ಲಿಂಗಾಯಿತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ 3 ಬೃಹತ್ ಸಮಾವೇಶ

ಈ ಸುದ್ದಿಯನ್ನು ಶೇರ್ ಮಾಡಿ

Swamji

ಬೆಂಗಳೂರು, ಸೆ.2-ಲಿಂಗಾಯಿತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆಗೆ ಆಗ್ರಹಿಸಿ ಮೂರು ಹಂತದಲ್ಲಿ ಬೃಹತ್ ಸಮಾವೇಶ ನಡೆಸಲಾಗುವುದು ಎಂದು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಇಂದಿಲ್ಲಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರಾಷ್ಟ್ರದ ಲಾಥೋರ್‍ನಲ್ಲಿ ಮೊದಲ ಸಮಾವೇಶವನ್ನು ನಡೆಸಲಾಗುವುದು. ಎರಡನೇ ಸಮಾವೇಶವನ್ನು ಕಲಬುರಗಿಯಲ್ಲಿ ಹಾಗೂ ಮೂರನೇ ಸಮಾವೇಶವನ್ನು ಡಿಸೆಂಬರ್ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆಸಲಾಗುವುದು ಎಂದರು.

ಈ ಸಮಾವೇಶಗಳು ಲಿಂಗಾಯುತರ ಶಕ್ತಿ ಪ್ರದರ್ಶನವಲ್ಲ. ಲಿಂಗಾಯಿತರ ಸ್ವಾಭಿಮಾನ ಮತ್ತು ಬದುಕಿನ ಸಮಾವೇಶ. ಇದರಲ್ಲಿ ರಾಜಕೀಯ ಅಜೆಂಡಾ ಇರುವುದಿಲ್ಲ. 12ನೇ ಶತಮಾನದಲ್ಲಿ ಬಸವಣ್ಣ ಸ್ಥಾಪಿಸಿದ ಲಿಂಗಾಯಿತ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಬೇಕು ಎಂಬುದು ನಮ್ಮ ಆಗ್ರಹವಾಗಿದೆ ಎಂದು ತಿಳಿಸಿದರು. ಪ್ರತ್ಯೇಕ, ಸ್ವತಂತ್ರ ಧರ್ಮ ಮುಖ್ಯವಲ್ಲ. ನಮ್ಮ ಧರ್ಮಕ್ಕೆ ಸಾಂವಿಧಾನಿಕ ಮಾನ್ಯತೆ ಸಿಗಬೇಕು ಎಂದ ಅವರು, ಪಂಚಪೀಠದವರು ವೀರಶೈವರಿಗೆ ಬೆಂಬಲ ನೀಡುತ್ತಿದ್ದಾರೆ ಎಂದು ಅಪಪ್ರಚಾರ ಮಾಡಲಾಗಿದೆ. ನಾವೂ ಕೂಡ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಶ್ರೀಗಳೊಂದಿಗೆ ಮಾತುಕತೆ ನಡೆಸಿದ್ದೆವು. ಅವರು ಎಲ್ಲರೂ ಒಟ್ಟಾಗಿ ಹೋಗಿ ಎಂದು ಸಲಹೆ ನೀಡಿದ್ದರು. ಸುತ್ತೂರು ಶ್ರೀಗಳು ಕೂಡ ಗೊಂದಲ ಬಗೆಹರಿಸಿಕೊಂಡು ಸಮುದಾಯದ ಹಿತಾಸಕ್ತಿ ಹಿನ್ನೆಲೆಯಲ್ಲಿ ಒಂದಾಗಿ ಹೋಗಬೇಕೆಂಬ ಸಲಹೆ ನೀಡಿದ್ದಾರೆ ಎಂದರು.

ಲಿಂಗಾಯಿತ ಪ್ರತ್ಯೇಕ ಧರ್ಮ ಹೋರಾಟ ಸಮಿತಿಯ ಸಂಚಾಲಕ ಜಾಮದಾರ್ ಮಾತನಾಡಿ, ಲಿಂಗಾಯಿತ ಧರ್ಮಕ್ಕಾಗಿ ಕಳೆದ ಒಂದು ತಿಂಗಳಿನಿಂದ ನಡೆಯುತ್ತಿರುವ ಹೋರಾಟ ಕುರಿತು ಚರ್ಚೆಗಳು ನಡೆಯುತ್ತಿದೆ. ನಾವು ಚರ್ಚೆಗೆ ಸದಾ ಸಿದ್ದರಾಗಿದ್ದೇವೆ. ಆದರೆ, ಚರ್ಚೆ, ಪುರಾಣಗಳನ್ನು ಆಧರಿಸಿ ಇರಬಾರದು. ವೈಚಾರಿಕ, ವಾಸ್ತವಕ್ಕೆ ಹತ್ತಿರವಾಗಿ ಇರಬೇಕೆಂದು ಹೇಳಿದರು.

ವಚನ ಸಾಹಿತ್ಯವನ್ನು ನೂರು ವರ್ಷಗಳ ಹಿಂದೆ ಮೂಲೆಗುಂಪು ಮಾಡಲಾಗಿತ್ತು. ಯಾರು ಇದನ್ನು ಮಾಡಿದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ವೀರಶೈವ ಮಹಾಸಭಾ ಪ್ರಾರಂಭವಾದ ಮೇಲೆ 22ಸಾವಿರ ವಚನಗಳನ್ನು ಪ್ರಕಟಗೊಳಿಸಲಾಯಿತು ಎಂದರು. ವಿರಕ್ತ ಮಠಗಳ ಶ್ರೀಗಳಿಗಿಂತ ಮೇಲೆ ಕೂರುತ್ತಿದ್ದ ಪಂಚಪೀಠ ಶ್ರೀಗಳು ಲಿಂಗಾಯಿತ ಮತದ ಚರ್ಚೆ ಪ್ರಾರಂಭವಾದ ಮೇಲೆ ಸಮನಾಗಿ ಕೂರಲು ಪ್ರಾರಂಭಿಸಿದ್ದಾರೆ. ಬಸವಣ್ಣನವರ ಪೋಟೋ ಕೂಡ ನೋಡಲು ಬಯಸದ ಪಂಚಪೀಠಾಧ್ಯಕ್ಷರು ಈಗ ಬಸವ ಜಯಂತಿ ಮಾಡಲು ಮುಂದಾಗಿದ್ದಾರೆ ಎಂದು ತಿಳಿಸಿದರು.

ಬದಲಾವಣೆಗಳು ಆಗುತ್ತಿರುವುದು ಉತ್ತಮ ಬೆಳವಣಿಗೆ. ವೈದಿಕ ಆಚರಣೆಯನ್ನು ಆರಾಧಿಸುತ್ತಿದ್ದವರು ಈಗ ವಿರೋಧಿಸುತ್ತಿದ್ದಾರೆ ಎಂದು ಹೇಳಿದರು.
ಲಿಂಗಾಯಿತ ಧರ್ಮಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ಬಗೆಹರಿಸಲು ಸರ್ಕಾರ ತಜ್ಞರ ಸಮಿತಿ ರಚಿಸಬೇಕೆಂದು ಇದೇ ವೇಳೆ ಒತ್ತಾಯಿಸಿದರು.

Facebook Comments

Sri Raghav

Admin