ಹೇಮಾವತಿ ಹೋರಾಟಕ್ಕೆ ಮೊದಲ ಬಲಿ, ನಾಲೆಗೆ ಹಾರಿ ರೈತ ಆತ್ಮಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

Chaluvaraju--01

ತುಮಕೂರು, ಆ.31- ಹೇಮಾವತಿ ನೀರಿಗಾಗಿ ರೈತರು ನಡೆಸುತ್ತಿದ್ದ ಹೋರಾಟ ಉಗ್ರ ಸ್ವರೂಪ ಪಡೆದುಕೊಂಡಿದ್ದು, ಅನ್ನದಾತನೊಬ್ಬ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಗುಬ್ಬಿ ತಾಲ್ಲೂಕಿನ ಸೋಮ್ಲಾಪುರದ ಚೆಲುವರಾಜು(35)ಆತ್ಮಹತ್ಯೆ ಮಾಡಿಕೊಂಡ ರೈತ. ಕೆರೆಗಳಿಗೆ ಹೇಮಾವತಿ ನೀರು ಹರಿಸುವಂತೆ ಆಗ್ರಹಿಸಿ ರೈತರು ತಿಪಟೂರು, ಗುಬ್ಬಿ ಸೇರಿದಂತೆ ಹೇಮಾವತಿ ನಾಲಾ ವಲಯಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಸೋಮ್ಲಾಪುರ ಕೆರೆಗೆ ಹೇಮಾವತಿ ನೀರು ಹರಿಯುತ್ತಿದ್ದು, ಇದನ್ನು ನೀರಾವರಿ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್ ನೊಂದಿಗೆ ಬಂದು ಬಂದ್ ಮಾಡಲು ಯತ್ನಿಸಿದಾಗ ರೈತರು ಆಕ್ರೋಶಗೊಂಡು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದಾರೆ.

ಈ ವೇಳೆ ತಳ್ಳಾಟ, ನೂಕಾಟ ನಡೆದಿದ್ದು, ನಮ್ಮ ಗ್ರಾಮದ ಮೇಲೆ ಹಾದು ಹೋಗಿರುವ ನಾಲೆಯ ನೀರು ನಮಗೆ ಸೇರಬೇಕು. ಮೊದಲು ನಮಗೆ ನೀರು ಕೊಡಿ ಎಂದು ರೈತರು ಒತ್ತಾಯಿಸಿದ್ದರು. ಇದಕ್ಕೆ ಸೊಪ್ಪು ಹಾಕದ ಅಧಿಕಾರಿಗಳು ತಮ್ಮ ಕಾರ್ಯಾಚರಣೆಯನ್ನು ಮುಂದುರೆಸಿದಾಗ ರೈತ ಚೆಲುವರಾಜು ದಿಢೀರನೆ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದರಿಂದ ಮತ್ತಷ್ಟು ಕೆರಳಿದ ರೈತರು ಯಾವುದೇ ಕಾರಣಕ್ಕೂ ಶವವನ್ನು ಹೊರ ತೆಗೆಯಲು ಬಿಡುವುದಿಲ್ಲ ಎಂದು ಬಿಗಿಪಟ್ಟು ಹಿಡಿದಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.

ರೈತರು ನಾಲೆಗೆ ಮುತ್ತಿಗೆ ಹಾಕದಂತೆ ಜಿಲ್ಲಾಡಳಿತ ನಿಷೇದಾಜ್ಞೆ ಜಾರಿ ಮಾಡಿದ್ದು, ಇದರ ನಿರ್ವಹಣೆಯನ್ನು ಉಪವಿಭಾಗಾಧಿಕಾರಿ ನೋಡಿಕೊಳ್ಳುತ್ತಿದ್ದು, ಎಲ್ಲೆಲ್ಲಿ ನಾಲೆಗಳ ಮುಖಾಂತರ ಗೇಟ್‍ಗಳನ್ನು ಓಪನ್ ಮಾಡಿಕೊಂಡು ನೀರು ಹರಿಸಿಕೊಳ್ಳುತ್ತಿದ್ದರು.  ಎಸ್ಕೇಪ್ ಗೇಟ್‍ಗಳನ್ನು ಒಂದೊಂದಾಗಿ ಅಧಿಕಾರಿಗಳು ಮುಚ್ಚಿಕೊಂಡು ಬರುತ್ತಿದ್ದಾಗ ಸೋಮ್ಲಾಪುರ ಬಳಿ ಬಂದಾಗ ರೈತರು, ನೀರಾವರಿ ಅಧಿಕಾರಿಗಳು ಹಾಗೂ ಪೊಲೀಸರೊಂದಿಗೆ ಗಲಾಟೆ ನಡೆದಾಗ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸುದ್ದಿ ತಿಳಿಯುತ್ತಿದಂತೆ ಅಪರ ಜಿಲ್ಲಾಧಿಕಾರಿ ಅನಿತಾ, ಉಪವಿಭಾಗಾಧಿಕಾರಿ ತಪ್ಸಮಜಹೇರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಗೋಪಿನಾಥ್ ಸೇರಿದಂತೆ ಮತ್ತಿತರ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.

ಆಕ್ರೋಶ:

ಅಧಿಕಾರಿಗಳನ್ನು ಹತ್ತಿರ ಬರದಂತೆ ಬಿಡದೆ ರೈತರು ಕಲ್ಲು ತೂರಾಟ ನಡೆಸಿ, ಇದಕ್ಕೆಲ್ಲಾ ನೀವೇ ಕಾರಣ ಎಂದು ಆರೋಪಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಎಷ್ಟು ಮನವೊಲಸಲು ಯತ್ನಿಸಿದರೂ ರೈತರು ಮಾತ್ರ ಅಧಿಕಾರಿಗಳ ಮಾತಿಗೆ ಕ್ಯಾರೆ ಅನ್ನಲಿಲ್ಲ.

Facebook Comments

Sri Raghav

Admin