ಕಾಂಗ್ರೆಸ್ ನಿಂದ ದರ್ಶನ, ಬಿಜೆಪಿಯಿಂದ ಸುದೀಪ್ ರಾಜಕೀಯಕ್ಕೆ ಎಂಟ್ರಿ..!?

ಈ ಸುದ್ದಿಯನ್ನು ಶೇರ್ ಮಾಡಿ

Darshan--01

– ಹರೀಶ್‍ಗೌಡ ಕೆ.ಸಿ., ಹಾಸನ
ಬೆಂಗಳೂರು, ಸೆ.1- ರಾಜಕೀಯ ಹಾಗೂ ಸಿನಿಮಾ ಕ್ಷೇತ್ರಕ್ಕೆ ಅವಿನಾಭಾವ ಸಂಬಂಧವಿದೆ. ನಟ-ನಟಿಯರು ರಾಜಕೀಯಕ್ಕೆ ಸೇರ್ಪಡೆಯಾಗುತ್ತಲೇ ಇದ್ದಾರೆ. ಕಳೆದ ವಾರವಷ್ಟೆ ರಿಯಲ್ ಸ್ಟಾರ್ ಉಪೇಂದ್ರ ತಮ್ಮ ಪಕ್ಷವನ್ನು ಸ್ಥಾಪಿಸಿ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಇದೀಗ ನಟ ದರ್ಶನ್ ರಾಜಕೀಯಕ್ಕೆ ಬರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಈಗ ಬಿಜೆಪಿ ಸುದೀಪ್ ಅವರನ್ನು ಪಕ್ಷಕ್ಕೆ ಸೆಳೆಯಲು ಕಾರ್ಯತಂತ್ರ ಹೆಣೆದಿದೆ. ಅದರಂತೆ ಕೆಲವು ಪ್ರಭಾವಿ ಮುಖಂಡರು ಮತ್ತು ಸುದೀಪ್ ನಡುವೆ ಒಂದು ಸುತ್ತಿನ ಮಾತುಕತೆ ಕೂಡ ನಡೆದಿದೆ ಎಂದು ಹೇಳಲಾಗಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶತಾಯ-ಗತಾಯ ಅಧಿಕಾರಕ್ಕೇರಲು ಬಿಜೆಪಿ ಸಜ್ಜಾಗಿದೆ.

ಆಡಳಿತಾರೂಢ ಕಾಂಗ್ರೆಸ್ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೇರಲು ಸೆಣಸುತ್ತಿದೆ. ಹೀಗಾಗಿ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಸ್ಟಾರ್ ನಟರನ್ನು ಪಕ್ಷಕ್ಕೆ ಸೆಳೆಯಲು ಪೈಪೋಟಿ ಶುರುವಾಗಿದೆ. ನಟ ದರ್ಶನ್ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡು ಹಳೆ ಮೈಸೂರು ಭಾಗದಲ್ಲಿ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್ ಚಿಂತನೆ ನಡೆಸಿದೆ. ಲೋಕಸಭೆ ಚುನಾವಣೆಯಲ್ಲಿ ಮೈಸೂರು-ಕೊಡಗು ಕ್ಷೇತ್ರದಲ್ಲಿ ಸ್ಪರ್ಧೆಗಿಳಿಸಲೂ ಕಾಂಗ್ರೆಸ್ ತೀರ್ಮಾನಿಸಿದೆ.
ರಾಜ್ಯದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಹೊಂದಿರುವ ದರ್ಶನ್ ಅವರನ್ನು ಪಕ್ಷಕ್ಕೆ ಸೆಳೆದುಕೊಂಡರೆ ಕಾಂಗ್ರೆಸ್‍ಗೆ ಬಲ ಬರಲಿದೆ.ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ಮಾಜಿ ಸಚಿವ ಅಂಬರೀಶ್ ಅವರು ದರ್ಶನ್ ಜತೆ ಒಂದು ಸುತ್ತಿನ ಮಾತುಕತೆ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ದರ್ಶನ್ ಅವರನ್ನು ಕೇಳಿದಾಗ, ಪ್ರತಿಕ್ರಿಯೆ ನೀಡಲಿಲ್ಲ. ಆದರೆ, ದರ್ಶನ್ ತಾಯಿ ರಾಜಕೀಯಕ್ಕೆ ಬರುವುದು ಮಗನ ವೈಯಕ್ತಿಕ ವಿಚಾರ ಎಂದು ಹೇಳಿದ್ದಾರೆ. ದರ್ಶನ್ ತಾಯಿಯವರು ಈಗಾಗಲೇ ಕೆಪಿಸಿಸಿ ಕಾರ್ಯದರ್ಶಿಯಾಗಿದ್ದಾರೆ. ಆದ್ದರಿಂದ ದರ್ಶನ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುವುದು ಖಚಿತ ಎನ್ನಲಾಗಿದೆ.

