ಬಹುನಿರೀಕ್ಷಿತ ಕೇಂದ್ರ ಸಂಪುಟ ವಿಸ್ತರಣೆಗೆ ಕ್ಷಣಗಣನೆ, ಕರ್ನಾಟಕಕ್ಕೆ 2 ಸಚಿವ ಸ್ಥಾನ

ಈ ಸುದ್ದಿಯನ್ನು ಶೇರ್ ಮಾಡಿ

Modi--01

ನವದೆಹಲಿ, ಸೆ.2- ಬಹುನಿರೀಕ್ಷಿತ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಾಳೆ ನಡೆಯಲಿದ್ದು, ಕರ್ನಾಟಕದಿಂದ ಇಬ್ಬರಿಗೆ ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದೆ. ನಾಳೆ ಬೆಳಗ್ಗೆ 10 ಗಂಟೆಗೆ ರಾಷ್ಟ್ರಪತಿ ಭವನದ ಐತಿಹಾಸಿಕ ದರ್ಬಾರ್ ಹಾಲ್‍ನಲ್ಲಿ ನಡೆಯಲಿರುವ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಂಪುಟಕ್ಕೆ ಸುಮಾರು 16 ಮಂದಿ ಸಚಿವರು ಸಂಪುಟಕ್ಕೆ ಸೇರ್ಪಡೆಯಾಗಲಿದ್ದಾರೆ. ಎನ್‍ಡಿಎ ಸರ್ಕಾರದ ಬಹುತೇಕ ಕೊನೆಯ ಸಂಪುಟ ವಿಸ್ತರಣೆ ಇದಾಗಲಿದ್ದು, ಗುಜರಾತ್, ಹಿಮಾಚಲ ಪ್ರದೇಶ, ಕರ್ನಾಟಕ ಹಾಗೂ ಮುಂದಿನ ವರ್ಷ ನಡೆಯಲಿರುವ ಮಧ್ಯಪ್ರದೇಶ, ರಾಜಸ್ತಾನ ಮತ್ತು ಛತ್ತೀಸ್‍ಗಢ್ ರಾಜ್ಯಗಳ ವಿಧಾನಸಭೆ ಚುನಾವಣೆ ಗಮನದಲ್ಲಿಟ್ಟುಕೊಂಡು ಸಮತೋಲನದ ಸಂಪುಟ ವಿಸ್ತರಣೆ ಮಾಡಲು ಪ್ರಧಾನಿ ನರೇಂದ್ರ ಮೋದಿ ಕಸರತ್ತು ನಡೆಸುತ್ತಿದ್ದಾರೆ.

ನಾಳೆ ಸಂಜೆ ಚೀನಾದಲ್ಲಿ ನಡೆಯಲಿರುವ ಬ್ರಿಕ್ಸ್ ಸಮ್ಮೇಳನಕ್ಕೆ ಮೋದಿ ತೆರಳುತ್ತಿದ್ದಾರೆ. ಇದಕ್ಕೂ ಮುನ್ನವೇ ಸಂಪುಟ ವಿಸ್ತರಣೆ ಮಾಡಲು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ಹಿರಿಯ ಸಚಿವರಾದ ಅರುಣ್‍ಜೇಟ್ಲಿ, ರಾಜನಾಥ್‍ಸಿಂಗ್, ರವಿಶಂಕರ್‍ಪ್ರಸಾದ್ ಸೇರಿದಂತೆ ಆರ್‍ಎಸ್‍ಎಸ್ ನಾಯಕರ ಜತೆ ಗುಪ್ತ ಸಮಾಲೋಚನೆ ನಡೆಸಿದ್ದಾರೆ.

ಮಿಷನ್ 350:

2019ರ ಲೋಕಸಭೆ ಚುನಾವಣೆ ಕೇಂದ್ರೀಕರಿಸಿ ನರೇಂದ್ರ ಮೋದಿ ಸಂಪುಟ ವಿಸ್ತರಣೆಗೆ ಕೈ ಹಾಕಿದ್ದು, ಹೊಸ ಮುಖಗಳಿಗೆ ಆದ್ಯತೆ ನೀಡಲಿದ್ದಾರೆ. ಈ ಪ್ರಕಾರ ಈವರೆಗೂ ಸಂಘಟನೆಯಲ್ಲಿ ತೊಡಗಿಕೊಂಡಿದ್ದ ರಾಮ್‍ಮಾದವ್, ಕರ್ನಾಟಕದ ಉಸ್ತುವಾರಿ ಮುರಳೀಧರರಾವ್, ಕರ್ನಾಟಕದವರೇ ಆದ ಪ್ರಹ್ಲಾದ್ ಜೋಷಿ, ಸುರೇಶ್ ಅಂಗಡಿ, ಪ್ರಹ್ಲಾದ್ ಪಾಟೀಲ್, ಸತ್ಯಪಾಲ್‍ಸಿಂಗ್ ಹಾಗೂ ಪಶ್ಚಿಮ ಬಂಗಾಳ, ಒಡಿಶಾ, ತೆಲಂಗಾಣ, ಬಿಹಾರ, ಗುಜರಾತ್, ರಾಜಸ್ತಾನ ರಾಜ್ಯಗಳಿಗೂ ಸಂಪುಟದಲ್ಲಿ ಸ್ಥಾನಮಾನ ಸಿಗುವ ಸಂಭವವಿದೆ.

