ಬೋಫೋರ್ಸ್ ವಿಚಾರಣೆಗೆ ಸುಪ್ರೀಂ ಸಮ್ಮತಿ : ಹಿಂದುಜಾ ಸಹೋದರರಿಗೆ ಕಂಟಕ

ಈ ಸುದ್ದಿಯನ್ನು ಶೇರ್ ಮಾಡಿ

Boforce--01

ನವದೆಹಲಿ, ಸೆ.1- ಇಡೀ ದೇಶಾದ್ಯಂತ ಭಾರೀ ವಿವಾದ ಸೃಷ್ಟಿಸಿದ್ದ ಬಹುಕೋಟಿ ರೂಪಾಯಿ ಬೋಫೋರ್ಸ್ ಫಿರಂಗಿ ಲಂಚ ಹಗರಣಕ್ಕೆ ಮತ್ತೆ ಜೀವ ಬಂದಿದೆ. ಈ ಪ್ರಕರಣದಲ್ಲಿ ಪ್ರಭಾವಿ ಹಿಂದುಜಾಸಹೋದರರ ವಿರುದ್ಧದ ಆರೋಪಗಳನ್ನು ವಜಾಗೊಳಿಸಿದ್ದ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ಇಂದು ಸಮ್ಮತಿಸಿದೆ. ಇದರಿಂದಾಗಿ ಕಳಂಕಿತ ಉದ್ಯಮಿಗಳು, ರಾಜಕಾರಣಿಗಳು ಹಾಗೂ ಮಾಜಿ ಅಧಿಕಾರಿಗಳ ಬೋಫೋರ್ಸ್ ಭೂತ ಪುನಃ ಬೆನ್ನಟ್ಟಲಿದೆ.

ಬೋಫೋರ್ಸ್ ಲಂಚ ಹಗರಣದಲ್ಲಿ ಅನಿವಾಸಿ ಭಾರತೀಯ ಹಿಂದುಜಾ ಸಹೋದರರಾದ ಶ್ರೀಚಂದ್, ಗೋಪಿಚಂದ್ ಮತ್ತು ಪ್ರಕಾಶ್‍ಚಂದ್ ವಿರುದ್ಧದ ಆರೋಪಗಳನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿ ಆದೇಶ ನೀಡಿತ್ತು. ಈ ತೀರ್ಪು ಪ್ರಶ್ನಿಸಿ ಬಿಜೆಪಿ ಮುಖಂಡ ಮತ್ತು ಹಿರಿಯ ವಕೀಲ ಅಜಯ್‍ಕುಮಾರ್ ಅಗರ್‍ವಾಲ್ ಸುಪ್ರೀಂಕೋರ್ಟ್‍ಗೆ ಮಧ್ಯಂತರ ಅರ್ಜಿ ಸಲ್ಲಿಸಿ ತ್ವರಿತ ವಿಚಾರಣೆಗೆ ಮನವಿ ಮಾಡಿದ್ದರು.  ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠವು ಈ ಅರ್ಜಿಯನ್ನು ಪುರಸ್ಕರಿಸಿದ್ದು, ವಿಚಾರಣೆ ನಡೆಸಲು ಸಮ್ಮತಿ ಸೂಚಿಸಿದೆ. ಅಕ್ಟೋಬರ್ 30ರಿಂದ ಈ ಪ್ರಕರಣದ ವಿಚಾರಣೆ ಆರಂಭಿಸುವುದಾಗಿ ನ್ಯಾಯಮೂರ್ತಿಗಳಾದ ಎ.ಎಂ.ಖಾನ್ವಿಲ್ಕರ್ ಮತ್ತು ಡಿ.ವೈ.ಚಂದ್ರಚೂಡ್ ಅವರನ್ನು ಒಳಗೊಂಡ ಪೀಠವು ತಿಳಿಸಿದೆ.

ಆರೋಪಿಗಳನ್ನು ಆರೋಪದಿಂದ ಮುಕ್ತಗೊಳಿಸಿದ್ದ ದೆಹಲಿ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕೇಂದ್ರೀಯ ತನಿಖಾ ದಳ-ಸಿಬಿಐ ಸುಪ್ರೀಂಕೋರ್ಟ್‍ಗೆ ಯಾವುದೇ ಮೇಲ್ಮನವಿ ಸಲ್ಲಿಸಿರಲಿಲ್ಲ. ಆಗರ್‍ವಾಲ್ ಅವರು ತಮ್ಮ ವೈಯಕ್ತಿಕ ಸಾಮಥ್ರ್ಯದಿಂದ ಸುಪ್ರೀಂ ಕೋರ್ಟ್‍ಗೆ ಸಲ್ಲಿಸಿದ್ದ ಮೇಲ್ಮನವವಿಯನ್ನು ಅಂಗೀಕರಿಸಲಾಗಿತ್ತು. ಮೇ 31, 2005ರಲ್ಲಿ ದೆಹಲಿ ಹೈಕೋರ್ಟ್ ಈ ಪ್ರಕರಣದ ಆರೋಪಿಗಳಾಗಿದ್ದ ಮೂವರು ಹಿಂದುಜಾ ಸಹೋದರರು ಸೇರಿದಂತೆ ಕೆಲವರ ವಿರುದ್ಧದ ಆರೋಪಗಳನ್ನು ವಜಾಗೊಳಿಸಿತ್ತು.

