ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವ್ಡೇಕರ್ ಇಂದು ಬೆಂಗಳೂರಿಗೆ

ಈ ಸುದ್ದಿಯನ್ನು ಶೇರ್ ಮಾಡಿ

Prakash-Javdekar--01

ಬೆಂಗಳೂರು, ಸೆ.3- ರಾಜ್ಯ ಬಿಜೆಪಿ ಚುನಾವಣಾ ಉಸ್ತುವಾರಿಯಾಗಿ ನೇಮಕಗೊಂಡಿರುವ ಬಿಜೆಪಿ ಹಿರಿಯ ಮುಖಂಡ ಹಾಗೂ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಇಂದು ನಗರಕ್ಕೆ ಆಗಮಿಸಲಿದ್ದಾರೆ. ಚುನಾವಣಾ ಸಹ ಉಸ್ತುವಾರಿಯಾಗಿರುವ ಮತ್ತು ಕೇಂದ್ರ ಸಚಿವ ಪಿಯೂಷ್‍ಗೋಯಲ್ ಕೂಡ ನಾಳೆ ನಗರಕ್ಕೆ ಆಗಮಿಸುತ್ತಿರುವುದು ಬಿಜೆಪಿ ಪಾಳೆಯದಲ್ಲಿ ಮಿಂಚಿನ ಸಂಚಲನ ಸೃಷ್ಟಿಸಿದೆ. ಕಳೆದ ವಾರವಷ್ಟೇ ಈ ಇಬ್ಬರನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರು ಕರ್ನಾಟಕಕ್ಕೆ ನಿಯೋಜನೆಗೊಳಿಸಿದ್ದರು. ಏಕಕಾಲದಲ್ಲಿ ಉಭಯ ನಾಯಕರು ನಗರಕ್ಕೆ ಆಗಮಿಸುತ್ತಿರುವುದರಿಂದ ಬಿಜೆಪಿ ನಾಯಕರಲ್ಲಿ ಸಂಚಲನ ಸೃಷ್ಟಿಸಿದೆ.

ಪಕ್ಷದ ಸಂಘಟನೆ, ಪರಸ್ಪರ ನಾಯಕರಲ್ಲಿ ಹೊಂದಾಣಿಕೆ ಇಲ್ಲದಿರುವುದು, ಸಂಘಟನೆ ಕೊರತೆ ಸೇರಿದಂತ ಹತ್ತು ಹಲವು ದೂರುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಈ ಇಬ್ಬರನ್ನು ಅಮಿತ್ ಶಾ ರಾಜ್ಯ ಉಸ್ತುವಾರಿಗೆ ನೇಮಕಗೊಳಿಸಿದ್ದಾರೆ.ಇಂದು ಸಂಜೆ ಬೆಂಗಳೂರಿಗೆ ಜಾವ್ಡೇಕರ್ ಆಗಮಿಸಿದರೆ, ನಾಳೆ ಬೆಳಗ್ಗೆ ಗೋಯಲ್ ಬರಲಿದ್ದಾರೆ. ನಾಳೆಯಿಂದ ಉಭಯ ನಾಯಕರು ಎರಡು ದಿನಗಳ ಕಾಲ ರಾಜ್ಯ ನಾಯಕರನ್ನು ಭೇಟಿ ಮಾಡಿ ಪಕ್ಷದ ಸಂಘಟನೆ, ಮುಂದಿನ ವಿಧಾನಸಭೆ ಚುನಾವಣೆಗೆ ಕೈಗೊಳ್ಳಬೇಕಾದ ಕಾರ್ಯತಂತ್ರ, ಚುನಾವಣಾ ಪ್ರಚಾರ ಸೇರಿದಂತೆ ಮತ್ತಿತರ ಕಾರ್ಯಕ್ರಮಗಳ ಬಗ್ಗೆ ರಣತಂತ್ರ ರೂಪಿಸಲಿದ್ದಾರೆ.

