ಬೆಂಗಳೂರಲ್ಲಿ ಅಬ್ಬರಿಸಿದ ಮಳೆರಾಯ, ಮನೆಗಳಿಗೆ ನುಗ್ಗಿದ ನೀರು, ಕೆರೆಗಳಂತಾದ ರಸ್ತೆಗಳು

ಈ ಸುದ್ದಿಯನ್ನು ಶೇರ್ ಮಾಡಿ

Rain-xxx

ಬೆಂಗಳೂರು, ಸೆ.4-ರಾಜಧಾನಿ ಬೆಂಗಳೂರಿನಲ್ಲಿ ಕಳೆದ ಐದು ದಿನಗಳಿಂದ ಬಿಟ್ಟೂ ಬಿಡದೆ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ನಗರವೇ ಜಲಾವೃತವಾಗಿವೆ. ಕೆರೆಗಳೆಲ್ಲಾ ಭರ್ತಿಯಾಗಿ ಕೋಡಿ ಬಿದ್ದು ನೀರು ಜನವಸತಿ ಪ್ರದೇಶಗಳಿಗೆ ನುಗ್ಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಥಣಿಸಂದ್ರ ಕೆರೆ, ಹೆಬ್ಬಾಳ ಕೆರೆ, ಸ್ಯಾಂಕಿ ಕೆರೆ, ಬಸವನಪುರ, ಲಾಲ್‍ಬಾಗ್ ಕೆರೆ, ಯಡಿಯೂರು ಕೆರೆ ಸೇರಿದಂತೆ ನಗರದಲ್ಲಿರುವ ಬಹುತೇಕ ಕೆರೆಗಳೆಲ್ಲಾ ತುಂಬಿ ಹರಿದ ಪರಿಣಾಮ ನೀರೆಲ್ಲಾ ತಗ್ಗು ಪ್ರದೇಶಗಳಿಗೆ ನುಗ್ಗಿದೆ.

ಕೆರೆಯಲ್ಲಿದ್ದ ನೀರಿನೊಂದಿಗೆ ಹಾವು ಇನ್ನಿತರ ಜಲಚರ ಪ್ರಾಣಿಗಳು ಮನೆಗಳಿಗೆ ಹರಿದು ಜನ ಎಲ್ಲ ಜಾಗರಣೆ ಮಾಡುವಂತಾಗಿದೆ. ಕೆ.ಆರ್.ಪುರ, ಈಜಿಪುರ, ಕೋರಮಂಗಲ, ಹಲಸೂರು, ಕಾಕ್‍ಸ್ಟೌನ್ ಮುಂತಾದೆಡೆ ಕಳೆದ ಐದು ದಿನಗಳಿಂದ ಜನ ಜೀವ ಬಿಗಿಹಿಡಿದು ನಿದ್ದೆ ಮಾಡುತ್ತಿದ್ದಾರೆ. ಮನೆಯಿಂದ ನೀರನ್ನು ಹೊರಹಾಕುವುದೇ ಹರಸಾಹಸವಾಗಿದೆ. ರಿಚ್‍ಮಂಡ್ ಸರ್ಕಲ್‍ನಲ್ಲಿರುವ ರಿಚ್‍ಮಂಡ್ ಟವರ್‍ನ ತಳಮಹಡಿ ಸಂಪೂರ್ಣ ಜಲಾವೃತಗೊಂಡಿದ್ದು, ಇಲ್ಲಿ ನಿಲ್ಲಿಸಿದ್ದ ವಾಹನಗಳೆಲ್ಲಾ ನೀರಿನಲ್ಲಿ ಮುಳುಗಡೆಯಾಗಿದೆ.

