ಸರ್ಕಾರಕ್ಕೆ ಸೆಡ್ಡು ಹೊಡೆದ ಬಿಜೆಪಿ, 7ರಂದು ಮಂಗಳೂರು ಚಲೋ

ಈ ಸುದ್ದಿಯನ್ನು ಶೇರ್ ಮಾಡಿ

BJP-Rath-Yatra--01

ಬೆಂಗಳೂರು,ಸೆ.4-ಇದೇ 7ರಂದು ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಮಂಗಳೂರು ಚಲೋ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವ ಮೂಲಕ ಸರ್ಕಾರಕ್ಕೆ ಸೆಡ್ಡು ಹೊಡೆಯಲು ಬಿಜೆಪಿ ಮುಂದಾಗಿದೆ. ಗುರುವಾರ ಮಂಗಳೂರಿನ ಮಂಗಳ ಕ್ರೀಡಾಂಗಣದಲ್ಲಿ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಯುವ ಮೋರ್ಚಾ ಕಾರ್ಯಕರ್ತರು ಈ ಸಮಾವೇಶಕ್ಕೆ ಭಾಗವಹಿಸಲಿದ್ದಾರೆ. ಶಾಂತಿ-ಸೌಹಾರ್ದತೆಗೆ ಧಕ್ಕೆ ಬರುತ್ತದೆ ಎಂಬ ಹಿನ್ನೆಲೆಯಲ್ಲಿ ಇದಕ್ಕೆ ಅವಕಾಶ ನೀಡಬಾರದು ಎಂಬುದು ಸರ್ಕಾರದ ಉದ್ದೇಶ.

ಹೀಗಾಗಿ ಈಗಾಗಲೇ ಪೊಲೀಸರಿಗೆ ಮೌಖಿಕ ಸೂಚನೆ ನೀಡಿರುವ ಸರ್ಕಾರ ಯಾವುದೇ ಕಾರಣಕ್ಕೂ ಯುವ ಮೋರ್ಚಾ ಕಾರ್ಯಕರ್ತರು ಮಂಗಳೂರು ಪ್ರವೇಶಿಸಿದಂತೆ ತಡೆ ಹಿಡಿಯುವಂತೆ ಸೂಚಿಸಿದೆ.  ಸರ್ಕಾರದ ಸೂಚನೆಯಂತೆ ಪೊಲೀಸರು ಬಿಜೆಪಿ ಯುವ ಮೋರ್ಚಾ ಗುರುವಾರ ಹಮ್ಮಿಕೊಂಡಿರುವ ಬೈಕ್ ರ್ಯಾಲಿಗೆ ಕಾನೂನು ಸುವ್ಯವಸ್ಥೆ ಮುಂದಿಟ್ಟುಕೊಂಡು ಅವಕಾಶ ನೀಡಿಲ್ಲ. ಇನ್ನು ರಾಜ್ಯದ ವಿವಿಧೆಡೆ ಆಗಮಿಸಲಿರುವ ಕಾರ್ಯಕರ್ತರು ತಂಗುವ ಹೋಟೆಲ್, ಕಲ್ಯಾಣ ಮಂಟಪಗಳಿಗೆ ನೋಟಿಸ್ ನೀಡಲಾಗಿದೆ.

ಶತಾಯಗತಾಯ ಮಂಗಳೂರು ಯುವ ಮೋರ್ಚಾ ರ್ಯಾಲಿ ತಡೆಗಟ್ಟಬೇಕೆಂಬುದು ಸರ್ಕಾರದ ಉದ್ದೇಶವಾದರೆ ಇದನ್ನು ಮಾಡಿಯೇ ತೀರುತ್ತೇವೆ ಎಂದು ಬಿಜೆಪಿ ಪಟ್ಟು ಹಿಡಿದಿದೆ.  ಯುವ ಮೋರ್ಚಾ ರ್ಯಾಲಿಯನ್ನು ಯಶಸ್ವಿಗೊಳಿಸಲು ಪಕ್ಷದ ಮುಖಂಡ ಹಾಗೂ ವಿಧಾನಸಭೆಯ ವಿರೋಧ ಪಕ್ಷದ ಉಪನಾಯಕ ಆರ್.ಅಶೋಕ್ ಅವರಿಗೆ ಜವಾಬ್ದಾರಿ ನೀಡಲಾಗಿದೆ.   ಬೆಂಗಳೂರಿನಲ್ಲಿ ಇಂದು ಪ್ರತಿಕ್ರಿಯೆ ನೀಡಿದ ಅಶೋಕ್, ಮಂಗಳೂರಿನಲ್ಲಿ ನಡೆಸಲು ಉದ್ದೇಶಿಸಿರುವ ಯುವ ಮೋರ್ಚಾ ರ್ಯಾಲಿಯನ್ನು ಸರ್ಕಾರ ತಡೆಹಿಡಿಯಲು ಸಾಧ್ಯವೇ ಇಲ್ಲ. ನಾವು ಕಾನೂನು ಬದ್ಧವಾಗಿಯೇ ಪ್ರತಿಭಟನಾ ರ್ಯಾಲಿ ನಡೆಸುತ್ತೇವೆ. ಸರ್ಕಾರ ಅದೇಗೆ ತಡೆಯುತ್ತದೆ ನೋಡೋಣ ಎಂದು ಸವಾಲು ಹಾಕಿದರು.

