ಚಾರ್‍ಧಾಮ್ ಪ್ರವಾಸಕ್ಕೆ ಆಧಾರ್ ಕಡ್ಡಾಯ

ಈ ಸುದ್ದಿಯನ್ನು ಶೇರ್ ಮಾಡಿ

Chardha-m--01

ಬೆಂಗಳೂರು, ಸೆ.1-ಇನ್ನು ಮುಂದೆ ಚಾರ್‍ಧಾಮ್ ಪ್ರವಾಸ ಕೈಗೊಳ್ಳಬೇಕಾದರೆ ಯಾತ್ರಾರ್ಥಿಗಳು ಕಡ್ಡಾಯವಾಗಿ ಆಧಾರ್ ಕಾರ್ಡ್ ಹೊಂದಿರಬೇಕು. ಕೆಲ ಯಾತ್ರಾರ್ಥಿಗಳು ಸರ್ಕಾರ ನೀಡುತ್ತಿರುವ ಸಬ್ಸಿಡಿಯನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಹಿಂದೂಗಳ ಪವಿತ್ರ, ಧಾರ್ಮಿಕ ಶ್ರದ್ಧಾಕೇಂದ್ರಗಳಾದ ಬದರೀನಾಥ್, ಕೇದಾರನಾಥ್, ಗಂಗೋತ್ರಿ ಹಾಗೂ ಯಮುನೋತ್ರಿಗೆ ಪ್ರವಾಸ ಕೈಗೊಳ್ಳಬೇಕಾದರೆ ಆಧಾರ್‍ಕಾರ್ಡ್ ಕಡ್ಡಾಯವಾಗಿ ಸಲ್ಲಿಸುವಂತೆ ಸರ್ಕಾರ ಅಧಿಸೂಚನೆ ಹೊರಡಿಸಿದೆ.

ಈ ಸಂಬಂಧ ಪ್ರವಾಸೋದ್ಯಮ ಇಲಾಖೆ ಹೊರಡಿಸಿರುವ ಅಧಿಸೂಚನೆಯಲ್ಲಿ ಇನ್ನು ಮುಂದೆ ಚಾರ್‍ಧಾಮ್‍ಗೆ ಯಾರೇ ಪ್ರವಾಸ ಕೈಗೊಂಡರೂ ತಮ್ಮ ಪೂರ್ಣ ಮಾಹಿತಿ ವಿವರ ಉಳ್ಳ ಆಧಾರ್‍ಕಾರ್ಡ್ ಸಲ್ಲಿಸದಿದ್ದರೆ ಸಬ್ಸಿಡಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಕಾರಣವೇನು ?

ಉತ್ತರಕಾಂಡ್‍ನಲ್ಲಿರುವ ಪ್ರಮುಖ ಧಾರ್ಮಿಕ ಕೇಂದ್ರಗಳಾದ ಬದರೀನಾಥ್, ಕೇದಾರನಾಥ್, ಗಂಗೋತ್ರಿ ಹಾಗೂ ಯಮುನೋತ್ರಿಗಳಿಗೆ ಪ್ರವಾಸ ಕೈಗೊಳ್ಳುವವರಿಗೆ ರಾಜ್ಯ ಸರ್ಕಾರ ಪ್ರತೀ ವರ್ಷ 30ಸಾವಿರ ಸಬ್ಸಿಡಿ ಹಣವನ್ನು ನೀಡುತ್ತದೆ. ಕೆಲವು ಟ್ರಾವೆಲ್ಸ್ ಏಜೆನ್ಸಿ ಹಾಗೂ ಮಧ್ಯವರ್ತಿಗಳು ನಕಲಿ ವಿಳಾಸ ನೀಡಿ ಸಬ್ಸಿಡಿ ಹಣವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುವ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿವೆ.

ಚಾರ್‍ಧಾಮ್‍ಗೆ ಯಾತ್ರಾರ್ಥಿಗಳನ್ನು ಕರೆದುಕೊಂಡು ಹೋಗದಿದ್ದರೂ ಮಧ್ಯವರ್ತಿಗಳು ಸಬ್ಸಿಡಿ ಹಣವನ್ನು ರಾಜಾರೋಷವಾಗಿ ಪಡೆದುಕೊಳ್ಳುತ್ತಿದ್ದರು. ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಚಾರ್‍ಧಾಮ್‍ಗೆ ಹೋಗುವ ಹಿರಿಯ ನಾಯಕರಿಗೆ 20ಸಾವಿರ ಸಬ್ಸಿಡಿ ನೀಡಲಾಗುತ್ತಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಸಬ್ಸಿಡಿ ಹಣವನ್ನು 20ರಿಂದ 30ಸಾವಿರಕ್ಕೆ ಏರಿಕೆ ಮಾಡಿದರು. ಇದು ಕಂಡವರ ಜೇಬಿಗೆ ಹೋಗುತ್ತಿದ್ದರಿಂದ ಕಡಿವಾಣ ಹಾಕುವ ಉದ್ದೇಶದಿಂದ ಆಧಾರ್ ಕಡ್ಡಾಯಗೊಳಿಸಿದೆ.

Facebook Comments

Sri Raghav

Admin