ಬಿಜೆಪಿಯ ‘ಮಂಗಳೂರು ಚಲೋ’ ಯಾಕೆ …? ಗೌಡರ ಪ್ರಶ್ನೆ

ಈ ಸುದ್ದಿಯನ್ನು ಶೇರ್ ಮಾಡಿ

devegowda-davanagere

ದಾವಣಗೆರೆ, ಸೆ.5- ಬಿಜೆಪಿಯವರು ಯಾವ ಉದ್ದೇಶಕ್ಕಾಗಿ ಈ ಮಂಗಳೂರು ಚಲೋ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ ಎಂದು ಪ್ರಶ್ನಿಸಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು, ರಾಷ್ಟ್ರೀಯ ಪಕ್ಷಗಳ ರಾಜಕೀಯದಾಟವನ್ನು ಜನತೆ ನೋಡುತ್ತಿದ್ದು, ತಕ್ಕಪಾಠ ಕಲಿಸಲಿದ್ದಾರೆ ಎಂದು ಹೇಳಿದರು.
ನಿನ್ನೆ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಪಾಲ್ಗೊಳ್ಳಲು ಇಲ್ಲಿಗೆ ಆಗಮಿಸಿದ್ದ ಜೆಡಿಎಸ್ ವರಿಷ್ಠ ದೇವೇಗೌಡರು ಇಂದು ಸುದ್ದಿಗಾರರ ಜತೆ ಮಾತನಾಡಿ, ರಾಷ್ಟ್ರೀಯ ಪಕ್ಷಗಳೆನಿಸಿಕೊಂಡಿರುವ ಈ ಕಾಂಗ್ರೆಸ್ ಮತ್ತು ಬಿಜೆಪಿಗಳು ರಾಜ್ಯದ ಜನತೆಗೆ ಯಾವ ಸಂದೇಶ ಕೊಡುತ್ತಿವೆ ಎಂದು ಪ್ರಶ್ನಿಸಿದರು.

ಹಿಂಸಾಚಾರಕ್ಕೆ ಬಲಿಯಾದವರ ಕುಟುಂಬಗಳು ಸಂಕಟದಲ್ಲಿ ನೊಂದಿದ್ದರೆ, ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಸಾವಿನಲ್ಲಿ ರಾಜಕೀಯ ಮಾಡಲು ಹವಣಿಸುತ್ತಿದ್ದಾರೆ ಎಂದು ಟೀಕಿಸಿದ ಅವರು, ಯಾವುದೇ ಕಾರಣಕ್ಕೂ ಯಾರೂ ಶಾಂತಿ ಕದಡುವ ಪ್ರಯತ್ನಗಳನ್ನು ಮಾಡಬಾರದು ಎಂದರು.
ಜನರನ್ನು ಸಂಕಷ್ಟಕ್ಕೆ ತಳ್ಳಿ ರಾಜಕೀಯ ಮಾಡುವುದು, ಸ್ವಾರ್ಥಕ್ಕಾಗಿ ಸಮಾಜದಲ್ಲಿ ಶಾಂತಿಕದಡುವಂತಹ ಕೆಲಸಗಳನ್ನು ಮಾಡುವುದು ಸಲ್ಲದು, ಕಾಂಗ್ರೆಸ್‍ನವರೇ ಇರಲಿ, ಬಿಜೆಪಿಯವರೇ ಇರಲಿ ರಾಜಕೀಯಕ್ಕಾಗಿ ರಾಜಕೀಯ ಮಾಡಬಾರದು ಎಂದು ಹೇಳಿದರು.

Facebook Comments

Sri Raghav

Admin