ಮೆಟ್ರೋ 2ನೇ ಹಂತದ ಭೂ ಸ್ವಾಧೀನಕ್ಕೆ 2ಸಾವಿರ ಕೋಟಿ ಹೆಚ್ಚುವರಿ ಅನುದಾನ

ಈ ಸುದ್ದಿಯನ್ನು ಶೇರ್ ಮಾಡಿ

Metro--01

ಬೆಂಗಳೂರು, ಸೆ.4-ನಮ್ಮ ಮೆಟ್ರೋ ಯೋಜನೆ 2ನೆ ಹಂತದ ಭೂಸ್ವಾಧೀನ ಪ್ರಕ್ರಿಯೆಗೆ 6293.16 ಕೋಟಿ ರೂ. ವೆಚ್ಚ ಹೆಚ್ಚಳಕ್ಕೆ ಅನುಮೋದನೆ, ಬೆಂಗಳೂರು ನೀರ್ಗಾಲುವೆಗಳ ಕಾಮಗಾರಿಗೆ 300 ಕೋಟಿ ರೂ.ಗಳ ಅನುದಾನ, ಪ್ರಸಕ್ತ ಸಾಲಿನಲ್ಲಿ ಕೃಷಿ ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು 250 ಹೋಬಳಿಗಳಲ್ಲಿ ಸ್ಥಾಪಿಸಲು 122 ಕೋಟಿ ರೂ.ಗಳ ಅನುದಾನ ಬಿಡುಗಡೆಗೆ ಆಡಳಿತಾತ್ಮಕ ಅನುಮೋದನೆ ಸೇರಿದಂತೆ ಹಲವು ಮಹತ್ವದ ನಿರ್ಧಾರಗಳನ್ನು ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಕೈಗೊಳ್ಳಲಾಯಿತು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಸಂಪುಟ ಸಭೆಯ ನಂತರ ಕಾನೂನು ಸಚಿವ ಟಿ.ಬಿ.ಜಯಚಂದ್ರ ಸುದ್ದಿಗಾರರೊಂದಿಜಗ ಮಾತನಾಡಿ, ಸಂಪುಟ ಸಭೆಯ ವಿವರಗಳನ್ನು ನೀಡಿದರು. ನಮ್ಮ ಮೆಟ್ರೋ ಯೋಜನೆಯ ಹಂತ-2ರ ಭೂಸ್ವಾಧೀನ ವೆಚ್ಚ 4,105 ಕೋಟಿ ರೂ. ಇದ್ದುದನ್ನು 6,293.16 ಕೋಟಿ ರೂ. ಹೆಚ್ಚಳಕ್ಕೆ ಅಂದರೆ 2,187.46 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಲು ನಿರ್ಧರಿಸಲಾಯಿತು ಎಂದು ಅವರು ತಿಳಿಸಿದರು.

ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಅನುಕೂಲವಾಗಲೆಂದು ಕೃಷಿ ಯಂತ್ರೋಪಕರಣಗಳನ್ನು ಬಾಡಿಗೆ ನೀಡಲು 450 ಯಂತ್ರೋಪಕರಣಗಳ ಬಾಡಿಗೆ ಆಧಾರಿತ ಸೇವಾ ಕೇಂದ್ರಗಳನ್ನು ತೆರೆಯಲಾಗಿತ್ತು. ಈಗ ಇನ್ನೂ 250 ಕೇಂದ್ರಗಳನ್ನು ತೆರೆಯಲು 122 ಕೋಟಿ ರೂ. ಅನುದಾನ ನೀಡಲು ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಬೆಂಗಳೂರಿನ 842 ಕಿ.ಮೀ. ಉದ್ದದ ನೀರ್ಗಾಲುವೆಗಳ ಅಭಿವೃದ್ಧಿಗೆ 300 ಕೋಟಿ ರೂ.ಗಳ ಅನುದಾನ ನೀಡಲು ಆಡಳಿತ್ಮಾಕ ಒಪ್ಪಿಗೆ ಪಡೆಯಲಾಯಿತು.

