ಗೌರಿ ಲಂಕೇಶ್ ಕಗ್ಗೊಲೆ ಖಂಡಿಸಿ ದೇಶದ ವಿವಿಧೆಡೆ ಪ್ರತಿಭಟನೆ

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh

ನವದೆಹಲಿ, ಸೆ.6-ಗೌರಿ ಲಂಕೇಶ್ ಹತ್ಯೆ ಖಂಡಿಸಿ ಪತ್ರಕರ್ತರ ಸಂಘಟನೆಗಳೂ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ದೇಶದ ವಿವಿಧೆಡೆ ಇಂದು ಪ್ರತಿಭಟನೆ ನಡೆಸಿ ಸೂಕ್ತ ತನಿಖೆಗೆ ಆಗ್ರಹಿಸಿವೆ. ದೆಹಲಿ, ಮುಂಬೈ, ಚೆನ್ನೈ, ಹೈದರಾಬಾದ್, ಮೊದಲಾದ ನಗರಗಳ ಪ್ರೆಸ್‍ಕ್ಲಬ್‍ಗಳಲ್ಲಿ ಸಭೆ ಸೇರಿ ಪತ್ರಕರ್ತರು ಈ ಕೃತ್ಯವನ್ನು ಖಂಡಿಸಿದರು.  ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ಸದಸ್ಯರು ದೆಹಲಿಯ ಜಂತರ್‍ಮಂತರ್‍ನಲ್ಲಿ ಜಮಾಯಿಸಿ ದುಷ್ಕರ್ಮಿಗಳ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿ, ಸೂಕ್ತ ತನಿಖೆಗೆ ಆಗ್ರಹಿಸಿದರು.  ಸೋಷಿಯಲ್ ಡೆಮೊಕ್ರಾಟಿಕ್ ಪಾರ್ಟಿ ಆಫ್ ಇಂಡಿಯಾ, ಎಸ್‍ಎಫ್‍ಐ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳು ಸಹ ಪ್ರತಿಭಟನೆಯಲ್ಲಿ ಪಾಲ್ಗೊಂಡವು.

ಜಿಗ್ನೇಶ್ ಖಂಡನೆ :

ಹಿರಿಯ ಪತ್ರಕರ್ತೆ ಮತ್ತು ಚಿಂತಕಿ ಗೌರಿ ಲಂಕೇಶ್ ಹತ್ಯೆಗೆ ದಲಿತಪರ ಹೋರಾಟಗಾರ ಜಿಗ್ನೇಶ್ ಮೇವಾನಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ. ಇದು ಪ್ರಜಾಪ್ರಭುತ್ವ ಮತ್ತು ವೈಚಾರಿಕತೆಯ ಕಗ್ಗೊಲೆ ಎಂದು ಅವರು ಅಹಮದಾಬಾದ್‍ನಲ್ಲಿ ಖಂಡಿಸಿದ್ದಾರೆ. ಗೌರಿ ಲಂಕೇಶ್ ಅವರು ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಸುದ್ದಿ ತಿಳಿದು ನನಗೆ ಆಘಾತವಾಯಿತು. ಕೆಲವು ದಿನಗಳ ಹಿಂದಷ್ಟೇ ನಾನು ಅವರನ್ನು ಭೇಟಿಯಾಗಿದ್ದೆ. ನಾನು, ಕನ್ನಯ್ಯ, ಉಮರ್ ಮತ್ತು ಶೇಹ್ಲಾ ಅವರಿಗೆ ಮಕ್ಕಳಿದ್ದಂತೆ. ಜಿಗ್ನೇಶ್ ನನಗೆ ಒಳ್ಳೆಯ ಮಗ. ಕನ್ನಯ್ಯ ತುಂಟ ಹುಡುಗ ಎಂದು ಅವರು ಹೇಳುತ್ತಿದ್ದರು ಎಂದು ಜಿಗ್ನೇಶ್ ನೆನಪಿಸಿಕೊಂಡಿದ್ದಾರೆ.
ನಿರ್ಭೀತ ಬರವಣಿಗೆಗೆ ಅವರು ಹೆಸರುವಾಸಿಯಾಗಿದ್ದರು. ಕೋಮುವಾದಿಗಳ ವಿರುದ್ಧ ಅವರು ನಡೆಸಿದ ಹೋರಾಟಕ್ಕೆ ಅವರು ಬೆಲೆ ತೆತ್ತಂತಾಗಿದೆ ಎಂದು ಅವರು ಶೋಕ ಸಂದೇಶದಲ್ಲಿ ನೊಂದು ನುಡಿದಿದ್ಧಾರೆ.

Facebook Comments

Sri Raghav

Admin