ಸಂಪುಟ ವಿಸ್ತರಣೆ ಬೆನ್ನಲ್ಲೆ ಭಿನ್ನಮತ ಸ್ಫೋಟ, ಎಲೆಕ್ಷನ್ ಮೇಲೆ ಎಫೆಕ್ಟ್..!

ಈ ಸುದ್ದಿಯನ್ನು ಶೇರ್ ಮಾಡಿ

Sonia--Siddaramaiah

ಬೆಂಗಳೂರು, ಸೆ.2-ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೆ ರಾಜ್ಯ ಕಾಂಗ್ರೆಸ್‍ನಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರ ನಡುವೆ ಅಸಮಾಧಾನ ಉಲ್ಬಣಗೊಂಡಿದ್ದು, ಮುಂಬರುವ ಚುನಾವಣೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಹೆಚ್ಚಾಗಿದೆ. ಕಾಂಗ್ರೆಸ್ ಪರವಾದ ಸಮೀಕ್ಷೆ, ಚುರುಕಾದ ಪಕ್ಷ ಸಂಘಟನೆ, ಸರ್ಕಾರದ ಜನಪರ ಕಾರ್ಯಕ್ರಮಗಳ ನಡುವೆ ಕೆಪಿಸಿಸಿ ಅಧ್ಯಕ್ಷರು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಹಲವು ಹಿರಿಯ ಸಚಿವರ ನಡುವೆ ಎದ್ದಿರುವ ಭಿನ್ನಮತದಿಂದ ವ್ಯತಿರಿಕ್ತ ಪರಿಣಾಮ ಬೀರುವ ಸಾಧ್ಯತೆ ಇದೆ.

ಕೆಪಿಸಿಸಿ ಪದಾಧಿಕಾರಿಗಳ ನೇಮಕಾತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಾತನ್ನು ಪರಮೇಶ್ವರ್ ಅವರು ಕೇಳಲಿಲ್ಲ. ಸಿದ್ದು ಬಣದ ರಾಮಚಂದ್ರಪ್ಪ, ರೇವಣ್ಣ, ಉಗ್ರಪ್ಪ ಮುಂತಾದವರನ್ನು ಪಕ್ಷದ ಹುದ್ದೆಗಳಿಂದ ಮುಲಾಜಿಲ್ಲದೆ ತೆಗೆದು ಹಾಕಲಾಯಿತು. ಸರ್ಕಾರದ ತೀರ್ಮಾನಗಳಲ್ಲಿ ಅಂದರೆ ಮೇಲ್ಮನೆ ನೇಮಕಾತಿ, ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರ ಯಾವ ಮಾತನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಗಣನೆಗೆ ತೆಗೆದುಕೊಳ್ಳಲಿಲ್ಲ. ವಿಧಾನ ಪರಿಷತ್‍ಗೆ ಜಿ.ಸಿ.ಚಂದ್ರಶೇಖರ್ ಅವರನ್ನು ನೇಮಕ ಮಾಡಬೇಕು ಎಂದು ಡಾ.ಜಿ.ಪರಮೇಶ್ವರ್ ಅವರು ಪ್ರಬಲ ಪ್ರಯತ್ನ ನಡೆಸಿದ್ದರು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಹೈಕಮಾಂಡ್ ಅನುಮತಿ ಪಡೆದು ತಮ್ಮ ಪರಮಾಪ್ತ ಸಿ.ಎಂ.ಇಬ್ರಾಹಿಂ ಅವರನ್ನು ನೇಮಕ ಮಾಡುವಲ್ಲಿ ಯಶಸ್ವಿಯಾದರು.

ರಾಹುಲ್‍ಗಾಂಧಿ ಅವರು ರಾಜ್ಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಜೆಡಿಎಸ್ ಬಂಡಾಯ ಶಾಸಕರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ವಿಷಯ ಪ್ರಸ್ತಾಪಿಸಿ ಅನುಮತಿ ಪಡೆದಿದ್ದರು. ಕೆಪಿಸಿಸಿ ಅಧ್ಯಕ್ಷರೊಂದಿಗೆ ಈ ಬಗ್ಗೆ ಸಮಾಲೋಚನೆ ನಡೆಸಿರಲಿಲ್ಲ ಎನ್ನಲಾಗಿದೆ. ಇದರಿಂದ ಕೆಪಿಸಿಸಿ ಅಧ್ಯಕ್ಷರಾಗಿರುವ ಪರಮೇಶ್ವರ್ ಸಹಜವಾಗಿಯೇ ಅಸಮಾಧಾನಗೊಂಡಿದ್ದಾರೆ.

ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಪರಮೇಶ್ವರ್ ಅವರ ಯಾವ ಮಾತನ್ನೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ತಮ್ಮ ಬೆಂಬಲಿಗರಾದ ಷಡಕ್ಷರಿ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳಬೇಕೆಂಬ ಒತ್ತಾಸೆ ಪರಮೇಶ್ವರ್ ಅವರದ್ದಾಗಿತ್ತು. ಆದರೆ, ಸಿದ್ದರಾಮಯ್ಯನವರು ಕೊನೆ ಕ್ಷಣದಲ್ಲಿ ಷಡಕ್ಷರಿ ಅವರನ್ನು ಕೈಬಿಟ್ಟು ಗೀತಾ ಮಹದೇವ ಪ್ರಸಾದ್ ಅವರಿಗೆ ಮಣೆ ಹಾಕಿದ್ದರು. ಅದೇ ರೀತಿ ಮೋಟಮ್ಮ ಅಥವಾ ನರೇಂದ್ರ ಸ್ವಾಮಿ ಅವರಲ್ಲಿ ಒಬ್ಬರಿಗೆ ಸಚಿವ ಸ್ಥಾನ ನೀಡಬೇಕೆಂದು ಪರಮೇಶ್ವರ್ ಆಗ್ರಹಿಸಿದ್ದರು.

