ಕಗ್ಗಂಟಾದ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣ..?

ಈ ಸುದ್ದಿಯನ್ನು ಶೇರ್ ಮಾಡಿ

Gauri-Lankesh-Shot-Dead

ಬೆಂಗಳೂರು, ಸೆ.7- ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ತನಿಖೆ ಪೊಲೀಸರಿಗೆ ತಲೆ ನೋವಾಗುವ ಸಾಧ್ಯತೆ ಇದೆ. ಸಿಸಿಟಿವಿ ಹೊರತುಪಡಿಸಿ ಬೇರೆ ಯಾವುದೇ ಸುಳಿವು ಸಿಗದ ಹಿನ್ನೆಲೆಯಲ್ಲಿ ಪೊಲೀಸರು ಸಂಕಷ್ಟಕ್ಕೀಡಾಗಿದ್ದಾರೆ. ಸಿಕ್ಕ ಸಿಸಿಟಿವಿ ದೃಶ್ಯಾವಳಿಯಲ್ಲೂ ಆರೋಪಿಯ ಚಹರೆ ಸರಿಯಾಗಿ ಕಾಣಿಸುತ್ತಿಲ್ಲ. ಪೊಲೀಸರೀಗ ಗೌರಿ ಅವರ ಪೊೀನ್ ಕರೆಗಳ ಸಿಡಿಆರ್ ಚೆಕ್ ಮಾಡುತ್ತಿದ್ದು, ಕರೆಗಳ ವಿನಿಮಯವನ್ನು ಬೆನ್ನತ್ತಿದ್ದಾರೆ.  ಇನ್ನು ತನಿಖೆಗೆ ಸಂಬಂಧಿಸಿದಂತೆ ಇಂದು ವಿಶೇಷ ತನಿಖಾ ತಂಡ ಸಭೆ ನಡೆಸಲಿದೆ. ಅಲ್ಲದೇ ಕೊಲೆಯ ಬಗ್ಗೆ ಇದುವರೆಗೆ ಸಂಗ್ರಹವಾಗಿರುವ ಸಾಕ್ಷ್ಯಾಧಾರಗಳ ಪರಿಶೀಲನೆ ನಡೆಯಲಿದೆ. ಬಳಿಕ ಮುಂದಿನ ತನಿಖೆಯ ಹಾದಿಯ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ.

ಇನ್ನು ಗೌರಿ ಲಂಕೇಶ್ ಹತ್ಯೆಯ ಬಗ್ಗೆ ತಂಗಿ ಕವಿತಾ ಲಂಕೇಶ್ ರಾಜರಾಜೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಐಪಿಸಿ ಸೆ. 302, ಹಾಗೂ ಶಸ್ತ್ರಾಸ್ತ್ರ ಕಾಯ್ದೆಯಡಿ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ.  ಕೃತ್ಯ ನಡೆಸುವ ಮುನ್ನವೇ ಗೌರಿ ನಿವಾಸದ ಬಳಿಯ ವಾಸ್ತವತೆ ಅರಿತಿದ್ದ ದುಷ್ಕರ್ಮಿಗಳು ಯಾರು ಇಲ್ಲದ ವೇಳೆಯನ್ನು ಕಾದು ಹತ್ಯೆ ಗೈದಿದ್ದಾರೆ. ಘಟನೆ ನಡೆದು 35 ಗಂಟೆಗಳೇ ಕಳೆದರೂ ಆರೋಪಿಯ ಖಚಿತ ಸುಳಿವು ಸಿಕ್ಕಿಲ್ಲ. ಮಂಗಳವಾರ ರಾತ್ರಿ 8 ಗಂಟೆ ಸುಮಾರಿಗೆ ಗೌರಿ ಲಂಕೇಶ್ ಅವರನ್ನು ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆಗೈದಿದ್ದರು.