ಕೃಷಿ ಭಾಗ್ಯ ಯೋಜನೆಯಂತೆ ತೋಟಗಾರಿಕೆ ಇಲಾಖೆಯಲ್ಲೂ ಯೋಜನೆ ಜಾರಿಗೊಳಿಸುವ ಸಂಬಂಧ 250 ಕೋಟಿ ರೂ.ಗಳ ಅನುದಾನ ಕೊಟ್ಟು 25 ಜಿಲ್ಲೆಗಳ 122 ತಾಲೂಕುಗಳಲ್ಲಿ ಪಾಲಿಹೌಸ್ ನಿರ್ಮಾಣ ಸೇರಿದಂತೆ ಹಲವು ತೋಟಗಾರಿಕಾ ಸೌಲಭ್ಯಗಳನ್ನು ಪಡೆಯಬಹುದಾಗಿದ್ದು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಶೇ.90ರಷ್ಟು, ಸಾಮಾನ್ಯದವರಿಗೆ ಶೇ.50ರಷ್ಟು ರಿಯಾಯ್ತಿ ನೀಡಲು ನಿರ್ಧರಿಸಲಾಗಿದೆ ಎಂದು ಸಚಿವರು ವಿವರಿಸಿದರು.
ಕೋರಮಂಗಲ ದೊಡ್ಡ ಕಾಲುವೆ ನೀರನ್ನು ಶುದ್ಧೀಕರಿಸಿ ಕೆರೆಗೆ ಹರಿಸಲು 10 ಕೋಟಿಗಳ ಅನುದಾನದಕ್ಕೆ ಆಡಳಿತಾತ್ಮಕ ಅನುಮೋದನೆ ದೊರೆತಿದೆ. ಕರಾವಳಿ ಪ್ರದೇಶದಲ್ಲಿ ಸಿಆರ್‍ಝಡ್‍ಯೇತರ ಸಂಪ್ರದಾಯ ಮರಳು ತೆಗೆಯಲು ಅನುಮತಿ ನೀಡಲು ನಿರ್ಧರಿಸಲಾಗಿದೆ. ಕೋಲಾರ ಜಿಲ್ಲೆ ಮಾಲೂರು ಸರ್ಕಾರಿ ಪದವಿ ಪೂರ್ವ ಕಾಲೇಜು ಹೊರಂಗಣ ಕ್ರೀಡಾಂಗಣದ ಹೊರಭಾಗದಲ್ಲಿರುವ ಮಳಿಗೆಗಳನ್ನು ಭೋಗ್ಯಕ್ಕೆ ನೀಡಲು ನಿರ್ಧರಿಸಲಾಗಿದೆ.

2017-18ನೆ ಸಾಲಿನಲ್ಲಿ ಆರ್‍ಕೆಎಸ್‍ಕೆ ಮತ್ತು ಆರ್‍ಬಿಎಸ್‍ಕೆ ಕಾರ್ಯಕ್ರಮದಲ್ಲಿ ಪೋಲಿಕ್ ಆ್ಯಸಿಡ್ ಮತ್ತು ಅಲ್‍ಬೆಂಡೋಜೋಲ್ ಮಾತ್ರೆಗಳನ್ನು ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ 10.40 ಕೋಟಿ ರೂ.ಗಳ ಅನುದಾನದಿಂದ ಹಾಗೂ ಶುಚಿ ಕಾರ್ಯಕ್ರಮದಡಿಯಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್ ಪ್ಯಾಡ್‍ಗಳನ್ನು 47.6 ಕೋಟಿ ರೂ.ಗಳ ಅನುದಾನದಿಂದ ಭರಿಸಿ ಖರೀದಿ ಪ್ರಕ್ರಿಯೆ ನಡೆಸಲು ಸಂಪುಟದಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಲಾಯಿತು ಎಂದು ಸಚಿವರು ತಿಳಿಸಿದರು. ಬೆಂಗಳೂರು ನಗರಜಿಲ್ಲೆ ಅನೇಕಲ್ ಪಟ್ಟಣದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಯ 13.25 ಕೋಟಿ ರೂ.ಗಳ ಪರಿಷ್ಕøತ ಅಂದಾಜು ಪಟ್ಟಿಗೆ ಅನುಮೋದನೆ ನೀಡಲಾಗಿದೆ.

ಆರಕ್ಷಕ ನಿರೀಕ್ಷಕರಾಗಿದ್ದ ದಿ.ಎಂ.ಮಹೇಶ್‍ಕುಮಾರ್ ಅವರ ಪತ್ನಿ ಸೌಮ್ಯ ಸಂಪತ್ ಅವರಿಗೆ ಅನುಕಂಪದ ಆಧಾರದ ಮೇಲೆ ಸಬ್‍ರಿಜಿಸ್ಟ್ರಾರ್ ಹುದ್ದೆ ನೀಡುವ ಬಗ್ಗೆ ಸಂಪುಟ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂಕಿನ ಹೇಮಾವತಿ ವಸಾಹತು ಜಕ್ಕನಹಳ್ಳಿಯಲ್ಲಿರುವ ಒಟ್ಟು 5 ಎಕರೆ 16 ಗುಂಟೆ ಪ್ರದೇಶವನ್ನು ಆರೋಗ್ಯ, ಸಾರಿಗೆ, ಕಂದಾಯ ಇಲಾಖೆ, ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ ಮಾರ್ಗಸೂಚಿ ದರದಂತೆ ಹಸ್ತಾಂತರಿಸಲು ನಿರ್ಧಾರ ಕೈಗೊಳ್ಳಲಾಯಿತು.

Facebook Comments

Sri Raghav

Admin