ನಾನು ಪ್ರಯಾಣ ಭತ್ಯೆಯನ್ನೇ ಪಡೆದಿಲ್ಲ , ಆರ್.ಅಶೋಕ್ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ

ಈ ಸುದ್ದಿಯನ್ನು ಶೇರ್ ಮಾಡಿ

Raghu-Achar--01

ಬೆಂಗಳೂರು, ಸೆ.1-ವಿಧಾನಪರಿಷತ್‍ನ ಎಂಟು ಸದಸ್ಯರು ಪ್ರಯಾಣ ಭತ್ಯೆ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ. ಆಧಾರ ರಹಿತ ಆರೋಪ ಮಾಡುವ ಮೂಲಕ ತೇಜೋವಧೆ ಮಾಡುವ ಪ್ರಯತ್ನ ಮಾಡಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ರಘುಆಚಾರ್ ಇಂದಿಲ್ಲಿ ಹೇಳಿದರು. ಶಾಸಕರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಾನೇ ಮುಖ್ಯಮಂತ್ರಿ ಮತ್ತು ಪ್ರಧಾನಮಂತ್ರಿಯವರಿಗೆ ಪತ್ರ ಬರೆಯುತ್ತೇನೆ. ನಾನು ಮೊಬೈಲ್ ವೋಟರ್ ಅಲ್ಲ, ನನ್ನ ಖಾಯಂ ವಿಳಾಸ ಬೆಂಗಳೂರು. ತಾತ್ಕಾಲಿಕ ವಿಳಾಸ ಚಿತ್ರದುರ್ಗ.

ಇದುವರೆಗೂ ಬೆಂಗಳೂರಿನಲ್ಲೇ ಮತದಾನ ಮಾಡುತ್ತಾ ಬಂದಿದ್ದೇನೆ. ಎಲ್ಲಾ ಚುನಾವಣೆಗಳಿಗೂ ಇಲ್ಲಿಂದಲೇ ಮತದಾನ ಮಾಡಿದ್ದೇನೆ. ಮಾಹಿತಿ ಕೊರತೆಯಿಂದ ಆರೋಪ ಮಾಡಿರುವುದು ಎದ್ದುಕಾಣುತ್ತದೆ ಎಂದು ಹೇಳಿದರು. ನಾನು ಇದುವರೆಗೂ ವಿಧಾನಪರಿಷತ್‍ನಿಂದ ಟಿಎಡಿಎ ಪಡೆದೇ ಇಲ್ಲ. ಇದನ್ನರಿತು ಅವರು ಮಾತನಾಡಲಿ ಎಂದರು. ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭರೆಡ್ಡಿ ಅವರು ಎಂಟು ಸದಸ್ಯರ ಮೇಲೆ ಆರೋಪ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ನಮ್ಮೆಲ್ಲರಿಂದ ಮಾಹಿತಿ ಪಡೆದಿದ್ದರು. ನಾವು ಯಾವುದೇ ತಪ್ಪೆಸಗಿಲ್ಲ ಎಂದು ಅವರು ಹೇಳಿದ್ದಾರೆ.

ನಾನು ಈವರೆಗೂ ನನ್ನ ಸಂಬಳವನ್ನು ಆಶ್ರಮಕ್ಕೆ ಕೊಡುತ್ತಿದ್ದೇನೆ. ಪ್ರಾಮಾಣಿಕವಾಗಿ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದೇನೆ. ಆರ್.ಅಶೋಕ್ ಅವರು ಆರೋಪ ಮಾಡಿರುವುದು ಆಧಾರ ರಹಿತವಾಗಿದೆ. ಬೇಕಾದರೆ ಅವರ ಆಸ್ತಿ ಮತ್ತು ನನ್ನ ಆಸ್ತಿ ಬಗ್ಗೆ ತನಿಖೆಯಾಗಲಿ ಎಂದು ಹೇಳಿದರು. ಆರ್.ಅಶೋಕ್ ಅವರು ಬಿಜೆಪಿ ಚಿಹ್ನೆಯನ್ನು ಬಿಟ್ಟು ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ತೋರಿಸಲಿ ಎಂದು ಸವಾಲು ಹಾಕಿದರು. ನಾವು ಕೂಡ ಕಾನೂನು ಹೋರಾಟ ಮಾಡಲು ಸಿದ್ಧರಿದ್ದೇವೆ. ಆದರೆ ತಪ್ಪೇ ಮಾಡಿಲ್ಲವೆಂದ ಮೇಲೆ ಅದರ ಅಗತ್ಯ ಬರುವುದಿಲ್ಲ ಎಂದು ಹೇಳಿದರು.

Facebook Comments

Sri Raghav

Admin