ಜಾಗತಿಕ ಪರಿವರ್ತನೆಗೆ ಮೋದಿ ದಶಸೂತ್ರ

ಈ ಸುದ್ದಿಯನ್ನು ಶೇರ್ ಮಾಡಿ

Modi--0100

ಕ್ಸಿಯಾಮೆನ್(ಚೀನಾ), ಸೆ.5-ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನದ ವಿರುದ್ಧ ಮತ್ತೊಂದು ರಾಜತಾಂತ್ರಿಕ ಗೆಲುವು ಸಾಧಿಸಿರುವ ಸಂತಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ, ಬ್ರಿಕ್ಸ್ ದೇಶಗಳ ಅಭಿವೃದ್ದಿ ಕಾರ್ಯಸೂಚಿಯು ಸಬ್‍ಕಾ ಸಾಥ್ ಸಬ್‍ಕಾ ವಿಕಾಸ್ (ಸರ್ವರ ಸಹಕಾರ, ಸರ್ವರ ವಿಕಾಸ) ಎಂಬ ತತ್ವದ ಮೇಲೆ ಅವಲಂಬಿಸಿದೆ ಎಂದು ಅರ್ಥಗರ್ಭಿತವಾಗಿ ಹೇಳಿದ್ದಾರೆ. ಅಲ್ಲದೇ ಜಾಗತಿಕ ಪರಿವರ್ತನೆಗಾಗಿ ದಶ ಬದ್ಧತೆಗಳ ಸೂತ್ರವನ್ನೂ ಮುಂದಿಟ್ಟಿದ್ದಾರೆ.
ಚೀನಾದ ಬಂದರು ನಗರಿ ಕ್ಸಿಯಾಮೆನ್‍ನಲ್ಲಿ ನಡೆಯುತ್ತಿರುವ ಬ್ರಿಕ್ಸ್ (ಬ್ರೆಜಿಲ್, ರಷ್ಯಾ, ಇಂಡಿಯಾ, ಚೀನಾ, ದಕ್ಷಿಣ ಆಫ್ರಿಕಾ) ದೇಶಗಳ 9ನೇ ಶೃಂಗಸಭೆಯಲ್ಲಿ ಹೊರಹೊಮ್ಮುತ್ತಿರುವ ಮಾರುಕಟ್ಟೆ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸದ್ದುದ್ದೇಶಗಳನ್ನು ಒಳಗೊಂಡ ಸದೃಢ ವಿಶ್ವ ನಿರ್ಮಾಣಕ್ಕೆ ಕರೆ ನೀಡಿದರು.

ಬ್ರಿಕ್ಸ್ ದೇಶಗಳು ಡಿಜಿಟಲ್ ಜಗತ್ತು, ಕೌಶಲ ಜಗತ್ತು, ಆರೋಗ್ಯಕರ ಜಗತ್ತು, ಸಮಾನತೆಯ ಜಗತ್ತು ಮತ್ತು ಸೌಹಾರ್ದತೆಯ ಜಗತ್ತು ನಿರ್ಮಾಣಕ್ಕಾಗಿ ಸಾಮೂಹಿಕ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸುವಂತೆ ಪ್ರಧಾನಿ ಸಲಹೆ ಮಾಡಿದರು. ಜಾಗತಿಕ ಪರಿವರ್ತನೆಗಾಗಿ ಮೇಲಿನ ಅಂಶಗಳನ್ನೂ ಒಳಗೊಂಡ 10 ಉದಾತ್ತ ಬದ್ದತೆಗಳ ಅಗತ್ಯವನ್ನೂ ಅವರು ಪ್ರತಿಪಾದಿಸಿದರು.  ಭಯೋತ್ಪಾದನೆ ಮತ್ತು ಸೈಬರ್ ದಾಳಿಯ ಆತಂಕಗಳನ್ನು ನಿಭಾಯಿಸಲು ಬ್ರಿಕ್ಸ್ ನಾಯಕತ್ವದ ಪರಸ್ಪರ ಸಹಕಾರ ಅಗತ್ಯದ ಮಾತನ್ನು ಅವರು ಪುನರುಚ್ಚರಿಸಿದರು. ದೇಶಗಳಲ್ಲಿ ಸಂಭವಿಸುತ್ತಿರುವ ನೈಸರ್ಗಿಕ ಮತ್ತು ಮಾನವ ನಿರ್ಮಿತ ವಿಕೋಪಗಳ ನಿರ್ವಹಣೆಗೂ ಸಹಕಾರ ನೀಡುವಂತೆ ಸಲಹೆ ಮಾಡಿದರು.

ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಮಾತನಾಡಿ, ಅಭಿವೃದ್ದಿ ಹೊಂದುತ್ತಿರುವ ದೇಶಗಳು ಪ್ರಗತಿಯ ಮುಖ್ಯ ಯಂತ್ರವಾಗಿವೆ ಎಂದು ಬಣ್ಣಿಸಿದರು. ಇಂಥ ದೇಶಗಳ ನೆರವಿಗಾಗಿ ನೆರವು ನೀಡಲು ಚೀನಾ 500 ದಶಲಕ್ಷ ಡಾಲರ್ ನೆರವು ಒದಗಿಸಲಿದೆ ಎಂದು ಅವರು ಈ ಸಂದರ್ಭದಲ್ಲಿ ಘೋಷಿಸಿದರು.

Facebook Comments

Sri Raghav

Admin