ಕೇಂದ್ರ ಸಂಪುಟ ಪುನಾರಚನೆ, ಅನಂತ್‍ಕುಮಾರ್‍ಗೆ ನಗರಾಭಿವೃದ್ಧಿ ಹೊಣೆ..?

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar--01

ಬೆಂಗಳೂರು, ಸೆ.1- ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಹಾಲಿ ಸಚಿವ ಅನಂತ್‍ಕುಮಾರ್‍ಗೆ ನಗರಾಭಿವೃದ್ಧಿ ಹಾಗೂ ಕೆಲ ಸಂಸದರಿಗೆ ಮಂತ್ರಿಯಾಗುವ ಸುಯೋಗ ಬಂದೊದಗಲಿದೆ. ಹಾಲಿ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿರುವ ಬೆಂಗಳೂರು ದಕ್ಷಿಣ ಸಂಸದ ಅನಂತ್‍ಕುಮಾರ್ ಅವರಿಗೆ ಮುಂಬಡ್ತಿ ಎಂಬಂತೆ ಪ್ರತಿಷ್ಠಿತ ನಗರಾಭಿವೃದ್ಧಿ ಇಲಾಖೆಯ ಹೊಣೆಗಾರಿಗೆ ಸಿಗಲಿದೆ ಎಂದು ತಿಳಿದು ಬಂದಿದೆ.
ತಮಗೆ ನೀಡಿರುವ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸಿರುವ ಅನಂತ್‍ಕುಮಾರ್, ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಸಂಘ ಪರಿವಾರದವರಿಗೂ ಅಚ್ಚುಮೆಚ್ಚು.

ವಹಿಸಿದ ಹುದ್ದೆಯನ್ನು ಯಶಸ್ವಿಯಾಗಿ ನಿಭಾಯಿಸಿರುವುದರಿಂದ ಹಾಲಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು ಅವರ ರಾಜೀನಾಮೆಯಿಂದ ತೆರವಾಗಿದ್ದ ನಗರಾಭಿವೃದ್ಧಿ ಇಲಾಖೆ ಹೊಣೆಗಾರಿಕೆ ಅನಂತ್‍ಕುಮಾರ್ ಅವರ ಹೆಗಲಿಗೆ ಧಕ್ಕಲಿದೆ. ಈ ಹಿಂದೆ ಮಾಜಿ ಪ್ರಧಾನಿ ಅಟಲ್‍ಬಿಹಾರ್ ವಾಜಪೇಯಿ ಸಂಪುಟದಲ್ಲಿ ನಗರಾಭಿದ್ಧಿ ಸಚಿವರಾಗಿದ್ದ ಅನಂತ್‍ಕುಮಾರ್, ದೇಶದ ವಿವಿಧೆಡೆ ಮೆಟ್ರೋ, ಐಟಿಸಿಟಿ ಬೆಂಗಳೂರಿನಲ್ಲಿ ಫ್ಲೈಓವರ್ ಸೇರಿದಂತೆ ಕೆಲ ಯೋಜನೆಗಳನ್ನು ಜಾರಿ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇತ್ತೀಚೆಗೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸರಕು ಸೇವಾ ತೆರಿಗೆ (ಜಿಎಸ್‍ಟಿ) ಕಾಯ್ದೆ ಸಂಸತ್ತಿನ ಉಭಯ ಸದನಗಳಲ್ಲಿ ಅಂಗೀಕಾರವಾಗುವಲ್ಲಿ ಅನಂತ್‍ಕುಮಾರ್ ಪಾತ್ರ ನಿರ್ಣಯಕವಾಗಿತ್ತು.

