ಚಿಂತಕರ ಹತ್ಯೆಯಿಂದ ಜೀವನ್ಮುಖಿ ಆಲೋಚನೆ ಅಂತ್ಯಗೊಳ್ಳಲ್ಲ : ಪ್ರಗತಿಪರ ಸವಾಲ್

ಈ ಸುದ್ದಿಯನ್ನು ಶೇರ್ ಮಾಡಿ

Toun-Hall--01

ಬೆಂಗಳೂರು, ಸೆ.6- ಪ್ರಗತಿಪರ ಚಿಂತಕರನ್ನು ಹತ್ಯೆ ಮಾಡುವ ಮೂಲಕ ಯಾವುದೇ ವಿಚಾರ ಮತ್ತು ಜೀವನ್ಮುಖಿ ಆಲೋಚನೆಗಳನ್ನು ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ನಾಡಿನ ಪ್ರಗತಿಪರ ಚಿಂತಕರು ಸವಾಲೊಡ್ಡಿದ್ದಾರೆ. ಹಿರಿಯ ಪತ್ರಕರ್ತೆ ಗೌರಿಲಂಕೇಶ್ ಹತ್ಯೆ ಖಂಡಿಸಿ ಪುರಭವನದ ಎದುರು ನಡೆದ ಪ್ರತಿಭಟನೆಯಲ್ಲಿ ನಾಡಿನಾದ್ಯಂತ ನೂರಾರು ಸಾಹಿತಿಗಳು, ಪ್ರಗತಿಪರ ಚಿಂತಕರು ಭಾಗವಹಿಸಿದ್ದರು. ಸಭೆಯಲ್ಲಿ ಮಾತನಾಡಿದ ಬಹುತೇಕ ಮುಖಂಡರು ಗೌರಿ ಹತ್ಯೆ ಮಾಡಿದಾಕ್ಷಣ ಅವರು ಪ್ರತಿಪಾದಿಸಿದ ವಿಚಾರಧಾರೆಗಳನ್ನು ಮುಗಿಸಿದ್ದೇವೆ ಎಂದು ಯಾರಾದರೂ ಭಾವಿಸಿದ್ದರೆ ಅದು ಮೂರ್ಖತನದ ಪರಮಾವಧಿಯಾಗಿದೆ. ನಾಡಿನ ಪ್ರಗತಿಪರ ಚಿಂತನೆಗಳಿಗೆ ಇದು ಸವಾಲಿನ ಸಂದರ್ಭ. ಇನ್ನಷ್ಟು ಗಟ್ಟಿಯಾಗಿ ನಿಂತು ದಮನಕಾರಿ ಶಕ್ತಿಗಳನ್ನು ಎದುರಿಸಬೇಕಿದೆ ಎಂದು ಪಣತೊಟ್ಟರು.

