ಚಾಮರಾಜಪೇಟೆ ರುದ್ರಭೂಮಿಯಲ್ಲಿ ಸರ್ಕಾರಿ ಗೌರವದೊಂದಿಗೆ ಗೌರಿ ಅಂತ್ಯಕ್ರಿಯೆ

ಈ ಸುದ್ದಿಯನ್ನು ಶೇರ್ ಮಾಡಿ

Gouri-Lankesh--002

ಬೆಂಗಳೂರು, ಸೆ.6- ನಿನ್ನೆ ಹತ್ಯೆಯಾದ ಪತ್ರಕರ್ತೆ ಗೌರಿ ಲಂಕೇಶ್ ಅವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಗರದ ಚಾಮರಾಜಪೇಟೆಯಲ್ಲಿರುವ ರುದ್ರಭೂಮಿಯಲ್ಲಿ ಇಂದು ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ನೆರವೇರಿತು. ತಾಯಿ, ಸಹೋದರ, ಸಹೋದರಿ ಸೇರಿದಂತೆ ಕುಟುಂಬವರ್ಗದವರ ರೋದನ ಹಾಗೂ ಅಭಿಮಾನಿಗಳ ಅಶ್ರುತರ್ಪಣಗಳ ನಡುವೆ ಗೌರಿ ಲಂಕೇಶ್ ಅವರ ಪಾರ್ಥಿವ ಶರೀರ ಪಂಚಭೂತಗಳಲ್ಲಿ ಲೀನವಾಯಿತು. ಇದಕ್ಕೂ ಮುನ್ನ ಬೆಳಗ್ಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಪಾರ್ಥಿವ ಶರೀರದ ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಪರೀಕ್ಷೆ ಸಂದರ್ಭದಲ್ಲಿ ಶರೀರವನ್ನು ಹೊಕ್ಕಿದ್ದ ಗುಂಡು ಪತ್ತೆಯಾಗದ ಹಿನ್ನೆಲೆಯಲ್ಲಿ ಎಕ್ಸರೇ ಮಾಡಿ ಗುಂಡನ್ನು ಪತ್ತೆಹಚ್ಚಿ ಹೊರತೆಗೆಯಲಾಯಿತು. ಹೀಗಾಗಿ ಮರಣೋತ್ತರ ಪರೀಕ್ಷೆಗೆ ಸಾಕಷ್ಟು ಕಾಲಾವಕಾಶ ಹಿಡಿಯಿತು.

ಈ ನಡುವೆ ವಿಕ್ಟೋರಿಯಾ ಆಸ್ಪತ್ರೆ ಶವಾಗಾರದ ಮುಂದೆ ವಿವಿಧ ಪತ್ರಕರ್ತರ ಸಂಘಟನೆಗಳ ಪ್ರತಿನಿಧಿಗಳು ಗೌರಿ ಲಂಕೇಶ್ ಹತ್ಯೆ ಖಂಡಿಸಿ ಮೌನ ಪ್ರತಿಭಟನೆ ನಡೆಸಿದರು. ಇದಾದ ಬಳಿಕ ಸಾರ್ವಜನಿಕ ದರ್ಶನಕ್ಕಾಗಿ ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಕೆಲಕಾಲ ಇರಿಸಲಾಗಿತ್ತು. ಕಲಾವಿದರು, ಪತ್ರಕರ್ತರು, ವಿಚಾರವಾದಿಗಳು ಸೇರಿದಂತೆ ಹಲವು ಗಣ್ಯರು ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಮರಣೋತ್ತರ ಪರೀಕ್ಷೆ ಹಾಗೂ ಸಾರ್ವಜನಿಕ ದರ್ಶನಕ್ಕೆ ಇರಿಸಲಾಗಿದ್ದ ಸಂಸ ಬಯಲು ರಂಗಮಂದಿರದಲ್ಲೂ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಅಂತ್ಯ ಕ್ರಿಯೆ ವೇಳೆ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ, ಸಚಿವ ರಾಮಲಿಂಗಾರೆಡ್ಡಿ, ರಮೇಶ್ ಕುಮಾರ್ , ಉಮಾಶ್ರೀ ಹಾಗೂ ಜಮೀರ್ ಅಹಮದ್ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು.

Facebook Comments

Sri Raghav

Admin