ಖಾತೆಗಳ ಬದಲಾವಣೆ:

ನಾಳೆ ನಡೆಯಲಿರುವ ಸಂಪುಟ ವಿಸ್ತರಣೆಯಲ್ಲಿ ಕೆಲವು ಸಚಿವರ ಖಾತೆಗಳು ಬದಲಾಗುವ ಸಾಧ್ಯತೆ ಇದೆ. ರಕ್ಷಣೆ ಖಾತೆಯನ್ನು ಹೊಂದಿರುವ ಅರುಣ್ ಜೈಟ್ಲಿ ಬದಲಿಗೆ ಹಾಲಿ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವೆಡ್ಕರ್ ಅವರಿಗೆ ರಕ್ಷಣಾ ಖಾತೆ ಸಿಗಲಿದೆ ಎನ್ನಲಾಗಿದೆ. ಪದೇ ಪದೇ ರೈಲು ಅಪಘಾತದಿಂದ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿರುವ ಸುರೇಶ್‍ಪ್ರಭು ಖಾತೆ ಬಹುತೇಕ ಬದಲಾಗಲಿದ್ದು, ಹಾಲಿ ರಾಷ್ಟ್ರೀಯ ಭೂ ಹೆದ್ದಾರಿ ಸಚಿವ ನಿತೀನ್‍ಗಡ್ಕರಿಗೆ ರೈಲ್ವೆ ಹೊಣೆಗಾರಿಕೆ ಸಿಗಲಿದೆ. ರಾಮ್‍ಮಾದವ್‍ಗೆ ಮಾನವ ಸಂಪನ್ಮೂಲ ಹೊಣೆಗಾರಿಕೆ ನಿಭಾಯಿಸಬೇಕಾಗುತ್ತದೆ.  ಇನ್ನು ಕರ್ನಾಟಕದವರೇ ಆದ ಹಾಲಿ ಸಂಸದೀಯ ವ್ಯವಹಾರಗಳ ಸಚಿವ ಅನಂತ್‍ಕುಮಾರ್‍ಗೆ ನಗರಾಭಿವೃದ್ಧಿ ಖಾತೆ ಸಿಕ್ಕರೆ ಸ್ಮೃತಿ ಇರಾನಿಗೆ ಹೆಚ್ಚುವರಿ ಖಾತೆ ದಕ್ಕುವ ನಿರೀಕ್ಷೆ ಇದೆ.
ಒಟ್ಟು 9 ಸಚಿವರು ಹೊಸದಾಗಿ ಸಂಪುಟಕ್ಕೆ ಸೇರ್ಪಡೆಯಾದರೆ, 6 ಮಂದಿ ಸಚಿವರು ರಾಜ್ಯ ಖಾತೆಯಿಂದ ಸಂಪುಟಕ್ಕೆ ಮುಂಬಡ್ತಿ ಪಡೆಯಲಿದ್ದಾರೆ.

ಜೋಶಿ, ಅಂಗಡಿಗೆ ಮಣೆ:

ಇನ್ನು ಕರ್ನಾಟಕದಿಂದ ಇದೇ ಮೊದಲ ಬಾರಿಗೆ ಧಾರವಾಡ ಸಂಸದ ಪ್ರಹ್ಲಾದ್ ಜೋಶಿ, ಬೆಳಗಾವಿ ಸಂಸದ ಸುರೇಶ್ ಅಂಗಡಿ ಸಂಪುಟಕ್ಕೆ ಸೇರ್ಪಡೆಯಾಗುವುದು ಬಹುತೇಕ ಖಚಿತವಾಗಿದೆ. ಕೊನೆಯ ಕ್ಷಣದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ನಳೀನ್‍ಕುಮಾರ್ ಕಟೀಲ್, ಉಡುಪಿ-ಚಿಕ್ಕಮಗಳೂರಿನ ಶೋಭಾ ಕರಂದ್ಲಾಜೆ, ಬಳ್ಳಾರಿಯ ಶ್ರೀರಾಮುಲು ಸೇರಿದಂತೆ ಮೂವರಲ್ಲಿ ಯಾರಾದರು ಒಬ್ಬರು ಸಂಪುಟಕ್ಕೆ ಸೇರ್ಪಡೆಯಾಗಬಹುದು.
ಉಳಿದಂತೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಡಿ.ವಿ.ಸದಾನಂದಗೌಡರನ್ನು ಸಂಪುಟದಲ್ಲಿ ಉಳಿಸಿಕೊಳ್ಳಲು ಮೋದಿ ತೀರ್ಮಾನಿಸಿದ್ದಾರೆ.

Facebook Comments

Sri Raghav

Admin