ಪೂರ್ವನಿಯೋಜಿತ ಕೃತ್ಯ:

ಗೌರಿ ಲಂಕೇಶ್ ಹತ್ಯೆ ಒಂದು ಪೂರ್ವನಿಯೋಜಿತ ಕೃತ್ಯ ಎಂಬುದು ಬಯಲಾಗಿದೆ. ಪ್ರಾಥಮಿಕ ತನಿಖೆಯ ಪ್ರಕಾರ ಹಂತಕರು 15 ದಿನಗಳಿಂದ ಗೌರಿ ಲಂಕೇಶ್ ಅವರನ್ನು ಹಿಂಬಾಲಿಸುತ್ತಿದ್ದರು. ಗೌರಿ ಲಂಕೇಶ್ ಹತ್ಯೆಯ ತನಿಖೆ ನಡೆಸುತ್ತಿರುವ ತಂಡದ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದಾರೆ. ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬುದು ಗೌರಿ ಲಂಕೇಶ್ ಅವರಿಗೂ ತಿಳಿದಿತ್ತು. ಆದ್ದರಿಂದ, ಅವರು ಮನೆಗೆ ಸಿಸಿಟಿವಿ ಅಳವಡಿಸಿದ್ದರು. ಮಂಗಳವಾರ ರಾತ್ರಿ ರಾಜರಾಜೇಶ್ವರಿ ನಗರದ ನಿವಾಸದಲ್ಲಿ ಗೌರಿ ಲಂಕೇಶ್ ಹತ್ಯೆ ನಡೆದಿದೆ. ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂದು ಅವರು ತಾಯಿಯ ಬಳಿ ಹೇಳಿಕೊಂಡಿದ್ದರು. ಗಾಂಧಿ ಬಜಾರಿನ ಕಚೇರಿಯಿಂದ ಆರ್.ಆರ್.ನಗರದ ನಿವಾಸದ ತನಕ ದುಷ್ಕರ್ಮಿಗಳು ಅವರನ್ನು ಹಿಂಬಾಲಿಸಿದ್ದಾರೆ ಎಂಬುದು ಸದ್ಯದ ಮಾಹಿತಿ.

ಗೌರಿ ಲಂಕೇಶ್ ಅವರ ನಿವಾಸ, ಅಕ್ಕ-ಪಕ್ಕದ ರಸ್ತೆಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಎಸ್‍ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ. ತಮ್ಮನ್ನು ಅಪರಿಚಿತರು ಹಿಂಬಾಲಿಸುತ್ತಿರುವುದನ್ನು ತಿಳಿದಿದ್ದ ಗೌರಿ ಲಂಕೇಶ್ ಅವರು, ಪೊಲೀಸರಿಗೆ ಮಾತ್ರ ಈ ಕುರಿತು ಮಾಹಿತಿ ನೀಡಿರಲಿಲ್ಲ.
ಗೌರಿ ಲಂಕೇಶ್ ಅವರು ಸೋಮವಾರ ಗೃಹ ಸಚಿವರನ್ನು ಭೇಟಿಯಾಗುವ ಕಾರ್ಯಕ್ರಮವಿತ್ತು. ಆದರೆ, ಅದು ಸಾಧ್ಯವಾಗಿರಲಿಲ್ಲ. ಗೃಹ ಸಚಿವರನ್ನು ಭೇಟಿ ಮಾಡಿದ್ದರೆ ಈ ಬಗ್ಗೆ ಮಾಹಿತಿ ನೀಡುತ್ತಿದ್ದರೆನೋ? ಎಂದು ಪೊಲೀಸರು ಹೇಳಿದ್ದಾರೆ.

ಹತ್ಯೆ ಮಾಡಲು ಮೊದಲೇ ಸಂಚು ರೂಪಿಸಿದ್ದ ತಂಡ ಸುಮಾರು ಒಂದು ತಿಂಗಳಿನಿಂದ ಅವರ ಚಲನ-ವಲನದ ಬಗ್ಗೆ ಮಾಹಿತಿ ಸಂಗ್ರಹಿಸಿರಬಹುದು. ಇಬ್ಬರು ವ್ಯಕ್ತಿಗಳು ಅವರನ್ನು ಹಿಂಬಾಲಿಸಿರಬಹುದು ಎಂದು ತನಿಖೆಯ ವೇಳೆ ತಿಳಿದುಬಂದಿದೆ.

