ಲಕ್ಷ್ಮಿ ಹೆಬ್ಬಾಳ್ಕರ್ ಮೇಡಂ ನಿಮಗೆ ಇದು ಬೇಕಿತ್ತಾ..?

ಈ ಸುದ್ದಿಯನ್ನು ಶೇರ್ ಮಾಡಿ

Laxmi-Hebbalkar

ಬೆಳಗಾವಿ, ಆ.31- ಇತ್ತ ನಾಡಧ್ವಜ, ಹಿಂದಿ ಹೇರಿಕೆ ವಿರೋಧ, ಕನ್ನಡ ಕಡ್ಡಾಯದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುತ್ತಿದ್ದಾರೆ. ಅತ್ತ ಗಡಿನಾಡು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿದರೆ ಎಲ್ಲರಿಗಿಂತ ಮೊದಲು ನಾನು ಜೈ ಮಹಾರಾಷ್ಟ್ರ ಎಂದು ಹೇಳುವೆ ಎಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮಿ ಹೆಬ್ಬಾಳ್ಕರ್ ವಿವಾದಾತ್ಮಕ ಹೇಳಿಕೆ ನೀಡಿ ಕಿಡಿಹೊತ್ತಿಸಿದ್ದಾರೆ. ಗಡಿನಾಡು ಬೆಳಗಾವಿ ಹಾಗೂ ಮಹಾರಾಷ್ಟ್ರ ಗಡಿ ವಿವಾದ ನ್ಯಾಯಾಲಯದಲ್ಲಿದೆ. ಆದರೆ, ಆ.27ರಂದು ಬಸರಿಕಟ್ಟೆ ಗಣೇಶೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಲಕ್ಷ್ಮಿ ಹೆಬ್ಬಾಳ್ಕರ್, ಸುಪ್ರೀಂಕೋರ್ಟ್‍ನಲ್ಲಿ ಮಹಾರಾಷ್ಟ್ರದ ಪರವಾಗಿ ತೀರ್ಪು ಬಂದರೆ ಜೈ ಮಹಾರಾಷ್ಟ್ರ ಎಂದು ಘೋಷಣೆ ಕೂಗುವೆ ಎಂದು ವಿವಾದಾತ್ಮಕವಾಗಿ ನೀಡಿದ ಹೇಳಿಕೆ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿ ರಾಜ್ಯದ ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದೆ.

ಬಸರಿಕಟ್ಟೆ ಗ್ರಾಮದಲ್ಲಿ ಲಕ್ಷ್ಮಿ ಹೆಬ್ಬಾಳ್ಕರ್ ಅವರ ನಾಡವಿರೋಧಿ ಮಾತು ಮುಂಬರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಗುರಿಯಾಗಿಟ್ಟ ಹೇಳಿಕೆಯಾಗಿದೆ. ಬೆಳಗಾವಿ ಗ್ರಾಮೀಣ ಕ್ಷೇತ್ರ ಪರಿಗಣಿಸಿದರೆ ಮರಾಠಿ ಭಾಷಿಗರ ಪ್ರಭಾವವಿದೆ. ಅದರಂತೆ ಬೆಳಗಾವಿ ಲೋಕಸಭಾ ಕ್ಷೇತ್ರದ ರಾಜಕೀಯ ಲೆಕ್ಕಾಚಾರ ನೋಡಿದರೆ ಆ ಕ್ಷೇತ್ರದಲ್ಲಿಯೂ ಮರಾಠಿ ಭಾಷಿಗರ ಮತಗಳು ಅಭ್ಯರ್ಥಿಗಳಿಗೆ ನಿಣಾರ್ಯಕವಾದಂತಿವೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬಂದಿವೆ.

ಈ ಹಿಂದೆ ಬಸವೇಶ್ವರರ ಕುರಿತು ಸಲ್ಲದ ಹೇಳಿಕೆ ನೀಡಿ ಲಿಂಗಾಯಿತರ ಕೆಂಗಣ್ಣಿಗೆ ಗುರಿಯಾಗಿ ನಂತರದಲ್ಲಿ ಬೆಳಗಾವಿಯ ಲಿಂಗಾಯತ ಸಮಾವೇಶದಲ್ಲಿ ಪಾಲ್ಗೊಂಡು ಬಸವ ವಿರೋಧ ಹೇಳಿಕೆ ಸಮುದಾಯದ ಅಸಮಾಧಾನಕ್ಕೆ ತೇಪೆ ಹಚ್ಚಿದ್ದರು. ಈಗ ಕೇಸರಿ ಬಾವುಟ ಹಿಡಿದು ನಾನೇ ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆ ಎಂಬ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿವಾದದ ಹೇಳಿಕೆಯನ್ನು ಕನ್ನಡಿಗರು ಸಾರಾಸಗಟಾಗಿ ವಿರೋಧಿಸಿದ್ದಾರೆ. ಜತೆಗೆ ಮರಾಠಿಗರೂ ಅವರ ಹೇಳಿಕೆಯನ್ನು ಅಪಹಾಸ್ಯ ಮಾಡಿದ್ದಾರೆ ಎನ್ನಲಾಗಿದೆ.

