ನಾರಾಯಣಪುರ-ಆಲಮಟ್ಟಿ ಜಲಾಶಯದಿಂದ ತೆಲಂಗಾಣಗೆ ನೀರು ಬಿಡಲು ಸಿಎಂ ಒಪ್ಪಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Alamatti-Dam--01

ಬೆಂಗಳೂರು, ಸೆ.1-ತೆಲಂಗಾಣ ರಾಜ್ಯದ ಕುಡಿಯುವ ನೀರಿನ ಕೊರತೆ ನೀಗಿಸಲು ನಾರಾಯಣಪುರ ಹಾಗೂ ಆಲಮಟ್ಟಿ ಜಲಾಶಯದಿಂದ 7 ಟಿಎಂಸಿ ನೀರು ಬಿಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಒಪ್ಪಿಗೆ ಸೂಚಿಸಿದ್ದಾರೆ. ಗೃಹ ಕಚೇರಿ ಕೃಷ್ಣಾದಲ್ಲಿ ತೆಲಂಗಾಣ ರಾಜ್ಯದ ಪ್ರದೇಶ ಕಾಂಗ್ರೆಸ್ ಸಮಿತಿಯೊಂದಿಗೆ ಮಾತುಕತೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತೆಲಂಗಾಣದ ಮೆಹಬೂಬ್ ನಗರ ಸೇರಿದಂತೆ ಇತರ ನಗರಗಳ ಕುಡಿಯುವ ನೀರು ಸಮಸ್ಯೆ ಬಗೆಹರಿಸಲು 7 ಟಿಎಂಸಿ ನೀರು ಬಿಡುಗಡೆ ಮಾಡಲು ಸಮ್ಮತಿಸಿದ್ದಾರೆ ಎಂದು ತೆಲಂಗಾಣ ರಾಜ್ಯದ ಕಾಂಗ್ರೆಸ್ ಅಧ್ಯಕ್ಷ ಉತ್ತಮ್‍ಕುಮಾರ್ ರೆಡ್ಡಿ ತಿಳಿಸಿದರು.

ಮುಖ್ಯಮಂತ್ರಿಗಳ ಭೇಟಿ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತೆಲಂಗಾಣ ರಾಜ್ಯದಲ್ಲಿ ಗಂಭೀರವಾಗಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಹೀಗಾಗಿ ನಾರಾಯಣಪುರ ಆಲಮಟ್ಟಿ ಹಾಗೂ ಕೃಷ್ಣ ನದಿ ಮೂಲಗಳಿಂದ ನಾಗಾರ್ಜುನ ಡ್ಯಾಂಗೆ 15 ಟಿಎಂಸಿ ನೀರು ಬಿಡುಗಡೆ ಮಾಡಲು ನಾವು ಮನವಿ ಮಾಡಿದ್ದೆವು. ಕರ್ನಾಟಕದಲ್ಲಿ ಮಳೆಯ ಅಭಾವವಿದ್ದು, ಸದ್ಯಕ್ಕೆ 7 ಟಿಎಂಸಿ ಮಾತ್ರ ನೀರು ಬಿಡಲು ಕರ್ನಾಟಕ ಮುಖ್ಯಮಂತ್ರಿ ಒಪ್ಪಿದ್ದು, ಮುಂದಿನ ದಿನಗಳಲ್ಲಿ ಕರ್ನಾಟಕ ಜಲಾಶಯಗಳಿಗೆ ಉತ್ತಮ ಒಳಹರಿವು ಬಂದರೆ ಇನ್ನಷ್ಟು ಹೆಚ್ಚು ನೀರು ನೀಡುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ಹೇಳಿದರು.

ನಾಗಾರ್ಜುನ ಜಲಾಶಯ ಖಾಲಿಯಾಗಿದ್ದು, ಕರ್ನಾಟಕದಿಂದ 7 ಟಿಎಂಸಿ ನೀರು ಬಿಡುಗಡೆ ಮಾಡುತ್ತಿರುವುದು ಸಂತಸದ ವಿಷಯ. ಇದಕ್ಕಾಗಿ ಕರ್ನಾಟಕ ಮುಖ್ಯಮಂತ್ರಿಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. ಜೊತೆಗೆ ಆಂಧ್ರ, ತೆಲಂಗಾಣ ಮತ್ತು ಕರ್ನಾಟಕದ ಗಡಿಭಾಗಗಳಿಗೆ ಹೊಂದಿಕೊಂಡಂತಿರುವ ರಾಜವಳಿ ಬಂಡೆ ತಿರುವು ಯೋಜನೆ ಆರು ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಈ ಯೋಜನೆಗೆ ಅಗತ್ಯವಾದ ಹಣವನ್ನು ತೆಲಂಗಾಣ ಕರ್ನಾಟಕಕ್ಕೆ ನೀಡಿದೆ. ಯೋಜನೆ ಪೂರ್ಣಗೊಂಡರೆ ತೆಲಂಗಾಣದ ಸುಮಾರು 78 ಸಾವಿರ ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಸಿಗಲಿದೆ. ಆದರೆ ಆಂಧ್ರಪ್ರದೇಶ ಈ ಯೋಜನೆಯನ್ನು ವಿರೋಧಿಸುತ್ತಿದೆ. ಕರ್ನಾಟಕ ಸರ್ಕಾರ ವಿರೋಧವನ್ನು ಲೆಕ್ಕಿಸದೆ ಯೋಜನೆ ಪೂರ್ಣಗೊಳಿಸಲು ಹಾಗೂ ನಾಲೆಗಳನ್ನು ಆಧುನೀಕರಣ ಮಾಡಲು ಮುಂದಾಗಬೇಕು. ಅಗತ್ಯವಾದರೆ ಪೊಲೀಸರ ರಕ್ಷಣೆ ಪಡೆಯಬೇಕು ಎಂದು ಉತ್ತಮ್‍ಕುಮಾರ್ ರೆಡ್ಡಿ ಸಲಹೆ ನೀಡಿದರು.

ತೆಲಂಗಾಣ ರಾಜ್ಯಕಾಂಗ್ರೆಸ್‍ನ ಉಸ್ತುವಾರಿ ನಾಯಕರಾಗಿರುವ ಎಐಸಿಸಿ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ, ಮುಖ್ಯಮಂತ್ರಿ ಅವರೊಂದಿಗೆ ತೆಲಂಗಾಣ ನಾಯಕರ ಭೇಟಿಗೆ ವೇದಿಕೆ ಕಲ್ಪಿಸಿದ್ದರು.  ಈ ಸಂದರ್ಭದಲ್ಲಿ ತೆಲಂಗಾಣ ರಾಜ್ಯದ ವಿರೋಧ ಪಕ್ಷದ ನಾಯಕ ಜಾನಾರೆಡ್ಡಿ, ಮುಖಂಡರಾದ ಹನುಮಂತರಾವ್, ಚನ್ನಾರೆಡ್ಡಿ, ಶಾಸಕರಾದ ಡಿ.ಕೆ.ಅರುಣಾ, ಟಿ.ಸಂಪತ್, ಮಲ್ಲರವಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Facebook Comments

Sri Raghav

Admin