ನಿಶ್ಚಿತಾರ್ಥದ ದಿನವೇ ಯುವಕನಿಗೆ ಮಹೂರ್ತ ಇಟ್ಟು ಕೊಂದರು..!

ಈ ಸುದ್ದಿಯನ್ನು ಶೇರ್ ಮಾಡಿ

Murder-Turuvekerte--1

ತುಮಕೂರು, ಸೆ.2-ನಿಶ್ಚಿತಾರ್ಥ ದಿನದಂದೇ ದುಷ್ಕರ್ಮಿಗಳು ಯುವಕನನ್ನು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಕೊಲೆ ಮಾಡಿ ನಂತರ ಕಾರಿನೊಳಗೆ ಹಾಕಿ ಬೆಂಕಿ ಹಚ್ಚಿರುವ ದಾರುಣ ಘಟನೆ ತುರುವೇಕೆರೆ ತಾಲೂಕಿನ ದಂಡಿನಶಿವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ತುರುವೇಕೆರೆ ತಾಲೂಕು ದಂಡಿನಶಿವರ ಹೋಬಳಿ ಹಾಲಗೊಂಡನಹಳ್ಳಿ ನಿವಾಸಿ ಚನ್ನಬಸವಯ್ಯ ಎಂಬುವರ ಪುತ್ರ ಹಂಸಕುಮಾರ್(30) ಕೊಲೆಯಾದ ಯುವಕ.

ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಹಂಸಕುಮಾರ್‍ಗೆ ಬಾಗಲಕೋಟೆ ಬಳಿಯ ಮಸ್ತಿಕೋಟೆ ಗ್ರಾಮದ ಯುವತಿಯೊಂದಿಗೆ ಇಂದು ಮದುವೆ ನಿಶ್ಚಿತಾರ್ಥಕ್ಕೆ ದಿನಾಂಕ ನಿಗದಿಪಡಿಸಲಾಗಿತ್ತು. ನಿನ್ನೆ ಕುಟುಂಬದವರೆಲ್ಲ ನಿಶ್ಚಿತಾರ್ಥ ಸಂಬಂಧ ಬಾಗಲಕೋಟೆಗೆ ಹೋಗಲು ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದರು. ಸಂಜೆ ಹಂಸಕುಮಾರ್ ಸ್ನೇಹಿತನಿಂದ ಹಣ ತೆಗೆದುಕೊಂಡು ಬರುವುದಾಗಿ ಹೇಳಿ ತನ್ನ ಕಾರಿನಲ್ಲಿ ಹೊರಗೆ ಹೋಗಿದ್ದಾನೆ.
ರಾತ್ರಿ 8.30 ರಿಂದ 9 ರ ಸಮಯದಲ್ಲಿ ಹಂಸಕುಮಾರ್ ಮನೆಗೆ ದೂರವಾಣಿ ಕರೆ ಮಾಡಿ ಹಣದ ವ್ಯವಸ್ಥೆಯಾಗಿದೆ. ನಾನು ಬರುತ್ತಿದ್ದೇನೆ ಎಂದು ಹೇಳಿದ್ದಾನೆ.

ಆದರೆ ರಾತ್ರಿ 11 ಗಂಟೆಯಾದರೂ ಹಂಸಕುಮಾರ್ ಮನೆಗೆ ಬಾರದಿರುವುದರಿಂದ ಪೋಷಕರು ಹಲವು ಬಾರಿ ದೂರವಾಣಿ ಕರೆ ಮಾಡಿದರೂ ಕರೆ ಸ್ವೀಕರಿಸಲಿಲ್ಲ.  ಇದರಿಂದ ಆತಂಕಗೊಂಡ ಪೋಷಕರು ಹುಡುಕಲಾರಂಭಿಸಿದಾಗ ಬೆಳಗಿನ ಜಾವ 3 ಗಂಟೆಯಲ್ಲಿ ಹಾಲಗೊಂಡನಹಳ್ಳಿಯ ಊರಿನ ಮುಂಭಾಗದಲ್ಲಿ ಕರಕಲಾಗಿದ್ದ ಕಾರನ್ನು ಗುರುತಿಸಿದ್ದಾರೆ. ಇದು ತಮ್ಮ ಮಗನದೇ ಕಾರೆಂದು ತಿಳಿದು ಕುಟುಂಬಸ್ಥರು ಸಮೀಪ ಹೋಗಿ ನೋಡಿದಾಗ ಅದರಲ್ಲಿ ಸುಟ್ಟು ಕರಕಲಾಗಿದ್ದ ಹಂಸಕುಮಾರ್ ದೇಹ ಕಂಡು ದುಃಖದ ಕಟ್ಟೆ ಒಡೆದಿದೆ.