ಈ ಇಬ್ಬರಿಗೂ ಕೈಕೊಟ್ಟು ಆರ್.ಬಿ.ತಿಮ್ಮಾಪುರ್ ಅವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಂಡಿದ್ದರು. ಹೀಗಾಗಿ ಅಸಮಾಧಾನಗೊಂಡಿದ್ದ ಪರಮೇಶ್ವರ್ ಅವರು ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮದಿಂದ ದೂರವೇ ಉಳಿದರು.  ನಿನ್ನೆಯ ಕಾರ್ಯಕ್ರಮಕ್ಕೆ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಅವರು ಗೈರಾಗಿದ್ದು, ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಎದ್ದು ಕಾಣುತ್ತಿತ್ತು. ಪ್ರತಿಪಕ್ಷಗಳಿಗೆ ಇವರ ಈ ಕ್ರಮ ಚುನಾವಣಾ ಸಂದರ್ಭದಲ್ಲಿ ಒಳ್ಳೆಯ ಆಹಾರವಾಗಿದೆ.

ಗೃಹ ಖಾತೆಯನ್ನು ಡಿ.ಕೆ.ಶಿವಕುಮಾರ್ ಅವರಿಗೆ ನೀಡಬೇಕೆಂದು ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸೂಚಿಸಿತ್ತು ಎನ್ನಲಾಗಿದೆ.
ಗುಜರಾತ್ ಶಾಸಕರನ್ನು ಕರ್ನಾಟಕಕ್ಕೆ ಕರೆತಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಅಹಮ್ಮದ್ ಪಟೇಲ್ ಅವರ ರಾಜ್ಯಸಭೆ ಚುನಾವಣೆ ಗೆಲುವಿಗೆ ಕಾರಣರಾದ ಡಿ.ಕೆ.ಶಿವಕುಮಾರ್ ಅವರಿಗೆ ಗೃಹಖಾತೆ ನೀಡಬೇಕೆಂದು ಖುದ್ದು ಅಹಮ್ಮದ್ ಪಟೇಲ್ ಅವರೇ ತಿಳಿಸಿದ್ದರು. ಮುಖ್ಯಮಂತ್ರಿಗಳು ಈ ಬಗ್ಗೆ ತಲೆಕೆಡಿಸಿಕೊಳ್ಳದೆ ಹಿರಿಯ ಸಚಿವರಾದ ರಾಮಲಿಂಗಾರೆಡ್ಡಿಯವರಿಗೆ ಈ ಖಾತೆಯನ್ನು ನೀಡಿದರು. ರಮಾನಾಥ ರೈ ಅವರಿಗೆ ಈ ಖಾತೆ ನೀಡಬೇಕೆಂದು ಪರಮೇಶ್ವರ್ ಅವರು ಅವರ ಪರ ಬ್ಯಾಟಿಂಗ್ ಮಾಡಿದ್ದರು.

ಅವರಿಗೇ ನೀಡಲಾಗುವುದು ಎಂದು ಕೊನೆ ಕ್ಷಣದವರೆಗೂ ಹೇಳಲಾಗುತ್ತಿತ್ತು. ಕೊನೆ ಕ್ಷಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಮಲಿಂಗಾರೆಡ್ಡಿಯವರಿಗೆ ಗೃಹಖಾತೆ ಜವಾಬ್ದಾರಿ ವಹಿಸಿದರು. ನಾವು ಹೇಳಿದ ಯಾವ ಕೆಲಸಗಳೂ ನಡೆಯಲಿಲ್ಲ ಎಂಬ ಅಸಮಾಧಾನದಿಂದ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಅವರು ಕೋಪಗೊಂಡು ನಿನ್ನೆಯ ಕಾರ್ಯಕ್ರಮಕ್ಕೆ ಹಾಜರಾಗಲೇ ಇಲ್ಲ ಎಂದು ತಿಳಿದುಬಂದಿದೆ.   ಈ ಹಿಂದೆ ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪರಮೇಶ್ವರ್ ಅವರು ರಾಹುಲ್‍ಗಾಂಧಿ ಅವರೊಂದಿಗೆ ಮಾತನಾಡುವಾಗಲೇ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಮುಖ್ಯಮಂತ್ರಿಗಳೊಂದಿಗೆ ಹೊಂದಿಕೊಂಡು ಹೋಗಿ ಎಂದು ರಾಹುಲ್‍ಗಾಂಧಿ ಸೂಚನೆ ನೀಡಿದ್ದಾರೆ. ನಮ್ಮ ಯಾವ ಕೆಲಸವನ್ನೂ ಮುಖ್ಯಮಂತ್ರಿಗಳು ಮಾಡುವುದಿಲ್ಲ ಎಂದ ಮೇಲೆ ಹೇಗೆ ಹೊಂದಿಕೊಂಡು ಹೋಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚುನಾವಣಾ ಸಂದರ್ಭದಲ್ಲಿ ಕಾಂಗ್ರೆಸ್‍ನ ಆಂತರಿಕ ವಿಷಯಗಳು ಬಹಿರಂಗಗೊಂಡಿರುವುದು ಚುನಾವಣೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಎಚ್ಚೆತ್ತುಕೊಂಡು ಬಗೆಹರಿಸಿಕೊಳ್ಳದಿದ್ದರೆ ಮತದಾರರು ಬುದ್ಧಿ ಕಲಿಸಲಿದ್ದಾರೆ.

Facebook Comments

Sri Raghav

Admin