ಹಾಸನ ಜಿಲ್ಲೆಗೆ ಕುಡಿಯುವ ನೀರಿಗೆ ಹೆಚ್ಚುವರಿ 50 ಕೋಟಿ ಬಿಡುಗಡೆಗೆ ರೇವಣ್ಣ ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

revanna

ಬೆಂಗಳೂರು, ಸೆ.1- ಹಾಸನ ಜಿಲ್ಲೆಯಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿದ್ದು, ನೀರಿನ ವ್ಯವಸ್ಥೆಗಾಗಿ ತಕ್ಷಣ ಹೆಚ್ಚುವರಿ 50 ರಿಂದ 60 ಕೋಟಿ ರೂ. ಬಿಡುಗಡೆ ಮಾಡಬೇಕು ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಮುಖ್ಯಮಂತ್ರಿಯವರನ್ನು ಆಗ್ರಹಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಹಾಸನ ಜಿಲ್ಲೆ ಬರಪೀಡಿತವಾಗಿದೆ. ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಸಿಎಂ ಮತ್ತೊಮ್ಮೆ ತಂಡ ಕಳುಹಿಸಿ ಪರಿಶೀಲನೆ ನಡೆಸಲಿ ಎಂದರು.

ಕುಡಿಯುವ ನೀರಿಗಾಗಿ 39 ಕೋಟಿ ರೂ. ಹಣ ಮಂಜೂರು ಮಾಡಿದ್ದರೂ ಬಿಡುಗಡೆಯಾಗಿರುವುದು ಕೇವಲ 10 ಕೋಟಿ ರೂ. ಮಾತ್ರ. ಆರ್ಥಿಕ ಮುಗ್ಗಟ್ಟಿನಿಂದ ಕೊಳವೆ ಬಾವಿ ಕೊರೆಸಲು ಆಗದ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದರು. ಬರದಿಂದಾಗಿ ಜಿಲ್ಲೆಯಲ್ಲಿ 60 ಹೆಕ್ಟೇರ್ ಪ್ರದೇಶದಲ್ಲಿ ತೆಂಗು ಬೆಳೆ ನಾಶವಾಗಿದೆ. ಸುಮಾರು 1200 ಕೋಟಿ ರೂ. ನಷ್ಟವಾಗಿದೆ. ಆಲೂಗಡ್ಡೆ ಸೇರಿದಂತೆ ಇನ್ನಿತರ ಬೆಳೆಗಳೂ ಹಾನಿಯಾಗಿವೆ. 3000 ಕೋಟಿ ರೂ. ನಷ್ಟವಾಗಿದೆ. ಕೂಡಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಪರಿಹಾರ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಅರಸೀಕೆರೆ ಪಟ್ಟಣದಲ್ಲಿ ಟ್ಯಾಂಕ್ ಮೂಲಕ ನೀರು ಸರಬರಾಜು ಮಾಡಲು 2.5 ಕೋಟಿ ರೂ. ಖರ್ಚಾಗುತ್ತಿದೆ. ಶಿವಮೊಗ್ಗದ ಖಾಸಗಿ ಎಂಪ್ಲಾಯ್‍ಮೆಂಟ್ ಸಂಸ್ಥೆಯು ಹಿಂದುಳಿದ ಹಾಗೂ ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಯ ಹಾಸ್ಟೆಲ್‍ನಲ್ಲಿ ಅಡುಗೆ ಮಾಡುವ ಹೊರಗುತ್ತಿಗೆ ಸಿಬ್ಬಂದಿಗಳಿಗೆ 4 ತಿಂಗಳು ಕಳೆದರೂ ವೇತನ ನೀಡಿಲ್ಲ. ಕೂಡಲೇ ಅವರ ಸಂಕಷ್ಟಕ್ಕೆ ರಾಜ್ಯಸರ್ಕಾರ ಧಾವಿಸಬೇಕು. ಹೊರಗುತ್ತಿಗೆ ಪದ್ಧತಿ ರದ್ದುಪಡಿಸಿ ನೇರವಾಗಿ ಅವರಿಗೆ ಚೆಕ್ ಮೂಲಕ ವೇತನ ನೀಡಬೇಕು ಎಂದು ತಿಳಿಸಿದರು.

ರಾಜ್ಯದಲ್ಲಿ ಮೋಡ ಬಿತ್ತನೆ ಇಲ್ಲ. ಸುಮ್ಮನೆ ಯಾರೋ ದುಡ್ಡು ಮಾಡಿಕೊಂಡು ಹೋಗುವ ಪ್ಲಾನ್ ಇದು. ಇದರ ಬದಲು ಇಸ್ರೇಲ್ ತಂತ್ರಜ್ಞಾನ ಬಳಕೆ ಮಾಡಿ ಹನಿ ನೀರಾವರಿ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.

Facebook Comments

Sri Raghav

Admin