ಇತ್ತ ಬಿಜೆಪಿಯವರು ಸುದೀಪ್ ಜತೆ ಮಾತುಕತೆ ನಡೆಸಿದ್ದಾರೆಂದು ಹೇಳಲಾಗಿದೆ. ಕಳೆದ ತಿಂಗಳು ಉಪ್ಪಿ ಬಿಜೆಪಿಗೆ ಸೇರುತ್ತಾರೆ ಎಂಬ ಮಾತುಗಳು ಕೇಳಿಬಂದವು. ಆದರೆ, ಉಪ್ಪಿಯವರು ತಮ್ಮ ಪಕ್ಷವನ್ನು ಸ್ಥಾಪಿಸಿ ಅಧಿಕಾರಕ್ಕೆ ಬರುತ್ತೇನೆ ಎಂದು ಹೇಳಿದ್ದಾರೆ. ನಾನು ಯಾವುದೇ ಪಕ್ಷಕ್ಕೂ ಸೇರ್ಪಡೆಯಾಗುವುದಿಲ್ಲ. ನಾನೇ ಪಕ್ಷ ಸ್ಥಾಪಿಸಿ ರಾಜ್ಯದ ಜನತೆಯ ಸಂಕಷ್ಟಗಳಿಗೆ ಸ್ಪಂದಿಸುತ್ತೇನೆ ಎಂದು ಹೇಳಿದ್ದಾರೆ. ಅವರನ್ನು ಬಿಜೆಪಿಗೆ ಸೆಳೆದು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಬೆಂಗಳೂರಿನ ಯಾವುದಾದರೂ ಒಂದು ಕ್ಷೇತ್ರದಲ್ಲಿ ಟಿಕೆಟ್ ನೀಡಲು ಬಿಜೆಪಿ ತೀರ್ಮಾನಿಸಿತ್ತು. ಆದರೆ, ಅದು ಸಾಧ್ಯವಾಗಲಿಲ್ಲ. ಇದೀಗ ಸುದೀಪ್ ಅವರನ್ನು ಪಕ್ಷಕ್ಕೆ ಸೆಳೆಯಲು ತುದಿಗಾಲಲ್ಲಿ ನಿಂತಿದೆ.

