ಗೌರಿ ಲಂಕೇಶ್ ಹತ್ಯೆ ಹಿಂದೆ ನಕ್ಸಲರ ಕೈವಾಡವಿರಬಹುದೇ…?

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh

ಬೆಂಗಳೂರು, ಸೆ.6-ಗೌರಿ ಲಂಕೇಶ್ ಹತ್ಯಾ ಪ್ರಕರಣವನ್ನು ನಾನಾ ಕೋನಗಳಿಂದ ತನಿಖೆ ನಡೆಸುತ್ತಿರುವ ನಗರ ಪೊಲೀಸರಿಗೆ ಹತ್ಯೆ ಹಿಂದೆ ನಕ್ಸಲರ ಕೈವಾಡ ಇರಬಹುದೆಂಬ ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ತನಿಖಾ ತಂಡವೊಂದು ಈಗಾಗಲೇ ತನಿಖೆ ಕೈಗೊಂಡಿದೆ. ಕೆಂಪು ಉಗ್ರರ ಬಗ್ಗೆ ಅನುಕಂಪ ಹೊಂದಿದ್ದ ಗೌರಿ ಲಂಕೇಶ್ ಅವರು ತಮ್ಮ ಹಕ್ಕಿನ ಹೋರಾಟಕ್ಕಾಗಿ ಬಂದೂಕಿಗೆ ಮೊರೆ ಹೋಗಿದ್ದ ಹಲವಾರು ಯುವಕರನ್ನು ನಕ್ಸಲ್ ಚಟುವಟಿಕೆ ತೊರೆದು ಮುಖ್ಯವಾಹಿನಿಗೆ ಕರೆತರುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಗೌರಿ ಅವರ ಈ ವರ್ತನೆ ಕೆಲವು ಕಟ್ಟಾ ನಕ್ಸಲರ ಕಣ್ಣು ಕೆಂಪಗಾಗಿಸಿತ್ತು. ಹೀಗಾಗಿ ಗೌರಿ ಅವರನ್ನು ಕೊಲೆ ಮಾಡಲು ಸಂಚು ರೂಪಿಸಿರುವ ಸಾಧ್ಯತೆ ಇದೆ ಎಂಬ ಶಂಕೆ ವ್ಯಕ್ತವಾಗಿದೆ.

ವಿದ್ರೋಹಿಗಳ ಕೈವಾಡ:

ಹಂತಕನ ಕೃತ್ಯದಿಂದ ಆತ ವೃತ್ತಿಪರ ಕೊಲೆಗಾರ ಎನ್ನುವುದಂತೂ ಪೊಲೀಸರಿಗೆ ಸ್ಪಷ್ಟವಾಗಿದೆ. ಈ ರೀತಿಯ ಭಯಂಕರ ಹತ್ಯೆಗಳನ್ನು ಭಯೋತ್ಪಾದಕರು, ಕಟ್ಟಾ ಮೂಲಭೂತವಾದಿಗಳು ಹಾಗೂ ಮಾವೋವಾದಿಗಳು ಮಾತ್ರ ನಡೆಸುವುದು. ಹೀಗಾಗಿ ಗೌರಿ ಹತ್ಯೆ ಹಿಂದೆ ಈ ಮೂರು ಸಂಘಟನೆಗಳ ಕೈವಾಡವಿರುವ ಬಗ್ಗೆ ಗುಮಾನಿ ವ್ಯಕ್ತವಾಗಿದೆ. ರಾಜ್ಯದಲ್ಲಿ ಭಯೋತ್ಪಾದಕರ ಹಾವಳಿ ಇಲ್ಲ. ಹೀಗಾಗಿ ವಿಚಾರವಾದಿ ಗೌರಿಲಂಕೇಶ್ ಅವರು ಕಡುವಿರೋಧ ಕಟ್ಟಿಕೊಂಡಿದ್ದ ಮೂಲಭೂತವಾದಿಗಳು, ಇಲ್ಲವೇ ಕೆಂಪುಉಗ್ರರು ಈ ಹತ್ಯೆ ನಡೆಸಿರುವ ಸಾಧ್ಯತೆ ಇದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿರುವ ತನಿಖಾ ತಂಡಕ್ಕೆ ಹಂತಕನ ಸುಳಿವು ಪತ್ತೆಯಾಗಿದ್ದು, ಶೀಘ್ರದಲ್ಲೇ ಗೌರಿ ಹತ್ಯಾವ್ಯೂಹ ಭೇದಿಸುವ ವಿಶ್ವಾಸ ವ್ಯಕ್ತಪಡಿಸಿವೆ ಪೊಲೀಸ್ ಮೂಲಗಳು.

Facebook Comments

Sri Raghav

Admin