ನಾವು ರ್ಯಾಲಿ ನಡೆಸಲು ಈಗಾಗಲೇ ಸಂಬಂಧಪಟ್ಟ ಪೊಲೀಸರಿಗೆ ಮಾಹಿತಿ ನೀಡಿದ್ದೇವೆ. ಇದು ಶಾಂತಿಯುತವಾಗಿ ನಡೆಯಲಿರುವ ಸಮಾವೇಶವಾಗಿದೆ. ಸರ್ಕಾರ ಗುಪ್ತಚರ ವಿಭಾಗದ ವರದಿಯನ್ನು ಮುಂದಿಟ್ಟುಕೊಂಡು ರ್ಯಾಲಿ ತಡೆಯುವ ಷಡ್ಯಂತ್ರ ನಡೆಸಿದೆ. ಇದಕ್ಕೆ ಬಿಜೆಪಿ ಸೊಪ್ಪು ಹಾಕುವುದಿಲ್ಲ ಎಂದು ಗುಡುಗಿದರು. ರಾಜ್ಯದ ವಿವಿಧ ಭಾಗಗಳಿಂದ ಒಟ್ಟು ಎರಡು ಲಕ್ಷಕ್ಕೂ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಲಿದ್ದಾರೆ. ಸುಮಾರು 10 ಸಾವಿರ ದ್ವಿಚಕ್ರ ವಾಹನಗಳ ರ್ಯಾಲಿ ನಡೆಯಲಿದೆ. ಕಾರ್ಯಕ್ರಮಕ್ಕೆ ಪಕ್ಷದ ರಾಜ್ಯಾಧ್ಯಕ್ಷರಾದ ಯಡಿಯೂರಪ್ಪ , ಈಶ್ವರಪ್ಪ , ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದಗೌಡ, ಅನಂತಕುಮಾರ್ ಹೆಗಡೆ, ರಮೇಶ್ ಜಿಗಜಿಣಗಿ, ಜಗದೀಶ್ ಶೆಟ್ಟರ್, ಸಂಸದರಾದ ಶೋಭಾ ಕರಂದ್ಲಾಜೆ, ನಳಿನ್‍ಕುಮಾರ್ ಕಟೀಲ್ ಸೇರಿದಂತೆ ಅನೇಕರು ಭಾಗವಹಿಸಲಿದ್ದಾರೆ.

ಶಾಂತಿಯುತವಾಗಿ ನಡೆಯಲಿರುವ ಪ್ರತಿಭಟನೆಯನ್ನು ಹತ್ತಿಕ್ಕಲು ಮುಂದಾದರೆ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸರ್ಕಾರದ ಗೊಡ್ಡು ಬೆದರಿಕೆ ನಾವು ಬಗ್ಗುವುದಿಲ್ಲ. ಎಸ್‍ಡಿಪಿಐ ಹಾಗೂ ಪಿಎಫ್‍ಐನಂತಹ ಸಂಘಟನೆಗಳು ಸಮಾವೇಶ ನಡೆಸಿದರೆ ಸರ್ಕಾರ ಬೆಂಬಲ ನೀಡುತ್ತದೆ. ನಾವು ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದಾಗಿ ಹೇಳಿದರೂ ತಡೆಯುವ ಷಡ್ಯಂತ್ರ ನಡೆದಿದೆ. ಇದಕ್ಕೆ ನಾವು ಕುಗ್ಗುವುದಿಲ್ಲ , ಜಗ್ಗುವುದೂ ಇಲ್ಲ ಎಂದು ಹೇಳಿದರು.

Facebook Comments

Sri Raghav

Admin