ನಾಳೆ ಮೈಸೂರಿನಲ್ಲಿ ನಿಷೇಧಾಜ್ಞೆ

ಈ ಸುದ್ದಿಯನ್ನು ಶೇರ್ ಮಾಡಿ

Mysuru--01

ಮೈಸೂರು: ಈ ನಡುವೆ ಬಿಜೆಪಿಯವರು ನಾಳೆ ನಗರದಲ್ಲಿ ಹಮ್ಮಿಕೊಂಡಿರುವ ಬೈಕ್ ರ್ಯಾಲಿಗೆ ನಗರ ಪೊಲೀಸ್ ಆಯುಕ್ತ ಸುಬ್ರಹ್ಮಣ್ಯೇಶ್ವರರಾವ್ ಅನುಮತಿ ನಿರಾಕರಿಸಿ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಬೈಕ್‍ರ್ಯಾಲಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುವುದರಿಂದ ರ್ಯಾಲಿಯನ್ನು ನಿಷೇಧಿಸಲಾಗಿದೆ. ನಾಳೆ ಬೆಳಗ್ಗೆ 8 ಗಂಟೆಯಿಂದ ಸೆ.8ರ ಬೆಳಗ್ಗೆ 6 ಗಂಟೆ ವರೆಗೆ 144 ಸೆಕ್ಷನ್ ಜಾರಿಗೊಳಿಸಲಾಗಿದೆ ಎಂದರು. ಒಂದು ವೇಳೆ ಬಿಜೆಪಿಯವರು ನಿಷೇಧಾಜ್ಞೆ ಮೀರಿ ಬೈಕ್ ರ್ಯಾಲಿ ಮಾಡಲು ಮುಂದಾದರೆ ಕಾರ್ಯಕರ್ತರನ್ನು ಬಂಧಿಸಲಾಗುತ್ತದೆ. ಮೈಸೂರು ಜೈಲು ಹೊರತು ಪಡಿಸಿ ಬೇರೆ ಬೇರೆ ಜೈಲುಗಳಿಗೆ ಅವರನ್ನು ರವಾನಿಸಲಾಗುತ್ತದೆ. ಬಂಧಿತರ ವಿರುದ್ಧ ರೌಡಿಶೀಟರ್ ತೆರೆಯಲಾಗುವುದು ಎಂದು ಅವರು ಎಚ್ಚರಿಸಿದರು.

ಬೈಕ್ ರ್ಯಾಲಿ ತೆರಳುತ್ತಿರುವ ಮಾರ್ಗ ಸೂಕ್ಷ್ಮ ಪ್ರದೇಶವಾಗಿದೆ. ಹಾಗಾಗಿ ಈ ರ್ಯಾಲಿಯನ್ನು ಆರಂಭದ ಸ್ಥಳವಾಗಿರುವ ಮೈಸೂರಿನಲ್ಲಿ ತಡೆಯಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು. ರಾಜಕೀಯ ಪ್ರೇರಿತ ಕಾರ್ಯಕ್ರಮಗಳಿಗಾಗಿ ಆಯೋಜಿಸಿರುವ ಬೈಕ್ ರ್ಯಾಲಿಗೆ ಈ ಹಿಂದೆಯೂ ಅನುಮತಿ ನೀಡಿರಲಿಲ್ಲ. ಮುಂದೆಯೂ ನೀಡುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದರು.  ಪತ್ರಿಕಾಗೋಷ್ಠಿಯಲ್ಲಿ ಡಿಸಿಪಿಗಳಾದ ವಿಕ್ರಂ ಆಮ್ಟೆ, ವಿಷ್ಣುವರ್ಧನ್ ಉಪಸ್ಥಿತರಿದ್ದರು.

 

 

 

Facebook Comments

Sri Raghav

Admin