ಕಿರಿಕಿರಿ ಉಂಟುಮಾಡುತ್ತಿರುವ ಮಳೆಯಿಂದ ರೋಸಿಹೋದ ಬೆಂಗಳೂರಿಗರು

ಈ ಸುದ್ದಿಯನ್ನು ಶೇರ್ ಮಾಡಿ

Bang-Rain--01

ಬೆಂಗಳೂರು, ಸೆ.2- ಮುಂಜಾನೆ ಆರಂಭವಾದ ಮಹಾ ಮಳೆ ನಗರದಲ್ಲಿ ಹಲವಾರು ಸಮಸ್ಯೆಗಳನ್ನು ಉಂಟು ಮಾಡಿದೆ. ಬೇಗೂರು ಕೆರೆ ಕೋಡಿ ಒಡೆದು ಅಕ್ಕಪಕ್ಕದ ಪ್ರದೇಶದ ಮನೆಗಳಿಗೆ ನೀರು ನುಗ್ಗಿ ಸಾಕಷ್ಟು ಅನಾಹುತ ಸೃಷ್ಟಿಸಿದೆ. ಹೊರಮಾವು ವಾರ್ಡ್‍ನ ಮುನೇಶ್ವರ ನಗರ , ರಾಮಮೂರ್ತಿ ನಗರ, ಕೋರಮಂಗಲ, ಎಚ್‍ಎಸ್‍ಆರ್ ಬಡಾವಣೆ 7ನೆ ಸೆಕ್ಟರ್, ಬೊಮ್ಮನಹಳ್ಳಿ, ಇಸ್ರೋ ಬಡಾವಣೆ ಮತ್ತಿತರ ಪ್ರದೇಶಗಳು ಜಲಾವೃತಗೊಂಡಿವೆ. ಮುನೇಶ್ವರ ನಗರದಲ್ಲಿ ಮೊಣಕಾಲುದ್ದ ನೀರು ನಿಂತಿದ್ದು ಸ್ಥಳೀಯರು ಮನೆ ನೀರನ್ನು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ. ಎಲ್ಲೆಡೆ ಚರಂಡಿ, ಮೋರಿಗಳು ತುಂಬಿ ಹರಿಯುತ್ತಿದ್ದು , ರಸ್ತೆಗಳಲ್ಲಿ ಕೊಳಚೆ ನೀರು ನಿಂತಿರುವುದರಿಂದ ಪಾದಚಾರಿಗಳು ಮತ್ತು ವಾಹನ ಸವಾರರು ಪರದಾಡುವಂತಾಗಿತ್ತು.

Bang-Rain--05

ರಾಮಮೂರ್ತಿ ನಗರದಲ್ಲಿ ರಾಜಕಾಲುವೆ ತುಂಬಿ ಹರಿದ ಪರಿಣಾಮ ಆ ಪ್ರದೇಶದ ಮುಖ್ಯ ರಸ್ತೆ ಜಲಾವೃತಗೊಂಡು ಪಕ್ಕದ ಚರ್ಚ್‍ನಲ್ಲೂ ಮೊಣಕಾಲುದ್ದ ನೀರು ನಿಂತಿತ್ತು. ಮಳೆಯ ಅಬ್ಬರಕ್ಕೆ ಬೆಳ್ಳಂದೂರು ಮತ್ತು ಯಮಲೂರು ಕೆರೆಗಳಲ್ಲಿ ನೊರೆ ಉತ್ಪತ್ತಿಯಾಗುತ್ತಿದ್ದು , ಗಾಳಿಗೆ ನೊರೆ , ವಾಹನ ಸವಾರರ ಮೇಲೆ ಹಾರಿ ಬರುತ್ತಿದೆ.

Bang-Rain--04

ಅದೇ ರೀತಿ ಮುದ್ದನಪಾಳ್ಯಮುಖ್ಯರಸ್ತೆ, ನಾಗರಬಾವಿ, ಸುಂಕದಕಟ್ಟೆ, ಪೀಣ್ಯ, ದಾಸರಹಳ್ಳಿ, ಮಡಿವಾಳ, ಹೊಸೂರು ರೋಡ್, ಲಗ್ಗೆರೆ, ಗೋವಿಂದರಾಜ ನಗರ, ಮೂಡಲಪಾಳ್ಯ ಮತ್ತಿತರ ಪ್ರದೇಶಗಳಲ್ಲೂ ಮಳೆ ಅವಾಂತರ ಸೃಷ್ಟಿಸಿದ್ದು , ಬೆಳ್ಳಂ ಬೆಳಗ್ಗೆ ಸಾರ್ವಜನಿಕರು ತಮ್ಮ ದೈನಂದಿನ ಕಾರ್ಯಗಳಿಗೆ ತೆರಳಲು ಹರಸಾಹಸ ಪಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

Bang-Rain--06

ಮೇಯರ್ ದೌಡು:

ಬೆಳಗ್ಗೆ ಮಳೆ ನಿಂತ ನಂತರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿರುವ ನಿಯಂತ್ರಣ ಕೊಠಡಿಗೆ ದೌಡಾಯಿಸಿ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ನಂತರ ಬೇಗೂರು , ಎಚ್‍ಎಸ್‍ಆರ್ ಲೇ ಔಟ್ ಮತ್ತಿತರ ಮಳೆ ಅನಾಹುತ ಪ್ರದೇಶಗಳಿಗೆ ತೆರಳಿ ಪರಿಶೀಲನೆ ನಡೆಸಿದರು. ಮಳೆ ಸಂತ್ರಸ್ತರ ನೆರವಿಗೆ ಧಾವಿಸುವಂತೆ ಬಿಬಿಎಂಪಿ ಸಿಬ್ಬಂದಿಗಳಿಗೆ ಅವರು ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.

Bang-Rain--03

Bang-Rain--02

Facebook Comments

Sri Raghav

Admin