ಸಿಲಿಕಾನ್ ಸಿಟಿ ಬೆಂಗಳೂರಿಗೆ ಈ ಬಾರಿ ಮಳೆಯೂ ಜಾಸ್ತಿ ಹಾನಿಯೂ ಜಾಸ್ತಿ

ಈ ಸುದ್ದಿಯನ್ನು ಶೇರ್ ಮಾಡಿ

Bang-1

ಬೆಂಗಳೂರು, ಸೆ.3- ನಗರದಲ್ಲಿ ಕಳೆದ 15 ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿದ್ದು, ಈ ಬಾರಿ ಎಚ್‍ಎಸ್‍ಆರ್ ಬಡಾವಣೆಯಲ್ಲಿ ಅತಿ ಹೆಚ್ಚು ಮಳೆಯಾಗಿದೆ, ಜೊತೆಗೆ ಹಾನಿಯೂ ಇಲ್ಲಿ ಜಾಸ್ತಿಯಾಗಿದೆ ಎಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಗಸ್ಟ್‍ನಲ್ಲಿ ದಾಖಲೆ ಮಳೆಯಾಗಿದೆ. ಸೆಪ್ಟೆಂಬರ್ ಪ್ರಾರಂಭದಲ್ಲೇ ನಗರದಲ್ಲಿ 86 ಮಿ.ಮೀಟರ್ ಮಳೆಯಾಗಿದೆ. ತಗ್ಗುಪ್ರದೇಶಗಳಲ್ಲಿ ನೀರು ನುಗ್ಗುತ್ತಿದೆ. ನಗರದಲ್ಲಿ ಇನ್ನೂ ನಾಲ್ಕು ದಿನಗಳು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ ಎಂದು ತಿಳಿಸಿದರು.

ಕಂಟ್ರೋಲ್ ರೂಂ, ತುರ್ತು ಟೀಮ್, ಡಿಸಾಸ್ಟರ್ ಟೀಮ್ ಹಾಗೂ ಕೆಎಸ್‍ಆರ್‍ಪಿ ತುಕಡಿ ಸಿದ್ಧವಾಗಿದ್ದು, ಮಳೆಯ ಅನಾಹುತಗಳನ್ನು ತಡೆಯಲು ಎಲ್ಲಾ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದರು. ದ್ವಿಚಕ್ರ ವಾಹನ ಸವಾರರು ಮಳೆ ವೇಳೆ ಎಚ್ಚರದಿಂದ ಇರಬೇಕೆಂದು ಅವರು ಇದೇ ವೇಳೆ ಸಲಹೆ ನೀಡಿದರು.
ನಗರದಲ್ಲಿ ನೂತನವಾಗಿ 4 ಎಸ್‍ಟಿಪಿ ಸ್ಥಾಪನೆ ಮಾಡಲಾಗುತ್ತಿದ್ದು, ನಾಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ. 2020ರ ವೇಳೆಗೆ ಶೇ.100ರಷ್ಟು ತ್ಯಾಜ್ಯ ನೀರು ಶುದ್ಧೀಕರಣವಾಗಲಿದೆ. ನಗರದಲ್ಲಿ 1400 ಎಂಎಲ್‍ಡಿ ತ್ಯಾಜ್ಯ ನೀರು ಉತ್ಪತ್ತಿಯಾಗುತ್ತಿದೆ.

Bang--02

ಒಳಚರಂಡಿಗಳಲ್ಲಿ ನೀರು ಸರಾಗವಾಗಿ ಹರಿಯಲು ಕ್ರಮಕೈಗೊಳ್ಳಲಾಗುತ್ತಿದೆ. ಒತ್ತುವರಿ ಮಾಡಿರುವವರನ್ನು ಮುಲಾಜಿಲ್ಲದೆ ತೆರವು ಮಾಡಿಸಲಾಗುವುದು ಎಂದು ಹೇಳಿದರು. ಅರಕೆರೆ, ಬೊಮ್ಮನಹಳ್ಳಿ, ಬಿಳೇಕಳ್ಳಿ ಮತ್ತಿತರೆಡೆ ಹೆಚ್ಚು ಮಳೆಯಾಗಿದೆ. ಎಚ್‍ಎಸ್‍ಆರ್ ಬಡಾವಣೆಯ ರಾಜಕಾಲುವೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸುಮಾರು 300 ಕೋಟಿ ರೂ. ಬೇಕಾಗಿದ್ದು, ಮುಖ್ಯಮಂತ್ರಿಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇನೆ ಎಂದು ತಿಳಿಸಿದರು.

ಜೆ.ಸಿ.ರಸ್ತೆಯ ಕುಂಬರಗುಡಿ ಪ್ರದೇಶದಲ್ಲಿ ಅಪಾಯದಲ್ಲಿರುವ ಕೆಲವು ಮನೆಗಳ ತೆರವಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದ ಅವರು, ಕಿನೋ ಟಾಕೀಸ್ ಬಳಿ ಇರುವ ರೈಲ್ವೆ ಅಂಡರ್‍ಪಾಸ್ ಸಮೀಪ ಮಳೆ ಬಂದಾಗ ನೀರು ನಿಲ್ಲುತ್ತಿದೆ. ಈ ಬಗ್ಗೆ ಕ್ರಮಕೈಗೊಳ್ಳಲು ಯೋಜನೆ ರೂಪಿಸಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮೇಯರ್ ಜಿ.ಪದ್ಮಾವತಿ, ಬಿಬಿಎಂಪಿ ಆಯುಕ್ತ ಮಂಜುನಾಥ್‍ಪ್ರಸಾದ್ ಮತ್ತಿತರರಿದ್ದರು.

Facebook Comments

Sri Raghav

Admin