ದಲಿತ ಸಂಘಟನೆಗಳು, ರೈತ ಸಂಘಟನೆಗಳು ಪ್ರಗತಿಪರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಆಮ್‍ಆದ್ಮಿಪಕ್ಷ ಸೇರಿದಂತೆ ಹಲವು ಸಂಘಟನೆಗಳು ಪುರಭವನದ ಬಳಿ ಸಮಾವೇಶಗೊಂಡು ಗೌರಿ ಲಂಕೇಶ್ ಹತ್ಯೆಗೆ ಆಕ್ರೋಶ ವ್ಯಕ್ತಪಡಿಸಿದವು. ಕಲಬುರ್ಗಿ ಹತ್ಯೆಯ ಆರೋಪಿಗಳನ್ನು ಪತ್ತೆಹಚ್ಚಲು ವಿಫಲವಾದ ಹಿನ್ನೆಲೆಯಲ್ಲಿ ದಮನಕಾರಿ ಶಕ್ತಿಗಳಿಗೆ ಇನ್ನಷ್ಟು ಧೈರ್ಯ ಬಂದು ಈಗ ಗೌರಿ ಲಂಕೇಶ್ ಅವರ ಹತ್ಯೆಯಾಗಿದೆ. ಈಗಲೂ ಸರ್ಕಾರ ಎಚ್ಚೆತ್ತುಕೊಳ್ಳದೆ ಇದ್ದರೆ ಮುಂದಿನ ದಿನಗಳು ಇನ್ನಷ್ಟು ದುಸ್ತರವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪ ಮಾತನಾಡಿ, ಗೌರಿ ಲಂಕೇಶ್ ಹತ್ಯೆಯ ಮೂಲಕ ವೈಚಾರಿಕ ಹಾಗೂ ಜೀವನ್ಮುಖಿ ಸಂದೇಶಗಳನ್ನು ಅಂತ್ಯಗೊಳಿಸಲು ಆಗುವುದಿಲ್ಲ. ಹತ್ಯೆಯಿಂದಾಗಿ ನಮಗೆ ಆತಂಕವೂ ಉಂಟಾಗಿದೆ. ಅದೇ ಕಾಲಕ್ಕೆ ಸಿಟ್ಟೂ ಬಂದಿದೆ. ಇವೆರಡೂ ಪ್ರತಿಭಟನೆಯ ರೂಪವಾಗಿ ಹೊರಹೊಮ್ಮಿದೆ ಎಂದರು. ದೇಶದಲ್ಲಿ ನಾಲಿಗೆ ಕತ್ತರಿಸುವುದು, ಕತ್ತು ಸೀಳುವುದು, ಹತ್ಯೆ ಮಾಡುವ ಸಂಸ್ಕøತಿಗಳು ಹೆಚ್ಚಾಗುತ್ತಿವೆ. ವೈಚಾರಿಕ ಹಿನ್ನೆಲೆಯುಳ್ಳವರು ತಮ್ಮ ಭಿನ್ನಾಭಿಪ್ರಾಯ ಮರೆತು ಒಗ್ಗೂಡುವ ಅಗತ್ಯವಿದೆ ಎಂದು ಹೇಳಿದರು. ನಮ್ಮ ಹೇರಿಕೆಗಳನ್ನು ಅಪಾರ್ಥ ಮಾಡಿ ಜನರಿಗೆ ತಪ್ಪಾಗಿ ತಲುಪಿಸುವ ಪ್ರಯತ್ನಗಳು ನಡೆಯುತ್ತಿವೆ. ಇದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಸಾಹಿತಿ ಚಂದ್ರಶೇಖರ್ ಪಾಟೀಲ್ ಮಾತನಾಡಿ, ಗೌರಿ ಲಂಕೇಶ್ ಅವರ ಹತ್ಯೆಗೆ ವೈಚಾರಿಕ ಸಂಘರ್ಷಗಳೇ ಕಾರಣ. ವೈಯಕ್ತಿಕ ಕಾರಣಕ್ಕೆ ಹತ್ಯೆಯಾಗಿದೆ ಎಂದು ಬಿಂಬಿಸುವುದು ಸರಿಯಲ್ಲ. ಹತ್ಯೆ ಮಾಡಿದವರು, ಮಾಡಿಸಿದವರು ಭಂಡರು, ಶಂಡರು ಎಂದು ಕಿಡಿಕಾರಿದರು. ದೇಶಾದ್ಯಂತ ಪ್ರಗತಿಪರರು ಒಗ್ಗೂಡುವ ಅಗತ್ಯವಿದೆ. ಜೀವನ ಮೌಲ್ಯಗಳನ್ನು ಪ್ರತಿಪಾದಿಸುವ ಮೂಲಕ ದಮನಕಾರಿ ನೀತಿಗಳನ್ನು ಹತ್ತಿಕ್ಕಬೇಕಿದೆ. ಇಡೀ ದೇಶದಲ್ಲೇ ವಿಷಮ ಪರಿಸ್ಥಿತಿ ಇರುವಾಗ ನಾವು ಎಚ್ಚೆತ್ತುಕೊಳ್ಳದಿದ್ದರೆ ಕಷ್ಟದ ವಾತಾವರಣ ನಿರ್ಮಾಣವಾಗಲಿದೆ ಎಂದು ಹೇಳಿದರು.

ಮತ್ತೊಬ್ಬ ಸಾಹಿತಿ ಮರುಳಸಿದ್ದಪ್ಪ ಮಾತನಾಡಿ, ಗೌರಿಲಂಕೇಶ್ ಅವರ ಮೇಲೆ ಮನುವಾದಿಗಳಿಗೆ ಆತಂಕ ಇತ್ತು. ಅದನ್ನು ಹತ್ಯೆಯ ಮೂಲಕ ತೀರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ನಾವೆಲ್ಲ ಒಂದಾಗಿ ಮುಂದಡಿ ಇಡುವ ಪ್ರತಿಜ್ಞೆ ಮಾಡಬೇಕಿದೆ ಎಂದು ಕರೆ ನೀಡಿದರು. ಸಾಮಾಜಿಕ ಕಾರ್ಯಕರ್ತ ಎಸ್.ಆರ್.ಹಿರೇಮಠ್ ಮಾತನಾಡಿ, ಸರ್ಕಾರಗಳು ಸಂವಿಧಾನದ ಚೌಕಟ್ಟಿನಲ್ಲಿ ನಡೆದುಕೊಳ್ಳುತ್ತಿಲ್ಲ. ಪನ್ಸಾರೆ, ದಾಬಲ್ಕರ್, ಕಲ್ಬುರ್ಗಿ ಹತ್ಯೆಯಾಗಿದೆ. ಈ ಹಿಂದಿನ ಪ್ರಕರಣಗಳ ತನಿಖೆಯಲ್ಲಿ ಏನಾದರೂ ಪ್ರಗತಿಯಾಗಿದ್ದರೆ ಅದು ನ್ಯಾಯಾಲಯದ ಸೂಚನೆಯಿಂದ ಮಾತ್ರ. ಸರ್ಕಾರಗಳು ಯಾವುದೇ ನಂಬಿಕೆ ಉಳಿಸಿಕೊಳ್ಳುತ್ತಿಲ್ಲ. ಗೌರಿ ಲಂಕೇಶ್ ಹತ್ಯೆಯಲ್ಲೂ ನಾವು ಪ್ರತಿಯೊಂದು ಮಾಹಿತಿ ಕಲೆ ಹಾಕಿ ನ್ಯಾಯಾಂಗದ ಮೂಲಕವೇ ನ್ಯಾಯ ಪಡೆಯಬೇಕಾಗಬಹುದು ಎಂದು ತಿಳಿಸಿದರು.

Facebook Comments

Sri Raghav

Admin