ನನಗೆ ವಿಶೇಷ ಭದ್ರತೆ, ಗನ್‍ಮ್ಯಾನ್ ಬೇಡ ಎಂದ ನೂತನ ಗೃಹ ಸಚಿವ ರಾಮಲಿಂಗಾರೆಡ್ಡಿ

ಈ ಸುದ್ದಿಯನ್ನು ಶೇರ್ ಮಾಡಿ

ramalinga

ಬೆಂಗಳೂರು, ಸೆ.2-ನಾನು ಸಿಂಪಲ್ ಮ್ಯಾನ್. ನನಗೆ ಯಾವುದೇ ವಿಶೇಷ ಸೌಲಭ್ಯಗಳೂ ಬೇಡ. ಸಚಿವನಾಗಿ ಸಾಮಾನ್ಯನಂತೆ ಕರ್ತವ್ಯನಿರ್ವಹಿಸುತ್ತೇನೆ ಎಂದು ನೂತನ ಗೃಹ ಸಚಿವ ರಾಮಲಿಂಗಾರೆಡ್ಡಿ ಇಂದಿಲ್ಲಿ ಹೇಳಿದರು. ಮುಖ್ಯಮಂತ್ರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರನ್ನು ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಗೃಹ ಸಚಿವನಾಗಿದ್ದರೂ ಗೃಹ ಸಚಿವರಿಗೆ ನೀಡುವ ವಿಶೇಷ ಭದ್ರತಾ ಸಿಬ್ಬಂದಿ, ಗನ್‍ಮ್ಯಾನ್, ಬೆಂಗಾವಲು, ಅಂಗರಕ್ಷಕ, ಜೀರೋ ಟ್ರಾಫಿಕ್ ಸೌಲಭ್ಯ ಏನನ್ನೂ ಬಳಸುವುದಿಲ್ಲ ಎಂದು ತಿಳಿಸಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಉತ್ತಮವಾಗಿದೆ. ಚುನಾವಣಾ ವರ್ಷವಾಗಿರುವುದರಿಂದ ರಾಜಕೀಯ ಪಕ್ಷಗಳು ಅತಿಯಾದ ಕಾರ್ಯಚಟುವಟಿಕೆಗಳಲ್ಲಿ ತೊಡಗಿಕೊಂಡಿವೆ. ಇದು ಕಾನೂನು ಸುವ್ಯವಸ್ಥೆ ಮೇಲೆ ಯಾವುದೇ ಪರಿಣಾಮ ಬೀರದಂತೆ ಎಚ್ಚರ ವಹಿಸಬೇಕಿದೆ ಎಂದರು.

ರಾಜ್ಯದ ಪೊಲೀಸರು ದೇಶದಲ್ಲೇ ಉತ್ತಮ ಪೊಲೀಸರೆಂದು ಹೆಸರು ಪಡೆದಿದ್ದಾರೆ. ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಚೆನ್ನಾಗಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು. ಗೃಹ ಇಲಾಖೆಗೆ ಪ್ರತ್ಯೇಕ ಸಲಹೆಗಾರರು ಇರಬೇಕೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಸಮರ್ಥವಾಗಿ ಕೆಲಸ ಮಾಡಲು ಚಿಕ್ಕಮಗು ಸೇರಿದಂತೆ ಯಾರಾದರೂ ಸಲಹೆ ನೀಡಿದರೆ ಸ್ವೀಕರಿಸುತ್ತೇನೆ. ಮಾಧ್ಯಮದವರು, ಜನಸಾಮಾನ್ಯರು ನೀಡುವ ಸಲಹೆಗಳ ಅನುಸರಿಸುತ್ತೇನೆ. ಅಲ್ಲದೆ, ಪ್ರತಿಪಕ್ಷದ ನಾಯಕರು ನೀಡುವ ಸಲಹೆಗಳನ್ನೂ ಪರಿಗಣಿಸುತ್ತೇನೆ ಎಂದರು.

ಮಂಗಳೂರಿನಲ್ಲಿ ನಡೆದ ಕೋಮುಗಲಭೆ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಅದಕ್ಕೆ ಅಡ್ಡಿಪಡಿಸುವುದಿಲ್ಲ. ಪ್ರತಿಭಟನೆ ಹೆಸರಿನಲ್ಲಿ ಕಾನೂನು ಕೈಗೆತ್ತಿಕೊಳ್ಳಲು ಅವಕಾಶವಿಲ್ಲ. ಯಾರೇ ಆದರೂ ಅನಗತ್ಯವಾಗಿ ಶಾಂತಿ ಭಂಗ ಮಾಡಲು ಯತ್ನಿಸಿದರೆ ಕಠಿಣ ಕ್ರಮಕೈಗೊಳ್ಳುವುದಾಗಿ ಎಚ್ಚರಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರು ನಿನ್ನೆ ನಡೆದ ಪ್ರಮಾಣ ವಚನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಪರಮೇಶ್ವರ್ ಅವರಿಗೆ ಖಾಸಗಿ ಕೆಲಸವಿತ್ತು. ಹಾಗಾಗಿ ರಾಜಭವನಕ್ಕೆ ಬರಲಾಗುವುದಿಲ್ಲ ಎಂದು ನನ್ನ ಬಳಿ ಹೇಳಿದ್ದರು. ಉಳಿದಂತೆ ಯಾವುದೇ ಸಮಸ್ಯೆ ಇಲ್ಲ, ಪರಮೇಶ್ವರ್ ಅವರು ನನಗೆ ಕೋಮುಶತ್ರುಗಳ ವಿಷಯದಲ್ಲಿ ಎಚ್ಚರದಿಂದ ಇರುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಿದರು.

Facebook Comments

Sri Raghav

Admin