Rain--01

ಸುಬ್ರಹ್ಮಣ್ಯನಗರದ ವಸಂತಪುರದಲ್ಲಿರುವ ಜನಾರ್ಧನ ಕೆರೆ ಕೂಡ ತುಂಬಿ ಹರಿದಿದೆ. ಇಲ್ಲಿರುವ ಕಲ್ಯಾಣಿಗಳೆಲ್ಲಾ ತುಂಬಿ ತುಳುಕುತ್ತಿವೆ. ಮೇಯರ್ ಜಿ.ಪದ್ಮಾವತಿ ಅವರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಯಾವುದೇ ಸಂಭಾವ್ಯ ಅನಾಹುತಗಳ ಸಂಭವಿಸಿದಂತೆ ಮುನ್ನೆಚ್ಚರಿಕೆ ವಹಿಸುವಂತೆ ಸೂಚನೆ ನೀಡಿದ್ದಾರೆ. ಭಾರೀ ಮಳೆಗೆ ಕೆ.ಆರ್.ಪುರಂನ ಪರಿಸ್ಥಿತಿ ಅಯೋಮಯವಾಗಿದೆ. ದೇವಸಂದ್ರ ವಾರ್ಡ್‍ನ ತ್ರಿವೇಣಿ ನಗರದ ಎಲ್ಲಾ ಮನೆಗಳಿಗೆ ನೀರು ನುಗ್ಗಿರುವುದಲ್ಲದೆ, ರಸ್ತೆಯಲ್ಲೆಲ್ಲಾ ನೀರು ನಿಂತಿದೆ. ಜನ ಮನೆಯಲ್ಲಿರುವುದು ಕಷ್ಟವಾಗಿದ್ದು, ಮನೆಯಿಂದ ಹೊರಬರಲು ಕಷ್ಟವಾಗುತ್ತಿದೆ. ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಪಕ್ಕದಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆ ಕಟ್ಟಡವೂ ಜಲಾವೃತಗೊಂಡಿದ್ದು, ಶಾಲೆಗೆ ಬಂದ ಮಕ್ಕಳು ಶಾಲೆ ನೀರಿನಲ್ಲಿ ಮುಳುಗಿರುವುದು ಕಂಡು ದಿಗಿಲುಗೊಂಡಿದ್ದಾರೆ.

Rain--09

ಶಾಲೆಗೆ ರಜೆ ಘೋಷಿಸಲಾಗಿದೆ. ಅಗ್ನಿಶಾಮಕದಳ ಸಿಬ್ಬಂದಿ ಬಿಇಒ ಕಚೇರಿ ಮತ್ತು ಶಾಲೆಯಲ್ಲಿನ ನೀರನ್ನು ಹೊರಹಾಕಲು ಹರಸಾಹಸಪಡುತ್ತಿದ್ದಾರೆ.
ಒಟ್ಟಾರೆ ಕಳೆದ ಐದು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ರಸ್ತೆಯಲ್ಲೆಲ್ಲಾ ಗುಂಡಿಗಳು ಬಿದ್ದಿವೆ. ಬೆಂಗಳೂರು ಜಲಾವೃತಗೊಂಡಿದೆ.
ವಾಹನ ಸವಾರರು ಸಂಚರಿಸಲು ಪ್ರತಿದಿನ ಪರದಾಡುವಂತಾಗಿದೆ. ಮಧ್ಯಾಹ್ನ, ಬೆಳಗ್ಗೆ, ಸಂಜೆ, ರಾತ್ರಿ ಹೀಗೆ ಮಳೆ ನಿರಂತರವಾಗಿ ಸುರಿಯುತ್ತಿದೆ. ಬಿಬಿಎಂಪಿಯವರು ಸರಿಯಾಗಿ ತ್ಯಾಜ್ಯ ನಿರ್ವಹಣೆ ಮಾಡಲು ಸಾಧ್ಯವಾಗದಿರುವ ಕಾರಣ ಸಾಂಕ್ರಾಮಿಕ ರೋಗಗಳ ಭೀತಿ ಎದುರಾಗಿದೆ.
ಕಾಕ್‍ಸ್ಟೌನ್‍ನ ಕೆಳಭಾಗದಲ್ಲಿ ಚರಂಡಿ ನೀರು ಕುಡಿಯುವ ನೀರಿಗೆ ಮಿಶ್ರಣ ಗೊಂಡು ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯಾಗಿದೆ.
ಒಟ್ಟಾರೆ ಮಳೆಯ ರಗಳೆ ಹೆಚ್ಚಾಗಿದ್ದು, ಆಫೀಸ್‍ಗೆ ಹೋಗುವುದಕ್ಕಾಗುತ್ತಿಲ್ಲ. ಬೈಕ್-ಕಾರುಗಳನ್ನು ಹೊರತೆಗೆಯಲು ಆಗುತ್ತಿಲ್ಲ. ತಗ್ಗುಪ್ರದೇಶಗಳ ನಿವಾಸಿಗಳ ಪಜೀತಿ ಹೇಳತೀರದಾಗಿದೆ.

