ಮುಂದಿನ 3 ವರ್ಷದಲ್ಲಿ ಭಾರತದಿಂದ ವಿದೇಶಗಳಿಗೆ ರಸಗೊಬ್ಬರ ರಫ್ತು

ಈ ಸುದ್ದಿಯನ್ನು ಶೇರ್ ಮಾಡಿ

Anant-Kumar

ಬೆಂಗಳೂರು, ಸೆ.1-ಮುಂದಿನ ಮೂರು ವರ್ಷದಲ್ಲಿ ಭಾರತ ವಿದೇಶಗಳಿಗೆ ರಸಗೊಬ್ಬರ ರಫ್ತು ಮಾಡುವ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಅನಂತ್‍ಕುಮಾರ್ ಹೇಳಿದ್ದಾರೆ. ಜಿಕೆವಿಕೆಯಲ್ಲಿ ಕೇಂದ್ರ ಕೃಷಿ ಕಲ್ಯಾಣ ಇಲಾಖೆಯಿಂದ ಹಮ್ಮಿಕೊಳ್ಳಲಾಗಿದ್ದ ಸಂಕಲ್ಪದಿಂದ ಸಿದ್ಧಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೇಂದ್ರದಲ್ಲಿ ಎನ್‍ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ರಸಗೊಬ್ಬರ ಉತ್ಪಾದನೆಗೆ ವಿಶೇಷ ಒತ್ತು ನೀಡಿದೆ. ಇದರ ಪರಿಣಾಮ ನಮ್ಮಲ್ಲಿ ಹೆಚ್ಚು ರಸಗೊಬ್ಬರ ಉತ್ಪಾದನೆಯಾಗುತ್ತಿದೆ ಎಂದರು.

ಇಂದು ವಿಶ್ವದ ಮುಂದುವರೆದ ರಾಷ್ಟ್ರಗಳು ಮಾತ್ರ ವಿದೇಶಕ್ಕೆ ರಫ್ತು ಮಾಡುತ್ತಿವೆ. ನಮ್ಮಲ್ಲಿ ಯಥೇಚ್ಛವಾಗಿ ಬಳಸಿ ಉಳಿಯುವ ಗೊಬ್ಬರವನ್ನು ನಾವು ವಿದೇಶಗಳಿಗೆ ರಫ್ತು ಮಾಡಿದರೆ ನಮ್ಮ ದೇಶವೂ ಮುಂದುವರೆದ ರಾಷ್ಟ್ರಗಳ ಪಟ್ಟಿಗೆ ಸೇರ್ಪಡೆಯಾಗಲಿದೆ ಹಾಗೂ ಕೇಂದ್ರ ಸರ್ಕಾರದ ಸಾಧನೆಗಳ ಪಟ್ಟಿಗೂ ಇದನ್ನು ಸೇರಿಸಿಕೊಳ್ಳಬಹುದು ಎಂದು ಹೇಳಿದರು.