ನೆರೆ ರಾಜ್ಯಗಳಲ್ಲಿ ಚಿತ್ರನಟರು ರಾಜಕೀಯಕ್ಕೆ ಬಂದು ಯಶಸ್ವಿಯಾಗಿದ್ದಾರೆ. ಆದರೆ, ನಮ್ಮ ರಾಜ್ಯದಲ್ಲಿ ಚಿತ್ರನಟರಿಗೆ ಅಷ್ಟೊಂದು ಮಾನ್ಯತೆ ಕೊಡುವುದಿಲ್ಲ. ಏಕೆಂದರೆ, ಸಿನಿಮಾವೇ ಬೇರೆ, ರಾಜಕೀಯವೇ ಬೇರೆ. ಆಂಧ್ರ ಪ್ರದೇಶದಲ್ಲಿ ಜನಪ್ರಿಯ ನಟರಾದ ಚಿರಂಜೀವಿ ರಾಜಕೀಯಕ್ಕೆ ಬಂದರೂ ಅವರು ಸಕ್ಸಸ್ ಆಗಲಿಲ್ಲ. ತಮಿಳುನಾಡಿನಲ್ಲಿ ಜನಪ್ರಿಯ ನಟರಾದ ರಜನಿಕಾಂತ್, ಕಮಲ್ ಹಾಸನ್ ಅವರು ರಾಜಕೀಯಕ್ಕೆ ಬರುತ್ತಾರೆಂಬ ಸುದ್ದಿ ಆಗೊಮ್ಮೆ-ಈಗೊಮ್ಮೆ ಹೊರಬೀಳುತ್ತಲೇ ಇದೆ. ಅಧಿಕೃತವಾಗಿ ಇಲ್ಲಿಯವರೆಗೂ ಯಾವ ಪಕ್ಷಕ್ಕೂ ಅವರು ಸೇರಿಕೊಂಡಿಲ್ಲ. ಆದರೆ, ಮುಂಬರುವ ದಿನಗಳಲ್ಲಿ ಇವರಿಬ್ಬರೂ ರಾಜಕೀಯಕ್ಕೆ ಬರುವುದು ಖಚಿತ. ಆದರೆ, ರಾಜಕೀಯದಲ್ಲಿ ಯಶಸ್ವಿಯಾಗುತ್ತಾರೆಯೋ ಎಂಬುದು ಯಕ್ಷಪ್ರಶ್ನೆಯಾಗಿದೆ.

ರೀಲ್ ಹಾಗೂ ರಿಯಲ್‍ನಲ್ಲಿ ತುಂಬ ವ್ಯತ್ಯಾಸವಿರುತ್ತದೆ. ಏಕೆಂದರೆ, ರೀಲ್‍ನಲ್ಲಿ ಹೇಗೆ ಬೇಕಾದರೂ ತೋರಿಸಬಹುದು. ಆದರೆ, ನಿಜ ಜೀವನದಲ್ಲಿ ಅದಕ್ಕೆ ತದ್ವಿರುದ್ಧ. ಒಂದು ವೇಳೆ ಚಿತ್ರನಟರು ರಾಜಕೀಯಕ್ಕೆ ಬಂದರೆ ಜನರ ಮಧ್ಯೆ ಬೆರೆಯಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಪ್ರತಿದಿನ ಸಾವಿರಾರು ಸಮಸ್ಯೆಗಳ ಕರೆಗಳು ಬರುತ್ತವೆ. ಅಂತಹ ಸಮಯದಲ್ಲಿ ನಾಜೂಕಾಗಿ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು. ತಾಳ್ಮೆ, ಶ್ರದ್ಧೆ, ಪರಿಶ್ರಮವಿದ್ದರೆ ರಾಜಕೀಯದಲ್ಲಿ ಯಶಸ್ಸು ಸಾಧಿಸಬಹುದು. ಕೋಪ-ತಾಪವಿದ್ದರೆ ಖಂಡಿತ ರಾಜಕೀಯದಲ್ಲಿ ಯಶಸ್ಸು ಸಾಧಿಸಲು ಆಗುವುದಿಲ್ಲ.  ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕೀಯ ಹಾಗೂ ರಾಜಕಾರಣವೇ ಬೇರೆಬೇರೆ. ರಾಜಕೀಯ ಗೊತ್ತಿಲ್ಲದೆ ಕೆಲವರು ರಾಜಕಾರಣ ಮಾಡುತ್ತಾರೆ. ಹೀಗಾಗಿ ಚಿತ್ರನಟರು ರಾಜಕೀಯದ ಬಗ್ಗೆ ಚೆನ್ನಾಗಿ ತಿಳಿದುಕೊಂಡು ಬಂದರೆ ಪಾರದರ್ಶಕವಾಗಿ ಅಧಿಕಾರ ನಡೆಸಲು ಸಾಧ್ಯ.

Facebook Comments

Sri Raghav

Admin