Rain--08

ಕೆರೆಗಳೆಲ್ಲಾ ತುಂಬಿ ಭರ್ತಿಯಾಗಿ ಪ್ರವಾಹ ರೂಪದಲ್ಲಿ ಹರಿಯುತ್ತಿದೆ. ರಾಜಕಾಲುವೆಗಳು ತುಂಬಿ ಹರಿಯುತ್ತಿವೆ. ಹಲವೆಡೆ ಮೇಲ್ಸೇತುವೆಗಳಿಂದ ನೀರು ಹರಿಯುತ್ತಿರುವುದು ಜಲಪಾತದಂತೆ ಗೋಚರಿಸುತ್ತಿದೆ. ಇನ್ನೂ ಮಳೆ ಮುಂದುವರೆಯುವ ಲಕ್ಷಣಗಳಿರುವುದರಿಂದ ನಗರ ನಿವಾಸಿಗಳು ಆತಂಕಕ್ಕೊಳಗಾಗಿದ್ದಾರೆ. ಮಳೆಯಿಂದ ವಾಹನಗಳನ್ನು ಹೊರತೆಗೆಯಲಾಗದೆ ಸಾರ್ವಜನಿಕರು ಬಿಎಂಟಿಸಿ ಬಸ್ ಹಾಗೂ ಮೆಟ್ರೋ ರೈಲುಗಳ ಅವಲಂಬನೆ ಹೆಚ್ಚಾಗಿದೆ.

Rain--07

ಮಳೆ ನಿಂತ ಮೇಲೆ ರಸ್ತೆಗಳ ದುರಸ್ತಿ : ಕೆ.ಜೆ.ಜಾರ್ಜ್

ಬೆಂಗಳೂರು, ಸೆ.4-ನಗರದಲ್ಲಿ ಹದಗೆಟ್ಟಿರುವ ರಸ್ತೆಗಳನ್ನು ಮಳೆ ನಿಂತ ಮೇಲೆ ದುರಸ್ತಿ ಮಾಡಲಾಗುವುದು ಎಂದು ಬೆಂಗಳೂರು ನಗರ ಅಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸತತ ಮಳೆಯಾಗುತ್ತಿರುವುದರಿಂದ ರಸ್ತೆಗಳು ಹಾಳಾಗಿವೆ. ಹೊಸ ರಸ್ತೆಗಳಲ್ಲಿ ಯಾವುದೇ ತೊಂದರೆ ಇಲ್ಲ. ಪ್ರಸ್ತುತ ಸತತವಾಗಿ ಅಧಿಕ ಪ್ರಮಾಣದ ಮಳೆಯಾಗುತ್ತಿದೆ. ಮಳೆ ನೀರು ಹರಿದು ಹೋಗಲು ಸಮಯಾವಕಾಶ ಬೇಕಾಗಿದೆ. ಹದಗೆಟ್ಟಿರುವ ರಸ್ತೆಗಳ ದುರಸ್ತಿ ಕಾರ್ಯಕ್ಕೆ ಮುಖ್ಯಮಂತ್ರಿಗಳು 800 ಕೋಟಿ ರೂ. ಮಂಜೂರು ಮಾಡಿದ್ದಾರೆ. ಅಲ್ಲದೆ, ಇನ್ನೂ 300 ಕೋಟಿ ರೂ.ಗಳ ಹೆಚ್ಚುವರಿ ಮಂಜೂರಾತಿಗೆ ಮನವಿ ಸಲ್ಲಿಸಿದ್ದೇವೆ. ಎಚ್.ಎಸ್.ಆರ್.ಲೇಔಟ್ ಲೋಲಾಯಿಂಗ್ ಪ್ರದೇಶವನ್ನು ಜೋಡಿಸುವ ಕೆಲಸ ಮಾಡಲಾಗುವುದು ಎಂದು ಸಚಿವರು ತಿಳಿಸಿದರು.

Rain--06

Rain--10

Rain--02

Rain--04

WhatsApp Image 2017-09-04 at 10.47.01 AM

WhatsApp Image 2017-09-04 at 10.53.19 AM

WhatsApp Image 2017-09-04 at 11.31.27 AM

WhatsApp Image 2017-09-04 at 11.34.59 AM

Facebook Comments

Sri Raghav

Admin