ನಂತರ ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದು, ಎಎಸ್‍ಐ ಶೆಟ್ಟಳ್ಳಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ ಕೊಲೆಯಾದ ಸ್ಥಳದಿಂದ 100 ಮೀಟರ್ ಅಂತರದಲ್ಲಿ ರಕ್ತದ ಕಲೆ, ಕೆಲವು ಚೀಟಿಗಳು ಹಾಗೂ ಮೊಬೈಲ್‍ನ ತುಣುಕುಗಳು ಪತ್ತೆಯಾಗಿವೆ. ದುಷ್ಕರ್ಮಿಗಳು ತಡರಾತ್ರಿ ಈತ ಕಾರಿನಲ್ಲಿ ಊರಿಗೆ ಬರುತ್ತಿರುವುದನ್ನು ಹೊಂಚು ಹಾಕಿ ಕಾರು ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿ ನಂತರ ಶವವನ್ನು ಕಾರಿನಲ್ಲಿ ಹಾಕಿ ನಂತರ ಕಾರು ಸಮೇತ ಪೆಟ್ರೋಲ್ ಸುರಿದು ಸುಟ್ಟು ಹಾಕಿರಬಹುದೆಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾಗೋಪಿನಾಥ್ ಈ ಸಂಜೆಯೊಂದಿಗೆ ಮಾತನಾಡಿ, ರಾತ್ರಿ 1.30-2 ಗಂಟೆ ಸಮಯದಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿ ಬೆಂಕಿ ಹಚ್ಚಿರುವ ಬಗ್ಗೆ ಮಾಹಿತಿ ಬಂದಿದೆ.

ದುಷ್ಕರ್ಮಿಗಳ ಪತ್ತೆಗಾಗಿ ವಿಶೇಷ ತಂಡ ರಚಿಸಲಾಗಿದೆ. ಅಲ್ಲದೆ, ತಿಪಟೂರು, ಕುಣಿಗಲ್ ಡಿವೈಎಸ್ಪಿಗಳಿಗೂ ತನಿಖೆ ಜವಾಬ್ದಾರಿ ನೀಡಲಾಗಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆ ಕೊಲೆ ರಹಸ್ಯ ಭೇದಿಸುವುದಾಗಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು ನಿಶ್ಚಿತಾರ್ಥ ನಡೆಯಬೇಕಿದ್ದ ದಿನವೇ ಈತನ ಕೊಲೆ ನಡೆದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.  ಆಸ್ತಿ ವಿವಾದದಿಂದ ಕೊಲೆ ನಡೆದಿದೆಯೋ ಅಥವಾ ಈತ ಯಾರನ್ನಾದರೂ ಪ್ರೀತಿಸುತ್ತಿದ್ದನೋ, ಆಗೊಂದು ವೇಳೆ ಪ್ರೀತಿಸಿದ್ದರೆ ಯುವತಿ ಕಡೆಯವರೇ ಈತನನ್ನು ಕೊಲೆ ಮಾಡಿರಬಹುದೇ ಅಥವಾ ಅನೈತಿಕ ಸಂಬಂಧವೇನಾದರೂ ಇತ್ತೇ ಎಂಬಿತ್ಯಾದಿ ವಿಷಯಗಳ ಬಗ್ಗೆ ಪೊಲೀಸರು ಹಲವು ಮಾಹಿತಿಗಳನ್ನು ಕಲೆ ಹಾಕುತ್ತಿದ್ದಾರೆ.

Facebook Comments
( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ )

Sri Raghav

Admin