ಬೆಳಗಾವಿ ಗಡಿ ವಿವಾದ ಕುರಿತು ಸುಪ್ರೀಂಕೋರ್ಟ್ ತೀರ್ಪು ನೀಡುವ ಮುನ್ನವೇ ಲಕ್ಷ್ಮಿ ಹೆಬ್ಬಾಳ್ಕರ್ ತಮ್ಮದೇ ಆದ ಮತ ಸ್ವಾರ್ಥದ ಕಪೋಲಕಲ್ಪಿತ ಹೇಳಿಕೆ ನೀಡಿ ಗಡಿ ವಿವಾದ ಸೃಷ್ಟಿಮಾಡಿಕೊಂಡಿದ್ದಾರೆ. ಕನ್ನಡಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಕ್ಷಮೆ ಯಾಚನೆ  : 

ಬೆಳಗಾವಿ, ಆ.31- ನಾಡವಿರೋಧಿ ಹೇಳಿಕೆ ನೀಡಿದ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷಮೆ ಯಾಚಿಸಿದ್ದಾರೆ.  ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ನನ್ನ ಹೇಳಿಕೆಯಿಂದ ನೋವಾಗಿದ್ದರೆ ಕನ್ನಡಿಗರಲ್ಲಿ ಕ್ಷಮೆ ಕೇಳುತ್ತೇನೆ ಎಂದು ಅವರು ಹೇಳಿದ್ದಾರೆ. ಕನ್ನಡಿಗರಿಗೆ ನೋವುಂಟುಮಾಡುವ ಮನಸ್ಥಿತಿ ನಮ್ಮದಲ್ಲ. ನನ್ನ ಹೇಳಿಕೆಯನ್ನು ತಿರುಚಲಾಗಿದೆ. ಬೆಳಗಾವಿಯಲ್ಲಿ ಶೇ.70ರಷ್ಟು ಮರಾಠಿಗರಿದ್ದಾರೆ. ಬಹಳಷ್ಟು ಜನ ಮುಗ್ಧರಿದ್ದಾರೆ. ನಾನು ಮಹಾರಾಷ್ಟ್ರಕ್ಕೆ ಜೈ ಎಂದಿದ್ದು ನಿಜ. ಆದರೆ, ಅದು ಕರ್ನಾಟಕಕ್ಕೆ ವಿರೋಧ ಎಂದು ಅರ್ಥವಲ್ಲ. ಯುವಕರನ್ನು ಸ್ಫೂರ್ತಿಗೊಳಿಸುವ ನಿಟ್ಟಿನಲ್ಲಿ ಈ ಹೇಳಿಕೆ ನೀಡಿದ್ದೇನೆ.

ಸುಪ್ರೀಂಕೋರ್ಟ್‍ನಲ್ಲಿರುವ ದಾವೆಯೇ ಕಾನೂನು ಬಾಹಿರವಾಗಿದೆ. ಮಹಾರಾಷ್ಟ್ರ ಪರ ತೀರ್ಪು ಬರಲು ಸಾಧ್ಯವಿಲ್ಲ. ಬಂದರೆ ಮಹಾರಾಷ್ಟ್ರಕ್ಕೆ ಜೈ ಎನ್ನುತ್ತೇನೆ ಎಂದು ನಾನು ಹೇಳಿದ್ದೆ. ನನ್ನ ಹೇಳಿಕೆಯನ್ನು ಈ ರೀತಿ ಬಿಂಬಿಸಲಾಗಿದೆ. ಇದರಿಂದ ಯಾರ ಮನಸ್ಸಿಗಾದರೂ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ ಎಂದು ತಿಳಿಸಿದ್ದಾರೆ.

ಲಕ್ಷ್ಮಿ ಹೆಬ್ಬಾಳ್ಕರ್ ವಜಾಕ್ಕೆ ವಾಟಾಳ್ ಆಗ್ರಹ : 

ಬೆಂಗಳೂರು, ಆ.31- ನಾಡವಿರೋಧಿ ಹೇಳಿಕೆ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾ ಮಾಡಬೇಕೆಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ. ಬೆಳಗಾವಿ ನಮ್ಮ ರಾಜ್ಯದ ಅವಿಭಾಜ್ಯ ಅಂಗ. ಯಾವುದೇ ಕಾರಣಕ್ಕೂ ಮಹಾರಾಷ್ಟ್ರಕ್ಕೆ ಸೇರಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಮಹಾರಾಷ್ಟ್ರಕ್ಕೆ ಸೇರಿದರೆ ನಾನೇ ಮೊದಲು ಜೈ ಎನ್ನುವೆ ಎಂದು ಹೇಳುವ ಮೂಲಕ ಹೆಬ್ಬಾಳ್ಕರ್ ನಾಡವಿರೋಧಿ ಹೇಳಿಕೆ ನೀಡಿದ್ದಾರೆ. ಅವರನ್ನು ಕಾಂಗ್ರೆಸ್ ಪಕ್ಷದಿಂದ ವಜಾ ಮಾಡಬೇಕು ಎಂದು ವಾಟಾಳ್ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಎಂಇಎಸ್ ಪುಂಡರ ಹಾವಳಿ ಹೆಚ್ಚಾಗಿದ್ದು, ಇದರ ವಿರುದ್ಧ ಕನ್ನಡಪರ ಸಂಘಟನೆಗಳು ನಿರಂತರ ಹೋರಾಟ ಮಾಡುತ್ತ ಬಂದಿವೆ. ಹಗಲಿರುಳು ನಾವು ಹೋರಾಟ ಮಾಡುತ್ತಿದ್ದರೆ ಇವರು ಕನ್ನಡಿಗರಿಗೆ ಅವಮಾನ ಮಾಡುವ ಕೆಲಸ ಮಾಡಿದ್ದಾರೆ. ಕಾಂಗ್ರೆಸ್‍ಗೆ ನಾಡಿನ ಬಗ್ಗೆ ಬದ್ಧತೆ ಇದ್ದರೆ ಅವರನ್ನು ಪಕ್ಷದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದರು.

Facebook Comments

Sri Raghav

Admin