ಹಿಂದೆ ನಿರೀಕ್ಷೆಗೆ ತಕ್ಕಂತೆ ರಸಗೊಬ್ಬರ ಉತ್ಪಾದನೆ ಮಾಡದ ಕಾರಣ ರೈತರಿಗೆ ಸಕಾಲದಲ್ಲಿ ಸಮರ್ಪಕವಾಗಿ ಗೊಬ್ಬರ ಸಿಗದ ಕಾರಣ ಬೆಳೆ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ನಮ್ಮ ಸರ್ಕಾರ ಕೃಷಿ ವಲಯಕ್ಕೆ ವಿಶೇಷ ಆದ್ಯತೆ ನೀಡಿರುವುದರಿಂದ ದೇಶದ ಯಾವುದೇ ಭಾಗದಲ್ಲೂ ರಸಗೊಬ್ಬರ ಸಮಸ್ಯೆ ಉಂಟಾಗಿಲ್ಲ ಎಂದು ಸ್ಪಷ್ಟಪಡಿಸಿದರು.  ಹಿಂದಿನ ಯುಪಿಎ ಸರ್ಕಾರ ಪ್ರಕೃತಿ ವಿಕೋಪ ನಿಧಿಗೆ ವರ್ಷಕ್ಕೆ 33,580 ಸಾವಿರ ಕೋಟಿ ಹಣ ನಿಗದಿಪಡಿಸಿತ್ತು. ನಮ್ಮ ಸರ್ಕಾರ ಇದನ್ನು 61,621 ಸಾವಿರ ಕೋಟಿಗೆ ಏರಿಕೆ ಮಾಡಿದೆ. ಇದು ರೈತರ ಬಗ್ಗೆ ನಮ್ಮ ಸರ್ಕಾರಕ್ಕಿರುವ ಕಳಕಳಿ ತೋರಿಸುತ್ತದೆ ಎಂದರು.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಗೆ 2011 ಮತ್ತು 2014ರಲ್ಲಿ 9,999 ಕೋಟಿ ರೂ. ಬಿಡುಗಡೆಯಾಗಿತ್ತು. ಎನ್‍ಡಿಎ 2014,17ರಲ್ಲಿ ನಮ್ಮ ಸರ್ಕಾರ 29,194 ಕೋಟಿ ಹಣ ಹೆಚ್ಚಿಸಿದೆ. ರೈತರ ಅಭಿವೃದ್ಧಿಯೇ ದೇಶದ ಅಭಿವೃದ್ದಿ ಎಂಬುದು ಪ್ರಧಾನಿಯವರ ಸಂಕಲ್ಪವಾಗಿರುವುದರಿಂದ ಶೇ.50ರಷ್ಟು ಬೆಳೆಹಾನಿಯಾಗಿದ್ದರೆ ಮಾತ್ರ ನೀಡಲಾಗುತ್ತಿದ್ದ ಪರಿಹಾರವನ್ನು ಶೇ.33ರಷ್ಟು ಬೆಳೆಹಾನಿಯಾಗಿದ್ದರೂ ಪರಿಹಾರ ನೀಡಲಾಗುತ್ತಿದೆ ಎಂದು ಹೇಳಿದರು.

2020ರ ವೇಳೆಗೆ ದೇಶದ ಪ್ರತಿಯೊಬ್ಬ ರೈತನ ಆದಾಯ ದ್ವಿಗುಣಗೊಳಿಸಲು ಕೆಲವು ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದ 450ಜಿಲ್ಲೆಗಳ ಪೈಕಿ 99 ಜನರಿಕ್ ಔಷಧಿ ಮಳಿಗೆಗಳನ್ನು ತೆರೆಯಲಾಗಿತ್ತು. ನಮ್ಮ ಸರ್ಕಾರ ಮೂರು ವರ್ಷದಲ್ಲಿ 2,400 ಕೇಂದ್ರಗಳನ್ನು ಆರಂಭಿಸಿದೆ. ಇವುಗಳನ್ನು ಪ್ರತಿ ಜಿಲ್ಲೆ, ತಾಲೂಕು ಕೇಂದ್ರಗಳಿಗೂ ವಿಸ್ತರಿಸುವ ಆಲೋಚನೆ ಹೊಂದಿರುವುದಾಗಿ ಹೇಳಿದರು.

ಕೇಂದ್ರ ಯೋಜನೆ ಅನುಷ್ಠಾನ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಹಲವು ವರ್ಷಗಳಿಂದ ದೇಶದ ಹಲವೆಡೆ ಬರಗಾಲವಿರುವುದರಿಂದ ಬ್ಯಾಂಕ್‍ಗಳಿಂದ ಸಾಲ ಪಡೆಯುವ ರೈತರ ಸಂಖ್ಯೆ ಹೆಚ್ಚಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳ ಜೊತೆಗೆ ನಬಾರ್ಡ್ ಬ್ಯಾಂಕ್‍ಗಳು ಕೂಡ ಇನ್ನೂ ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಿಸುವಂತೆ ಮನವಿ ಮಾಡಿದರು. ಕೇಂದ್ರ ಸರ್ಕಾರ ರೈತರು, ಕಾರ್ಮಿಕರು, ಹಿಂದುಳಿದವರಿಗೆ ಅನೇಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ರೈತರು ಈ ಯೋಜನೆಯ ಲಾಭವನ್ನು ಮಧ್ಯವರ್ತಿಗಳ ಪಾಲಾಗಲು ಬಿಡದೆ ಸದುಪಯೋಗಪಡಿಸಿಕೊಂಡು ಶಸಕ್ತರಾಗಬೇಕು ಎಂದರು. ಜಿಕೆವಿಕೆ ಉಪಕುಲಪತಿ ಪ್ರೋ.ಶಿವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.

Facebook Comments

Sri Raghav

Admin