ಈ ಕಾಯ್ದೆಗೆ ವಿರೋಧ ವ್ಯಕ್ತಪಡಿಸುತ್ತಿದ್ದ ವಿರೋಧ ಪಕ್ಷಗಳ ನಾಯಕರ ಮನವೊಲಿಸಿದ್ದು, ಪ್ರಮುಖ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದು, ಅಧಿವೇಶನದಲ್ಲಿ ಸರ್ಕಾರವನ್ನು ಸಮರ್ಥವಾಗಿ ನಿಭಾಯಿಸುತ್ತಿರುವುದು ಪ್ರಧಾನಿಯವರ ಪ್ರೀತಿ ಪಾತ್ರಕ್ಕೆ ಕಾರಣವಾಗಿದ್ದಾರೆ. ಹೀಗಾಗಿ ಶನಿವಾರ ಇಲ್ಲವೇ ಭಾನುವಾರ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಅನಂತ್‍ಕುಮಾರ್ ಹೆಗಲಿಗೆ ನಗರಾಭಿವೃದ್ಧಿ ಹೊಣೆಗಾರಿಕೆ ಸಿಗಲಿದೆ.

ರಾಜ್ಯದಿಂದಲ್ಲೂ ಕೆಲವರಿಗೆ ಮಂತ್ರಿ ಸ್ಥಾನ:

ಇನ್ನು ಈ ಬಾರಿಯ ಕೇಂದ್ರ ಸಂಪುಟ ವಿಸ್ತರಣೆಯಲ್ಲಿ ರಾಜ್ಯದಿಂದ ಇಬ್ಬರಿಗೆ ಇಲ್ಲವೇ ಮೂವರಿಗೆ ಸಚಿವ ಸ್ಥಾನ ಸಿಗುವ ಲಕ್ಷಣಗಳು ಗೋಚರಿಸಿವೆ. ಲಿಂಗಾಯಿತ ಸಮುದಾಯದಿಂದ ಬೆಳಗಾವಿ ಸಂಸದ ಸುರೇಶ್ ಅಂಗಡಿ ಇಲ್ಲವೇ ರಾಜ್ಯಸಭಾ ಸದಸ್ಯ ಪ್ರಭಾಕರ್ ಕೋರೆ, ಹಿಂದುಳಿದ ವರ್ಗಗಳ ಸಮುದಾಯದಿಂದ ಬಳ್ಳಾರಿ ಸಂಸದ ಶ್ರೀರಾಮುಲು, ಬೆಂಗಳೂರು ಕೇಂದ್ರದ ಪಿ.ಸಿ.ಮೋಹನ್, ಒಕ್ಕಲಿಗ ಸಮುದಾಯದಿಂದ ದಕ್ಷಿಣ ಕನ್ನಡ ಜಿಲ್ಲೆಯ ನಳಿನ್‍ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರಿನ ಶೋಭಾಕಂದ್ಲಾಜೆ, ಮೈಸೂರು-ಕೊಡಗಿನ ಪ್ರತಾಪ್‍ಸಿಂಹ ಹೆಸರುಗಳು ಚಾಲ್ತಿಯಲ್ಲಿವೆ.
ಯಾವುದೇ ಒತ್ತಡ, ಲಾಬಿಗೆ ಮಣಿಯದ ಮೋದಿ ತಮಗೆ ಅನ್ನಿಸಿದ್ದನ್ನು ಮಾಡಿ ತೋರಿಸುವ ಚಾತಿ ಉಳ್ಳವರು. ಹಾಗಾಗಿ ಕೊನೆಯ ಕ್ಷಣದವರೆಗೂ ಯಾರಿಗೆ ಮಂತ್ರಿ ಸ್ಥಾನ ಸಿಗುತ್ತದೆ ಎಂಬ ಸುಳಿವು ಯಾರೊಬ್ಬರಿಗೂ ತಿಳಿದಿಲ್ಲ.  ವಿಧಾನಸಭೆ ಚುನಾವಣೆ ಸಮೀಪಿಸುತ್ತಿರವ ಸಂದರ್ಭದಲ್ಲಿ ರಾಜ್ಯಕ್ಕೆ ಒಂದಿಷ್ಟು ಪಾಲು ಸಿಗುವ ಸಾಧ್ಯತೆಯನ್ನಂತೂ ತಳ್ಳಿ ಹಾಕುವಂತಿಲ್ಲ.

Facebook Comments

Sri Raghav

Admin