ಕೋಮು ಸಾಮರಸ್ಯ ಹಾಳು ಮಾಡುವ ರ‍್ಯಾಲಿ : ಪರಮೇಶ್ವರ್

ಈ ಸುದ್ದಿಯನ್ನು ಶೇರ್ ಮಾಡಿ

Parameshwar--01

ಬೆಂಗಳೂರು, ಸೆ.5- ಬೈಕ್ ರ್ಯಾಲಿ, ಮಂಗಳೂರು ಚಲೋ ಹಮ್ಮಿಕೊಳ್ಳುವ ಮೂಲಕ ಕೋಮು ಗಲಭೆ, ಸಮಾಜದ ಸ್ವಾಸ್ಥ್ಯ ಹಾಳುಗೆಡಹುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಿದೆ. ಇದನ್ನು ಸರ್ಕಾರ ಮತ್ತು ಸಾರ್ವಜನಿಕರು ಸಹಿಸುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಕಿಡಿಕಾರಿದ್ದಾರೆ. ಶಾಸಕರಾದ ಎಸ್.ಟಿ.ಸೋಮಶೇಖರ್, ಮುನಿರತ್ನ, ಭೈರತಿ ಬಸವರಾಜ್ ಮುಂತಾದವರೊಂದಿಗೆ ಇಂದು ಬೆಂಗಳೂರಿನ ಹಲವು ಇಂದಿರಾ ಕ್ಯಾಂಟಿನ್‍ಗಳಿಗೆ ಖುದ್ದು ಭೇಟಿ ನೀಡಿ ಅಲ್ಲಿನ ಪರಿಸ್ಥಿತಿ ಅವಲೋಕಿಸಿ ಸ್ಥಳೀಯರೊಂದಿಗೆ ಉಪಹಾರ ಸೇವಿಸಿದ ನಂತರ ಮಾತನಾಡಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಮಾಡಲು ಎಲ್ಲರಿಗೂ ಅವಕಾಶವಿದೆ. ಕಾನೂನು ಕೈಗೆತ್ತಿಕೊಳ್ಳುವುದು ಸರಿಯಾದ ಕ್ರಮವಲ್ಲ. ಬಿಜೆಪಿ ಕೋಮು ಸಾಮರಸ್ಯವನ್ನು ಹಾಳು ಮಾಡುವ ಕೆಲಸ ಮಾಡುತ್ತಿದೆ. ನಮ್ಮ ಸರ್ಕಾರ ಕಳೆದ ನಾಲ್ಕು ವರ್ಷಗಳಲ್ಲಿ ಜನಪರ ಕಾರ್ಯನಿರ್ವಹಿಸುತ್ತಿದ್ದು, ಸಮಾಜಮುಖಿ ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ. ಇದನ್ನು ಸಹಿಸದೆ ಇಂತಹ ರ್ಯಾಲಿಗಳನ್ನು ನಡೆಸುತ್ತಿದ್ದಾರೆ ಎಂದು ಹೇಳಿದರು.ನಾವು ಮಾಡಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ಮುಂದಿಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ. ಜನರ ವಿಶ್ವಾಸವನ್ನು ಮತ್ತೆ ಗಳಿಸುವಷ್ಟು ಅಭಿವೃದ್ಧಿ ಕೆಲಸವನ್ನು ನಮ್ಮ ಸರ್ಕಾರ ಮಾಡಿದೆ ಎಂದು ಅವರು ತಿಳಿಸಿದರು.