ರಾಜ್ಯದಲ್ಲಿ ಶತಾಯಗತಾಯ ಬಿಜೆಪಿ ಅಧಿಕಾರಕ್ಕೆ ಬರಲೇಬೇಕೆಂದು ಅಮಿತ್ ಶಾ ಸೂಚನೆ ಕೊಟ್ಟಿರುವ ಹಿನ್ನೆಲೆಯಲ್ಲಿ ಈ ಉಭಯ ನಾಯಕರು ಸ್ಥಳೀಯ ಘಟಕದ ನಾಯಕರ ಜತೆ ಕೈಗೊಳ್ಳಬೇಕಾದ ರೂಪುರೇಷಗಳ ಬಗ್ಗೆ ಚರ್ಚಿಸುವರು. ಮಿಷನ್ 150 ರಾಜ್ಯದಲ್ಲಿ ಅಷ್ಟು ಸುಲಭವಾಗಿ ಈಡೇರುವುದಿಲ್ಲ ಎಂಬ ಗುಪ್ತಚರ ವಿಭಾಗದ ವರದಿ ಹಿನ್ನೆಲೆಯಲ್ಲಿ ಯಾವ ಯಾವ ತಂತ್ರಗಳನ್ನು ಅನುಸರಿಸಬೇಕು ಎಂಬುದರ ಬಗ್ಗೆ ರಣತಂತ್ರ ರೂಪಿಸಲಿದ್ದಾರೆ. ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಸತತ ಹೋರಾಟ, ಐಟಿ ದಾಳಿಗೆ ಸಿಲುಕಿರುವ ಸಚಿವ ಡಿ.ಕೆ.ಶಿವಕುಮಾರ್ ರಾಜೀನಾಮೆ, ಆರ್‍ಎಸ್‍ಎಸ್ ಕಾರ್ಯಕರ್ತರ ಹತ್ಯೆಯಲ್ಲಿ ಶಾಮೀಲಾಗಿರುವ ಸಚಿವ ರಮಾನಾಥರೈ ರಾಜೀನಾಮೆ ಸೇರಿದಂತೆ ಮತ್ತಿತರ ಸರ್ಕಾರದ ವೈಫಲ್ಯಗಳ ವಿರುದ್ಧ ಹೋರಾಟ ನಡೆಸುವಂತೆ ಸ್ಥಳೀಯ ನಾಯಕರಿಗೆ ಸೂಚನೆ ಕೊಡಲಿದ್ದಾರೆ.

ಪ್ರಮುಖವಾಗಿ ಸ್ಥಳೀಯ ಬಿಜೆಪಿ ನಾಯಕರ ನಡುವೆ ಹೊಂದಾಣಿಕೆ ಇಲ್ಲದಿರುವುದು ರಾಷ್ಟ್ರೀಯ ನಾಯಕರ ಗಮನಕ್ಕೆ ಬಂದಿರುವುದರಿಂದ ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಪಕ್ಷ ಸಂಘಟಿಸುವಂತೆ ಉಭಯ ನಾಯಕರು ಸೂಚನೆ ಕೊಡಲಿದ್ದಾರೆ. ನಾಳೆಯಿಂದ ಆರಂಭವಾಗಲಿರುವ ಸರಣಿ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಅನಂತ್‍ಕುಮಾರ್, ಡಿ.ವಿ.ಸದಾನಂದಗೌಡ, ರಮೇಶ್ ಜಿಗಜಿಣಗಿ, ಅನಂತ್‍ಕುಮಾರ್ ಹೆಗಡೆ, ಸ್ಥಳೀಯ ನಾಯಕರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್ ಸೇರಿದಂತೆ ಕೋರ್‍ಕಮಿಟಿ ಸದಸ್ಯರು ಹಾಗೂ ಕೆಲ ನಿರ್ದಿಷ್ಟ ಪದಾಧಿಕಾರಿಗಳನ್ನು ಭೇಟಿ ಮಾಡಲಿದ್ದಾರೆ.  ಇದೇ ವೇಳೆ ಜಾವ್ಡೇಕರ್ ಹಾಗೂ ಪಿಯೂಷ್‍ಗೋಯಲ್ ಅವರು ಆರ್‍ಎಸ್‍ಎಸ್ ನಾಯಕರನ್ನು ಭೇಟಿ ಮಾಡಿ ಮಾತುಕತೆ ನಡೆಸುವ ಸಂಭವವಿದೆ.

Facebook Comments

Sri Raghav

Admin