ಗೌರಿ ಲಂಕೇಶ್ ಹತ್ಯೆ ಪ್ರಕರಣ ಎಸ್‍ಐಟಿಗೆ

ಈ ಸುದ್ದಿಯನ್ನು ಶೇರ್ ಮಾಡಿ

CM-Siddaramaiah-Meeting--01

ಬೆಂಗಳೂರು,ಆ.6-ನಿನ್ನೆ ರಾತ್ರಿ ಭಯಾನಕವಾಗಿ ದುಷ್ಕರ್ಮಿಗಳ ಗುಂಡಿಗೆ ಬಲಿಯಾದ ಪತ್ರಕರ್ತೆ, ಚಿಂತಕಿ ಹಾಗೂ ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ವಿಶೇಷ ತನಿಖಾ ತಂಡ(ಎಸ್‍ಐಟಿ)ಕ್ಕೆ ವಹಿಸಿದೆ.  ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ  ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ನಂತರ ಸುದ್ದಿಗೋಷ್ಠಿಯಲ್ಲಿ ಪ್ರಕಟಿಸಿದರು. ಗೌರಿ ಲಂಕೇಶ್ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಆರೋಪಿಗಳ ಪತ್ತೆಗಾಗಿ ಐಜಿಪಿ ನೇತೃತ್ವದಲ್ಲಿ ಎಸ್‍ಐಟಿ ತಂಡ ರಚನೆ ಮಾಡಲಾಗಿದೆ. ಆದಷ್ಟು ಶೀಘ್ರದಲ್ಲಿ ಆರೋಪಿಗಳನ್ನು ಬಂಧಿಸಿ ಕಾನೂನಿನ ಪ್ರಕಾರ ಶಿಕ್ಷೆ ನೀಡಬೇಕೆಂದು ಸೂಚಿಸಿರುವುದಾಗಿ ಹೇಳಿದರು.

ತನಿಖಾ ನೇತೃತ್ವವನ್ನು ಯಾವ ಐಜಿಪಿ ಅವರಿಗೆ ನೀಡಬೇಕು ಎಂಬುದನ್ನು ಪೊಲೀಸ್ ಮಹಾನಿರ್ದೇಶಕರೇ ತೀರ್ಮಾನಿಸಲಿದ್ದಾರೆ. ಅವರ ಕೆಳಗೆ ಎಸ್ಪಿ , ತನಿಖಾಧಿಕಾರಿಗಳು ಸೇರಿದಂತೆ ಮತ್ತಿತರ ಅಧಿಕಾರಿಗಳು ಇರುತ್ತಾರೆ. ನಿಷ್ಪಕ್ಷಪಾತ ತನಿಖೆ ನಡೆಸಿ ವರದಿ ನೀಡಬೇಕೆಂದು ಸೂಚಿಸಿದರು.

ವಿರೋಧವಿಲ್ಲ:

ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಬಿಐಗೆ ವಹಿಸಲು ವಿರೋಧ ವ್ಯಕ್ತಪಡಿಸಿಲ್ಲ. ಅವರ ಕುಟುಂಬದ ಸದಸ್ಯರು ಸಿಬಿಐಗೆ ಒತ್ತಾಯಿಸುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಎಸ್‍ಐಟಿ ವರದಿ ಬಂದ ಬಳಿಕ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.  ಈ ಹಿಂದೆ ಮಹಾರಾಷ್ಟ್ರದಲ್ಲಿ ವಿಚಾರವಾದಿಗಳಾದ ನರೇಂದ್ರ ದಾಭೋಲ್ಕರ್, ಗೋವಿಂದ್ ಪನ್ಸಾರೆ ಹತ್ಯೆ ಪ್ರಕರಣವನ್ನು ಅಲ್ಲಿನ ಸರ್ಕಾರ ಸಿಬಿಐಗೆ ವಹಿಸಿತ್ತು. ಆದರೆ ಈಗಲೂ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗಳು ಪತ್ತೆಯಾಗಿಲ್ಲ. ನಮ್ಮ ಪೊಲೀಸರೇ ಈ ಪ್ರಕರಣವನ್ನು ಬೇಧಿಸಲಿದ್ದಾರೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ವ್ಯಕ್ತಪಡಿಸಿದರು.
ಸಾಹಿತಿ ಎಂ.ಎಂ.ಕಲಬುರಗಿ ಹತ್ಯೆಗೈದಂತೆ ಗೌರಿ ಅವರನ್ನು ಕೂಡ ದುಷ್ಕರ್ಮಿಗಳು ಗುಂಡು ಹಾರಿಸಿ ಕಗ್ಗೊಲೆ ಮಾಡಿದ್ದಾರೆ. ಎರಡೂ ಪ್ರಕರಣಗಳಿಗೂ ಸಾಮ್ಯತೆ ಕಂಡುಬರುತ್ತಿರುವುದರಿಂದ ಹಂತಕರು ಒಂದೇ ತಂಡದವರಾಗಿರಬಹುದು ಎಂಬ ಶಂಕೆಯನ್ನು ವ್ಯಕ್ತಪಡಿಸಿದರು.

