6 ಸಚಿವರ ರಾಜೀನಾಮೆ, ನಾಳೆ ಕೇಂದ್ರ ಸಂಪುಟ ಪುನಾರಚನೆ, ಜೆಡಿಯುಗೆ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

Modi--.121

ನವದೆಹಲಿ, ಸೆ.1-ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಪುನಾರಚನೆ ನಾಳೆ ನಡೆಯುವುದು ಖಚಿತವಾಗಿರುವ ಬೆನ್ನಲ್ಲೇ, ಆರು ಸಚಿವರು ರಾಜೀನಾಮೆ ನೀಡಿದ್ದಾರೆ. ಎನ್‍ಡಿಎ ಮಿತ್ರಪಕ್ಷವಾಗಿ ಸೇರ್ಪಡೆಯಾಗಿರುವ ಜೆಡಿಯುಗೆ ಸಂಪುಟದಲ್ಲಿ ಸ್ಥಾನ ಲಭಿಸಲಿರುವ ಹಿನ್ನೆಲೆಯಲ್ಲಿ ಈ ಬೆಳವಣಿಗೆಯಾಗಿದೆ.  ಕೌಶಲ ಅಭಿವೃದ್ದಿ ಮತ್ತು ಉದ್ಯಮಶೀಲತಾ ಖಾತೆ ರಾಜ್ಯ ಸಚಿವರ ರಾಜೀವ್ ಪ್ರತಾಪ್ ರೂಡಿ, ಆರೋಗ್ಯ ಖಾತೆ ರಾಜ್ಯ ಸಚಿವ ಫಗ್ಗನ್ ಸಿಂಗ್ ಕಲಾಸ್ತೆ, ಸಣ್ಣ, ಅತಿಸಣ್ಣ ಮತ್ತು ಮಧ್ಯಮ ಉದ್ಯಮಗಳ ಖಾತೆ ಸಚಿವ ಕಲ್‍ರಾಜ್ ಮಿಶ್ರಾ, ಕೃಷಿ ಮತ್ತು ಆಹಾರ ಸಂಸ್ಕರಣೆ ಖಾತೆ ರಾಜ್ಯ ಸಚಿವ ಸಂಜೀವ್ ಬಲ್ಯಾನ್ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಿದ್ದಾರೆ.

ಇದೇ ವೇಳೆ ಜಲಸಂಪನ್ಮೂಲ ಸಚಿವೆ ಉಮಾ ಭಾರತಿ ಆನಾರೋಗ್ಯದ ಕಾರಣದಿಂದ ರಾಜೀನಾಮೆಗೆ ಮುಂದಾಗಿದ್ದು, ಉತ್ತರಪ್ರದೇಶ ಬಿಜೆಪಿ ಘಟಕದ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಾನವ ಸಂಪನ್ಮೂಲ ಖಾತೆ ರಾಜ್ಯ ಸಚಿವ ಮಹೇಂದ್ರನಾಥ್ ಪಾಂಡೆ ಸಹ ರಾಜೀನಾಮೆ ನೀಡಲಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಅವರು ಉಮಾ ಭಾರತಿ ಸೇರಿದಂತೆ ಆರು ಸಚಿವರಿಗೆ ವೈಯಕ್ತಿಕವಾಗಿ ಕರೆ ಮಾಡಿ, ಪ್ರಧಾನಿ ಮೋದಿ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ಪಡೆಯಲು ಬಯಸಿರುವುದಾಗಿ ತಿಳಿಸಿದ್ದಾರೆ ಎಂದು ಉನ್ನತ ಮೂಲಗಳು ಹೇಳಿವೆ.

ಸಂಪುಟದಲ್ಲಿ ಕೆಲವೊಂದು ಮಹತ್ವದ ಬದಲಾವಣೆಗಳು ಆಗಲಿದ್ದು, ಸರಣಿ ರೈಲು ಅಪಘಾತಗಳ ಹಿನ್ನೆಲೆಯಲ್ಲಿ ರಾಜೀನಾಮೆಗೆ ಮುಂದಾಗಿದ್ದ ರೈಲ್ವೆ ಸಚಿವ ಸುರೇಶ್ ಪ್ರಭು ಅವರಿಗೆ ಪರಿಸರ ಖಾತೆ ನೀಡುವ ಸಾಧ್ಯತೆ ಇದೆ. ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ರೈಲ್ವೆ ಸಚಿವರಾಗುವ ನಿರೀಕ್ಷೆ ಇದೆ.
ಕರ್ನಾಟಕದ ಮೂವರಿಗೆ ಸಂಪುಟದಲ್ಲಿ ಅವಕಾಶ ಲಭಿಸುವ ನಿರೀಕ್ಷೆ ಇದೆ. ಸುರೇಶ್ ಅಂಗಡಿ, ಶಿವಕುಮಾರ್ ಉದಾಸಿ ಮತ್ತು ಶೋಭಾ ಕರಂದ್ಲಾಜೆ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ.   ಪ್ರಧಾನಿ ಸೆ.3ರಂದು ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಚೀನಾಗೆ ತೆರಳುವುದಕ್ಕಿಂತ ಮುನ್ನವೇ ಸಂಪುಟ ವಿಸ್ತರಣೆ ನಡೆಯಬೇಕಿದೆ. ಈ ಸಮಾವೇಶದ ನಂತರ ಸೆ.5ರಂದು ಮೋದಿ ಮ್ಯಾನ್ಮಾರ್‍ಗೆ ಎರಡು ದಿನಗಳ ಭೇಟಿ ನೀಡಲಿದ್ದಾರೆ.

Facebook Comments

Sri Raghav

Admin