲಿ ಮುಂದೂಡಲಾಗಿತ್ತು. ಆದರೆ, ನಿನ್ನೆ ರಾಜ್ಯಕ್ಕೆ ಆಗಮಿಸಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಉಸ್ತುವಾರಿ ವೇಣುಗೋಪಾಲ್ ಅವರ ಅನುಮತಿ ಪಡೆದು ಅಂತಿಮವಾಗಿ ಸಂಪುಟ ಸೇರುವವರ ಹೆಸರುಗಳನ್ನು ನಿರ್ಧರಿಸಲಾಗಿದ್ದು, ಎಚ್.ಎಂ.ರೇವಣ್ಣ, ಮಹದೇವ ಪ್ರಸಾದ್, ಆರ್.ವಿ.ತಿಮ್ಮಾಪುರ್ ಸಂಪುಟ ಸೇರುವುದು ಬಹುತೇಕ ಖಚಿತವಾಗಿದೆ.

ಕೊನೆ ಕ್ಷಣದಲ್ಲಿ ಬದಲಾವಣೆಗಳಾದರೂ ಆಶ್ಚರ್ಯವಿಲ್ಲ. ಕುರುಬ ಸಮುದಾಯದಿಂದ ಎಚ್.ಜಿ.ಗೋವಿಂದಪ್ಪ, ಶಿವಳ್ಳಿ, ಅವರ ಹೆಸರು ಕೇಳಿಬಂದಿತ್ತಾದರೂ ಹಿರಿಯ ಕಾಂಗ್ರೆಸ್ ಮುಖಂಡರಾದ ರೇವಣ್ಣ ಅವರಿಗೆ ಸಚಿವ ಸ್ಥಾನ ನೀಡಬೇಕೆಂಬ ಒತ್ತಾಯ ಹೆಚ್ಚಾಗಿತ್ತು. ಪ್ರದೇಶ್ ಕುರುಬರ ಸಂಘದವರು ಕೂಡ ರೇವಣ್ಣ ಪರ ಶಿಫಾರಸು ಮಾಡಿದ್ದರು.  ರೇವಣ್ಣ ಅವರು ಸಚಿವರಾದರೆ ಮೇಲ್ಮನೆ ಸಭಾನಾಯಕರಾಗಿ ಆಯ್ಕೆಯಾಗಲಿದ್ದಾರೆ. ಗೀತಾ ಮಹದೇವ ಪ್ರಸಾದ್‍ಗೆ ಸಚಿವ ಸ್ಥಾನ ದೊರೆತರೆ ಸಂಪುಟದಲ್ಲಿ ಇಬ್ಬರು ಮಹಿಳೆಯರಿಗೆ ಸ್ಥಾನ ದೊರೆತಂತಾಗುತ್ತದೆಯಲ್ಲದೆ ಲಿಂಗಾಯಿತರಿಗೆ ಮಹಿಳೆಯರಿಗೆ ಆದ್ಯತೆ ನೀಡಿದಂತಾಗುತ್ತದೆ ಎಂಬುದು ರಾಜಕೀಯ ಲೆಕ್ಕಾಚಾರವಾಗಿದೆ.

ಮುಂಬರುವ ಚುನಾವಣೆ ಗಮನದಲ್ಲಿಟ್ಟುಕೊಂಡು ಸಂಪುಟ ವಿಸ್ತರಣೆ ಮಾಡಲಾಗಿದೆ. ಷಡಕ್ಷರಿ ಅವರು ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರ ಬೆಂಬಲಿತ ಅಭ್ಯರ್ಥಿ ಎಂಬ ಕಾರಣಕ್ಕೆ ಅವರನ್ನು ಕೈ ಬಿಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅವರ ಅಭಿಮಾನಿಗಳು ತೀವ್ರ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.  ಈ ನಡುವೆ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂಪುಟ ವಿಸ್ತರಣೆ ಖಚಿತ ಎಂದು ತಿಳಿಸಿದರು. ಆದರೆ ಯಾರೂ ಸಂಪುಟಕ್ಕೆ ಸೇರುತ್ತಾರೆ ಎಂ?ುದರ ಗುಟ್ಟನ್ನು ಬಿಟ್ಟುಕೊಡಲಿಲ್ಲ.

Facebook Comments

Sri Raghav

Admin