ಸಂಪುಟ ವಿಸ್ತರಣೆ ಸಿಎಂ ವಿವೇಚನೆಗೆ ಬಿಟ್ಟಿದ್ದು, ನನಗೆ ಯಾವುದೇ ಅಸಮಾಧಾನ ಇಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

DKShivakumar-01

ಬೆಂಗಳೂರು, ಸೆ.2-ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು. ಯಾರನ್ನು ಹೇಳಿ, ಕೇಳಿ ಮಾಡಬೇಕಾಗಿಲ್ಲ. ನನಗೆ ಯಾವುದೇ ಅಸಮಾಧಾನ ಇಲ್ಲ ಎಂದು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸ್ಪಷ್ಟಪಡಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ನಮ್ಮನ್ನು ಕೇಳಿ ಮಾಡುವುದಿಲ್ಲ. ನಿನ್ನೆ ನಾನು ದೆಹಲಿಗೆ ತೆರಳಿದ್ದೆ. ದಿಢೀರೆಂದು ದೆಹಲಿಗೆ ತೆರಳಬೇಕಾಯಿತು. ಈ ವಿಷಯ ಮುಖ್ಯಮಂತ್ರಿಗಳಿಗೆ ತಿಳಿದಿತ್ತು. ಖುದ್ದು ಅವರು ಫೋನ್ ಮಾಡಿ ದೆಹಲಿಗೆ ಹೋಗುತ್ತಿದ್ದೀರಾ… ಎಂದು ಒಳ್ಳೆಯದಾಗಲಿ ಎಂದು ಹೇಳಿದ್ದರು. ಸಂಪುಟ ವಿಸ್ತರಣೆ ಸಂಬಂಧ ನನಗೆ ಯಾವುದೇ ಅಸಮಾಧಾನ, ಅತೃಪ್ತಿ ಇಲ್ಲ. ದೊಡ್ಡವರ ಅಸಮಾಧಾನದ ಬಗ್ಗೆ ನನಗೆ ಗೊತ್ತಿಲ್ಲ ಎಂದು ತಿಳಿಸಿದರು.

ಐಟಿ ದಾಳಿ ಸಂಬಂಧ ಮೌನ ಮುರಿಯುವ ಕಾಲ ಇನ್ನೂ ಬಂದಿಲ್ಲ. ಐಟಿ ದಾಳಿ ಬಗ್ಗೆ ಸದ್ಯ ಈಗ ಏನೂ ಮಾತನಾಡುವುದಿಲ್ಲ. ನನ್ನ ಆಪ್ತರು, ಬೆಂಬಲಿಗರ ಮೇಲೆ ಐಟಿ ದಾಳಿ ನಡೆಯುತ್ತಿರುವುದರ ಬಗ್ಗೆ ನನಗೆ ನೋವಾಗುತ್ತಿದೆ ಎಂದು ಹೇಳಿದರು.ಪ್ರತಿಪಕ್ಷದ ನಾಯಕ ಜಗದೀಶ್ ಶೆಟ್ಟರ್ ಅವರು, ನನ್ನ ಬಳಿ 300 ಕೋಟಿ ರೂ. ಆಸ್ತಿ ಇರುವುದಾಗಿ ಹೇಳಿದ್ದಾರೆ. ದಾಖಲೆಗಳಿದ್ದರೆ ಅದನ್ನು ಅವರು ತೋರಿಸಲಿ. ಐಟಿ ದಾಳಿ ನಂತರ ನಾನು ಓಪನ್ ಕೋರ್ಟ್‍ನಲ್ಲಿದ್ದೇನೆ. ಕೆಲವರು ನನ್ನ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಕೆಲವು ಮಾಧ್ಯಮಗಳಲ್ಲೂ ಕೂಡ ಐಟಿ ದಾಳಿ ಬಗ್ಗೆ ಅನಗತ್ಯ ಅಪಪ್ರಚಾರ ಮಾಡಲಾಗುತ್ತಿದೆ. ಸಾರ್ವಜನಿಕ ಜೀವನದಲ್ಲಿರುವ ನಾವು ಇದನ್ನು ನೋಡಿಕೊಂಡು ಕೈಕಟ್ಟಿಕುಳಿತುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.

ನಮ್ಮಲ್ಲೂ ಅಸ್ತ್ರಗಳಿವೆ ಅವುಗಳನ್ನು ಸಮಯ ಬಂದಾಗ ಪ್ರಯೋಗಿಸುತ್ತೇವೆ ಎಂದರು. ನಿಮ್ಮ ಅಸ್ತ್ರಗಳಿಗೆ ಸ್ವಪಕ್ಷೀಯರು ಬಲಿಯಾಗುತ್ತಾರಾ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜಕಾರಣಿಗಳಾದ ನಮಗೆ ನಮ್ಮನ್ನು ರಕ್ಷಣೆ ಮಾಡಿಕೊಳ್ಳುವುದು ಮುಖ್ಯವಾಗುತ್ತದೆ ಎಂದು ತಿಳಿಸಿದರು.

Facebook Comments

Sri Raghav

Admin