ಯುವಕನ ಹತ್ಯೆ ಮಾಡಲು ಬಂದ ರೌಡಿಗಳಿಂದ ಕುಟುಂಬದವರ ಮೇಲೆ ಮಾರಣಾಂತಿಕ ಹಲ್ಲೆ

ಈ ಸುದ್ದಿಯನ್ನು ಶೇರ್ ಮಾಡಿ

ಮಂಗಳೂರು, ಸೆ.3- ಯುವಕನೊಬ್ಬನನ್ನು ಕೊಲೆ ಮಾಡಲು ಬಂದ ದುಷ್ಕರ್ಮಿಗಳು ಅವನು ಮನೆಯಲ್ಲಿಲ್ಲದ್ದಕ್ಕೆ ಅವನ ತಂದೆ-ತಾಯಿ ಹಾಗೂ ಇಬ್ಬರು ಸಹೋದರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮಂಗಳೂರು ಹೊರವಲಯದ ಉಳ್ಳಾಲ ದರ್ಗಾ ಬಳಿ ನಿನ್ನೆ ತಡರಾತ್ರಿ ನಡೆದಿದೆ.
ಮನೆ ಯಜಮಾನ ಖಾಸಿಂ, ಪತ್ನಿ ಮೈಮುನಾ, ಮಕ್ಕಳಾದ ಸೋಯಲ್ ಮತ್ತು ಅಮೀನ್ ಅವರ ಮೇಲೆ ಲಾಂಗು, ಮಚ್ಚುಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದು, ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಾಲ್ವರನ್ನೂ ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಖಾಸಿಂ ದೊಡ್ಡ ಮಗ ಹಂಝಾ ಕೆಲವು ದಿನಗಳ ಹಿಂದೆ ಒಂದು ಗುಂಪಿನ ಜತೆ ಜಗಳವಾಡಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ರಾತ್ರಿ 15 ಜನ ದುಷ್ಕರ್ಮಿಗಳು ಗುಂಪು ಕಟ್ಟಿಕೊಂಡು ಲಾಂಗು, ಮಚ್ಚು ಹಿಡಿದುಕೊಂಡು ಹಂಝಾನ ಹತ್ಯೆಗಾಗಿ ದಾಳಿ ನಡೆಸಿದ್ದರು. ಮನೆಯ ಕಿಟಕಿ, ಬಾಗಿಲುಗಳನ್ನೆಲ್ಲ ದುಷ್ಕರ್ಮಿಗಳು ಒಡೆದು ಹಾಕಿದ್ದಾರೆ. ಹಂಝಾ ಆ ವೇಳೆ ಮನೆಯಲ್ಲಿಲ್ಲದ ಕಾರಣ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ನಡೆಸುತ್ತಿದ್ದಾರೆ.

Facebook Comments

Sri Raghav

Admin