ಎಂ.ಎಂ.ಕಲಬುರಗಿ ಹತ್ಯೆಯಾಗಿ ಎರಡು ವರ್ಷವಾದರೂ ಆರೋಪಿಗಳನ್ನು ಬಂಧಿಸದಿರುವುದಕ್ಕೆ ನನಗೂ ವಿಷಾದವಿದೆ. ಗೌರಿ ಪ್ರಕರಣದಲ್ಲಿ ವಿಳಂಬ ಮಾಡದೆ ಆರೋಪಿಗಳನ್ನು ಪೊಲೀಸರು ಶೀಘ್ರದಲ್ಲಿ ಬಂಧಿಸಲಿದ್ದಾರೆ. ಈ ಬಗ್ಗೆ ಯಾರಿಗೂ ಯಾವುದೇ ರೀತಿಯ ಅನುಮಾನ ಬೇಡ ಎಂದು ಹೇಳಿದರು.   ಈಗಾಗಲೇ ಗೌರಿ ಲಂಕೇಶ್ ಹತ್ಯೆಗೈದ ದುಷ್ಕರ್ಮಿಗಳ ಪತ್ತೆಗಾಗಿ ಮೂವರು ತಂಡಗಳನ್ನು ರಚನೆ ಮಾಡಲಾಗಿದೆ. ಅವರ ಮನೆ ಬಳಿ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಕೆಲವು ಶಂಕಿತ ವ್ಯಕ್ತಿಗಳ ವಿಚಾರಣೆ ನಡೆಸಲಾಗಿದೆ ಎಂದರು.  ಗೌರಿ ಲಂಕೇಶ್ ಮನೆ ಬಳಿ ಒಟ್ಟು ನಾಲ್ಕು ಸಿಸಿ ಕ್ಯಾಮೆರಗಾಗಳಿವೆ. ಕಾರು ನಿಲ್ಲಿಸುವ ಸ್ಥಳ, ಕಾಪೌಂಡ್, ಮನೆಯ ಹಿಂಭಾಗದಲ್ಲಿ ಅಳವಡಿಸಲಾಗಿದೆ. ಹೆಲ್ಮೆಟ್ ಧರಿಸಿದ್ದ ಹಂತಕನೊಬ್ಬ ಸಮೀಪದಿಂದಲೇ ಗುಂಡು ಹಾರಿಸಿದ್ದಾನೆ. ಸ್ಥಳದಲ್ಲಿಯೇ ಅವರು ಮೃತಪಟ್ಟಿದ್ದಾರೆ ಎಂದು ಹೇಳಿದರು.

ಹಸ್ತಕ್ಷೇಪವಿಲ್ಲ:

ಈ ಪ್ರಕರಣದಲ್ಲಿ ರಾಜ್ಯ ಸರ್ಕಾರ ಯಾವುದೇ ರೀತಿಯ ಹಸ್ತಕ್ಷೇಪ ಮಾಡುವುದಿಲ್ಲ. ಪೊಲೀಸರು ಸ್ವತಂತ್ರವಾಗಿ ತನಿಖೆ ನಡೆಸಲು ಎಲ್ಲ ರೀತಿಯ ಸಹಕಾರ ನೀಡಲಾಗುವುದು. ಗೌರಿ ಲಂಕೇಶ್ ನನಗೆ ಅತ್ಯಂತ ಆತ್ಮೀಯರಾಗಿದ್ದರು. ಅವರ ತಂದೆ ಕಾಲದಿಂದಲೂ ಚಿರಪರಿಚಿತರು. ನಿನ್ನೆ ಅವರನ್ನು ಹತ್ಯೆಗೈದ ಸುದ್ದಿ ಕೇಳಿ ನಾನು ಕೂಡ ಒಂದು ಕ್ಷಣ ದಿಗ್ಭ್ರಮೆಗೆ ಒಳಗಾದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದರು.  ಒಂದು ವಾರದ ಹಿಂದೆಯಷ್ಟೇ ಗೌರಿ ಕೆಲಸದ ನಿಮಿತ್ತ ಭೇಟಿಯಾಗಿದ್ದರು. ಅವರಿಗೆ ಮೂಲಭೂತವಾದಿಗಳಿಂದ ಪ್ರಾಣ ಬೆದರಿಕೆ ಇರುವ ಬಗ್ಗೆ ನನ್ನ ಬಳಿ ಹೇಳಿರಲಿಲ್ಲ. ಹಾಗೊಂದು ವೇಳೆ ಹೇಳಿದ್ದರೆ ಅವರಿಗೆ ಸೂಕ್ತ ಭದ್ರತೆ ನೀಡಲಾಗುತ್ತಿತ್ತು ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ , ಎಚ್.ಆಂಜನೇಯ, ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತ, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್ ಕುಂಟಿಆ, ನಗರ ಪೊಲೀಸ್ ಆಯುಕ್ತ ಟಿ.ಸುನಿಲ್‍ಕುಮಾರ್, ಸಿಐಡಿ ಘಟಕದ ಡಿಜಿಪಿ ಕಿಶೋರ್ ಚಂದ್ರ, ಗೃಹಸಚಿವರ ಸಲಹೆಗಾರ ಕೆಂಪಯ್ಯ ಸೇರಿದಂತೆ ಮತ್ತಿತರ ಅಧಿಕಾರಿಗಳು ಭಾಗವಹಿಸಿದ್ದರು.

Facebook Comments

Sri Raghav

Admin