ಬಡವರು, ಶ್ರಮಿಕರು, ಅನಾಥರ ಹಸಿವು ನೀಗಿಸಲು ಸ್ಥಾಪನೆಯಾದ ಇಂದಿರಾ ಕ್ಯಾಂಟಿನ್ ಕಾರ್ಯವೈಖರಿ ಬಗ್ಗೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಕ್ಯಾಂಟಿನ್‍ಗಳನ್ನು ಮತ್ತಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಹೆಜ್ಜೆ ಇಟ್ಟಿದೆ. ಎಲ್ಲ 198 ವಾರ್ಡ್‍ಗಳಲ್ಲಿ ಈ ಕಾರ್ಯಕ್ರಮ ಅನುಷ್ಠಾನಗೊಂಡರೆ ಪ್ರತಿದಿನ ಕಡಿಮೆ ದರದಲ್ಲಿ 3 ಲಕ್ಷ ಜನರಿಗೆ ಊಟ-ಉಪಹಾರ ದೊರೆಯುತ್ತದೆ. ಈ ಯೋಜನೆಯ ಯಶಸ್ವಿ ಸಹಿಸಿಕೊಳ್ಳದ ಬಿಜೆಪಿ ಅನಗತ್ಯ ಆರೋಪ ಮಾಡುತ್ತಿದೆ. ಬಿಜೆಪಿಯವರ ತಂತ್ರ-ಕುತಂತ್ರಗಳಿಗೆ ಜನರೇ ಮುಂದಿನ ದಿನಗಳಲ್ಲಿ ಪಾಠ ಕಲಿಸಲಿದ್ದಾರೆ ಎಂದರು.

ಸ್ಥಳೀಯ ಜನರೊಂದಿಗೆ ಉಪಹಾರ ಸೇವಿಸಿ ಕ್ಯಾಂಟಿನ್ ಅಗತ್ಯತೆ, ಅದರ ಸದುಪಯೋಗದ ಬಗ್ಗೆ ವಿಚಾರ ವಿನಿಮಯ ನಡೆಸಿದರು. ಪ್ರಾರಂಭಿಕ ಹಂತದಲ್ಲಿ ಸಣ್ಣಪುಟ್ಟ ಸಮಸ್ಯೆಗಳಿದ್ದು, ಅವುಗಳನ್ನು ಸರ್ಕಾರ ಪರಿಹರಿಸುತ್ತದೆ. ರಾಜ್ಯ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷೆ ಯೋಜನೆ ಇದಾಗಿದ್ದು, ಅನ್ನಭಾಗ್ಯ ಯೋಜನೆ ಜತೆಗೆ ಇಂದಿರಾ ಕ್ಯಾಂಟಿನ್ ಕಡುಬಡವರಿಗೆ ಅತ್ಯುತ್ತಮ ಯೋಜನೆಯಾಗಿದೆ. ಶ್ರಮಿಕ ವರ್ಗದವರು ಇದರಿಂದ ಅನುಕೂಲ ಪಡೆಯುತ್ತಿದ್ದಾರೆ. ಈ ಯೋಜನೆಯಿಂದ ನಮ್ಮ ಸರ್ಕಾರಕ್ಕೆ ಉತ್ತೇಜನ ಸಿಕ್ಕಿದೆ. ಈ ಯೋಜನೆಯನ್ನು ರಾಜ್ಯಾದ್ಯಂತ ಪ್ರಾರಂಭಿಸಲು ನಾನು ಈಗಾಗಲೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿದ್ದೇನೆ. ಬಿಜೆಪಿಯವರಿಗೆ ಹಸಿದವರ ಬಗ್ಗೆ ಕಾಳಜಿ ಇಲ್ಲ. ಅವರು ಹೊಟ್ಟೆ ತುಂಬಿದವರು. ಹಾಗಾಗಿ ಈ ಯೋಜನೆಯನ್ನು ಟೀಕಿಸುತ್ತಾರೆ ಎಂದರು.

ಗಂಗಾನಗರದ ಸಿಬಿಐ ಕಚೇರಿ ಪಕ್ಕದಲ್ಲಿರುವ ಇಂದಿರಾ ಕ್ಯಾಂಟಿನ್‍ಗೆ ಭೇಟಿ ನೀಡಿದ ಸಂದರ್ಭದಲ್ಲಿ ಕ್ಯಾಂಟಿನ್ ನಿರ್ವಾಹಕರು ಬೆಳಗಿನ ತಿಂಡಿ ಪ್ರಮಾಣ ಕಡಿಮೆ ಬರುತ್ತಿದೆ ಎಂದು ಅಧ್ಯಕ್ಷರ ಗಮನಕ್ಕೆ ಬಂದಾಗ, ಬಿಬಿಎಂಪಿ ಆಯುಕ್ತರಿಗೆ ಕರೆ ಮಾಡಿ ತಿಂಡಿ ಪ್ರಮಾಣವನ್ನು ಹೆಚ್ಚಿಸುವಂತೆ ಕೋರಿದರು.

Facebook Comments

Sri Raghav

Admin