ಬಿಹಾರ ಕಾಂಗ್ರೆಸ್ ನಲ್ಲಿ ಬಿರುಕು : ಜೆಡಿಯು ಪಾಳೆಯಕ್ಕೆ ಜಿಗಿಯಲು 14 ಶಾಸಕರು ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Bihar-Congress

ಪಾಟ್ನಾ/ನವದೆಹಲಿ, ಸೆ.2-ರಾಜಕೀಯ ಹೈಡ್ರಾಮಾಗಳಿಗೆ ಸಾಕ್ಷಿಯಾಗಿರುವ ಬಿಹಾರದಲ್ಲಿ ಮತ್ತೊಂದು ಮಹತ್ವದ ಬೆಳವಣಿಗೆಯಾಗಿದ್ದು, ಕಾಂಗ್ರೆಸ್ ಪಕ್ಷ ಇಬ್ಭಾಗದತ್ತ ಸಾಗುತ್ತಿದೆ. ಕೈ ಪಕ್ಷದ ವಿರುದ್ಧ ಬಂಡಾಯ ಕಹಳೆ ಮೊಳಗಿಸಿ ತೋಳು ಮಡಚಿರುವ 14 ಶಾಸಕರು ಆಡಳಿತಾರೂಢ ಸಂಯುಕ್ತ ಜನತಾದಳ (ಜೆಡಿಯು) ಸೇರ್ಪಡೆಯಾಗಲು ತುದಿಗಾಲಲ್ಲಿ ನಿಂತಿದ್ದಾರೆ.  ಗುಜರಾತ್‍ನಲ್ಲಿ 44 ಕಾಂಗ್ರೆಸ್ ಶಾಸಕರ ಮೇಲಾಟದಿಂದ ಹೈರಾಣವಾಗಿದ್ದ ಕಾಂಗ್ರೆಸ್ ವರಿಷ್ಠ ಮಂಡಳಿಗೆ ಈಗ ಬಿಹಾರದ ಮತ್ತೊಂದು ತಲೆನೋವು ಎದುರಾಗಿದೆ.

ಈ ಬೆಳವಣಿಗೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಬಿಹಾರದ ಇಬ್ಬರು ಹಿರಿಯ ನಾಯಕರೊಂದಿಗೆ ಚರ್ಚಿಸಿ ಪಕ್ಷ ವಿಭಜನೆಯಾಗುವುದನ್ನು ಶತಾಯಗತಾಯ ತಡೆಗಟ್ಟಬೇಕೆಂದು ಕಟ್ಟಪ್ಪಣೆ ಮಾಡಿದ್ದಾರೆ. ಬಿಹಾರ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಚೌಧರಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ (ಸಿಎಲ್‍ಪಿ) ನಾಯಕ ಸದಾನಂದ ಸಿಂಗ್ ಅವರು ದೆಹಲಿಯಲ್ಲಿದ್ದು ಮುಂದಿನ ನಡೆ ಕುರಿತು ಹೈಕಮಾಂಡ್ ಜೊತೆ ಚರ್ಚಿಸುತ್ತಿದ್ದಾರೆ. ಸೋನಿಯಾ ಗಾಂಧಿ, ಪಕ್ಷದ ವರಿಷ್ಠರಾದ ಗುಲಾಂ ನಬಿ ಅಜಾದ್, ಅಹ್ಮದ್ ಪಟೇಲ್ ಮತ್ತು ಸಿ.ಪಿ. ಜೋಷಿ ಮೊದಲಾದವರು ಪಕ್ಷಕ್ಕೆ ತೇಪೆ ಹಾಕುವ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿದ್ದಾರೆ.

14 ಬಂಡಾಯ ಶಾಸಕರು ಒಗ್ಗೂಡಿ ಕೈ ಪಕ್ಷಕ್ಕೆ ಕೈ ಕೊಟ್ಟು ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ ಜೆಡಿಯು-ಬಿಜೆಪಿ ಮೈತ್ರಿಕೂಟದೊಂದಿಗೆ ಕೈಜೋಡಿಸಲು ಸಜ್ಜಾಗಿದ್ದಾರೆ. ಇದಕ್ಕಾಗಿ ತಮ್ಮದೇ ಆದ ಗುಂಪನ್ನು ಕಟ್ಟಿಕೊಂಡಿದ್ದಾರೆ. ಪ್ರಸ್ತುತ ಬಿಹಾರದಲ್ಲಿ 27 ಕಾಂಗ್ರೆಸ್ ಶಾಸಕರು ಮತ್ತು ಆರು ಮಂದಿ ವಿಧಾನಪರಿಷತ್ ಸದಸ್ಯರಿದ್ದಾರೆ. ಇವರಲ್ಲಿ ನಾಲ್ವರು ಈ ಹಿಂದೆ ಮಹಾಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದರು.

ಆರ್‍ಜೆಡಿ ಮತ್ತು ಕಾಂಗ್ರೆಸ್ ಸಖ್ಯ ತೊರೆದು ನಿತೀಶ್ ಕುಮಾರ್ ಬಿಜೆಪಿ ಜೊತೆ ಕೈಜೋಡಿಸಿದ ನಂತರ ರಾಜ್ಯದಲ್ಲಿ ಅನೇಕ ರಾಜಕೀಯ ವಿದ್ಯಮಾನಗಳಿಗೆ ಕಾರಣವಾಗುತ್ತಿದೆ. ಇವೆಲ್ಲದರ ನಡುವೆ ಕಾಂಗ್ರೆಸ್ 14 ಬಂಡಾಯ ಶಾಸಕರು ಜೆಡಿಯು ಪಾಳೆಯಕ್ಕೆ ಜಿಗಿದು ನಿಗಮ-ಮಂಡಳಿಗಳಲ್ಲಿ ಸ್ಥಾನ ಪಡೆಯುವ ಬಯಕೆ ಹೊಂದಿದ್ದಾರೆ.  ಮಹಾಮೈತ್ರಿ ಮುರಿದು ಬಿದ್ದ ನಂತರ ಬಿಹಾರ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತೀಯ ಚಟುವಟಿಕೆ ತೀವ್ರಗೊಂಡಿದೆ. ಪರಿಸ್ಥಿತಿಯನ್ನು ತಿಳಿಗೊಳಿಸಲು ವರಿಷ್ಠರು ಯತ್ನಗಳನ್ನು ಮುಂದುವರಿಸಿರುವಾಗಲೇ ಈ ಬೆಳವಣಿಗೆಯಾಗಿದೆ.

ಪಕ್ಷದಲ್ಲಿ ಭಿನ್ನಾಭಿಪ್ರಾಯ ಇದೆ. ಆದರೆ ಅದನ್ನು ಬಗೆಹರಿಸಲಾಗುವುದು. ಬಂಡಾಯ ಶಾಸಕರೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ. ಪಕ್ಷಕ್ಕ ಆತಂಕವಿಲ್ಲ. ಮುಖ್ಯಮಂತ್ರಿ ನಿತೀಶ್ ಕುಮಾರ್ ಸ್ವಾರ್ಥಕ್ಕಾಗಿ ಪಕ್ಷವನ್ನು ದುರ್ಬಲಗೊಳಿಸಲು ಯತ್ನಿಸುತ್ತಿದ್ದಾರೆ ಎಂದು ಕಾಂಗ್ರೆಸ್ ವರಿಷ್ಠರು ಆರೋಪಿಸಿದ್ದಾರೆ.
ಮುಂದಿನ ವಿದ್ಯಮಾನ ಕುತೂಹಲ ಕೆರಳಿಸಿದೆ.

Facebook Comments

Sri Raghav

Admin