ಈ ತೀರ್ಪಿನ ವಿರುದ್ಧ ದಶಕದ ಹಿಂದೆಯೇ ಸಿಬಿಐ ದೆಹಲಿ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿತ್ತಾದರೂ ಅವಕಾಶವನ್ನು ನಿರಾಕರಿಸಲಾಗಿತ್ತು. ಈಗ ಎ.ಕೆ.ಅಗರ್ವಾಲ್ ಮೇಲ್ಮನವಿಯನ್ನು ಮಾನ್ಯ ಮಾಡಿದ್ದು, ಬೋಫೋರ್ಸ್ ಲಂಚ ಹಗರಣ ವಿಚಾರಣೆ ತ್ವರಿತವಾಗಿ ನಡೆಯಲು ವೇದಿಕೆ ಸಜಾ್ಜಗಿದೆ.
ಭಾರತೀಯ ಸೇನಾ ಪಡೆಗೆ 400 ಸಂಖ್ಯೆಯ 155 ಮಿ.ಮೀ. ಹೋವಿಟ್ಜರ್ ಫಿರಂಗಿಗಳನ್ನು ಪೂರೈಸಲು ಸ್ವೀಡನ್‍ನ ಶಸ್ತ್ರಾಸ್ತ್ರ ತಯಾರಿಕಾ ಸಂಸ್ಥೆ ಎ.ಬಿ.ಬೋಫೋರ್ಸ್ ಮತ್ತು ಭಾರತದ ನಡುವೆ ಮಾರ್ಚ್ 24, 1986ರಲ್ಲಿ 1,437 ಕೋಟಿ ರೂ.ಗಳ ಒಪ್ಪಂದ ಏರ್ಪಟ್ಟಿತ್ತು.ಈ ವ್ಯವಹಾರದಲ್ಲಿ ಭಾರೀ ಭ್ರಷ್ಟಾಚಾರ ನಡೆದಿದೆ. ಅತ್ಯುನ್ನತ ರಾಜಕಾರಣಿಗಳು ಮತ್ತು ರಕ್ಷಣಾ ಇಲಾಖೆ ಅಧಿಕಾರಿಗಳಿಗೆ ಸಂಸ್ಥೆಯಿಂದ ದೊಡ್ಡ ಮೊತ್ತದ ಲಂಚ ಸಂದಾಯವಾಗಿದೆ ಎಂದು ಸ್ವಿಸ್ ರೇಡಿಯೋ ಏಪ್ರಿಲ್ 16, 1987ರಲ್ಲಿ ಸ್ಪೋಟಕ ಸುದ್ದಿ ಬಿತ್ತರಿಸಿತ್ತು.

ಸಿಬಿಐ ಜನವರಿ 22, 1990ರಲ್ಲಿ ಆರೋಪಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿಕೊಂಡಿತ್ತು. ಎ.ಬಿ.ಬೋಫೋರ್ಸ್ ಕಂಪನಿಯ ಆಗಿನ ಅಧ್ಯಕ್ಷ ಮಾರ್ಟಿನ್ ಅರ್ಡ್‍ಬೆ, ಮಧ್ಯವರ್ತಿಗಳಾದ ವಿನ್ ಛಡ್ಡಾ ಮತ್ತು ಹಿಂದುಜಾ ಸಹೋದರರ ಹೆಸರನ್ನು ಉಲ್ಲೇಖಿಸಲಾಗಿತ್ತು.  ಸಿಬಿಐ ತನಿಖೆ ತೀವ್ರಗೊಳ್ಳುತ್ತಿದ್ದಂತೆ, ಇಟಲಿಯ ಉದ್ಯಮಿ ಒಟ್ಟಾವಿಯೋ ಕ್ವಟ್ರೋಚಿ, ಆಗಿನ ರಕ್ಷಣಾ ಕಾರ್ಯದರ್ಶಿ ಎಸ್.ಕೆ.ಭಟ್ನಾಗರ್, ಹಾಗೂ ಮಾಜಿ ಪ್ರಧಾನಿ ರಾಜೀವ್‍ಗಾಂಧಿ ಅವರ ಹೆಸರುಗಳೂ ಬಹಿರಂಗಗೊಂಡು ರಾಷ್ಟ್ರಾದ್ಯಂತ ವಿವಾದದ ಅಲೆ ಎಬ್ಬಿಸಿತ್ತು.

Facebook Comments

Sri Raghav

Admin