ಕಾಟ್ರೇಜ್‍ಗಳ ಸುಳಿವು:

ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಘಟನಾ ಸ್ಥಳದಲ್ಲಿ ಸಿಕ್ಕಿರುವ ನಾಲ್ಕು ಕಾಟ್ರಿಡ್ಜ್‍ಗಳು ಪ್ರಮುಖ ಸುಳಿವು ನೀಡುವ ಸಾಧ್ಯತೆ ಇದೆ. ಸದ್ಯ, ಎಫ್‍ಎಸ್‍ಎಲ್ ಮೂಲಗಳಿಂದ ಲಭ್ಯವಾಗಿರುವ ಮಾಹಿತಿ ಪ್ರಕಾರ, ಗೌರಿ ಹತ್ಯೆ ನಡೆದ ಸ್ಥಳದಲ್ಲಿ ನಾಲ್ಕು ಕಾಡತೂಸುಗಳು ಸಿಕ್ಕಿವೆ. ಇವುಗಳನ್ನು ಬಳಸುವುದು 7.65 ಎಂಎಂ ಪಿಸ್ತೂಲುಗಳಲ್ಲಿ ಮಾತ್ರ. ಇದೊಂದು ರೀತಿಯಲ್ಲಿ ನಾಡ ಬಂದೂಕು. ಆದರೆ, ಸಿಕ್ಕಿರುವ ಕಾಟ್ರಿಡ್ಜ್‍ಗಳನ್ನು ಇನ್ನಷ್ಟು ಅಧ್ಯಯನಕ್ಕೆ ಒಳಪಡಿಸಬೇಕಿದೆ. ಆ ನಂತರವೇ, ಘಟನೆಯಲ್ಲಿ ಎಷ್ಟು ಪಿಸ್ತೂಲುಗಳು ಬಳಕೆಯಾಗಿವೆ ಎಂಬುದು ತಿಳಿದು ಬರಲಿದೆ. ಮೇಲ್ನೋಟಕ್ಕೆ ಬಳಕೆಯಾಗಿರುವ ಆಯುಧವನ್ನು ನೋಡಿದರೆ, ಕೊಲೆಗಾರರು ತರಬೇತಿ ಪಡೆದವರೇ ಆಗಬೇಕು ಅಂತೇನಿಲ್ಲ ಎನ್ನುತ್ತಾರೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರೊಬ್ಬರು.

ಗೌರಿ ಮೇಲೆ ನಡೆದ ದಾಳಿ ವೇಳೆ ದೇಹಕ್ಕೆ ಹೊಕ್ಕ ಅಷ್ಟೂ ಗುಂಡುಗಳು ಹೊರಬಂದಿವೆ. ಹೀಗಾಗಿ ಕೊಲೆಗಾರರು ಎರಡು ಅಡಿಗಿಂತ ಹೆಚ್ಚು ದೂರದಿಂದ ಫೈರ್ ಮಾಡಿದ್ದಾರೆ ಎಂಬ ಅನುಮಾನಗಳಿವೆ. ಇದರ ಜತೆಗೆ, ಗೌರಿ ದೇಹ ಹಾಗೂ ಧರಿಸಿರುವ ಬಟ್ಟೆಗಳ ಮೇಲೂ ಪರಿಶೀಲನೆ ನಡೆಸಬೇಕಿದೆ. ಸದ್ಯ ಲಭ್ಯವಾಗಿರುವ ಮಾಹಿತಿ ಪ್ರಕಾರ, ಮುಂದಿನ ಒಂದೆರಡು ದಿನಗಳಲ್ಲಿ ಎಫ್‍ಎಸ್‍ಎಲ್ ವರದಿ ಸಲ್ಲಿಕೆಯಾಗಲಿದೆ.

ತಪ್ಪಿಸಿಕೊಳ್ಳಲು ಗೌರಿ ಯತ್ನ :

ಗೌರಿ ಲಂಕೇಶ್ ಮೇಲೆ 3 ಸುತ್ತು ಗುಂಡು ಹಾರಿಸಿದ ಬಳಿಕವೂ ಎದ್ದು ಮನೆಯೊಳಗೆ ತೆರಳಲು ಗೌರಿ ಲಂಕೇಶ್ ಯತ್ನಿಸಿದ್ದಾರೆ. ಆದರೆ, ದೇಹ ಸೀಳಿದ್ದ ಗುಂಡುಗಳಿಂದಾಗಿ ಗೌರಿ ಲಂಕೇಶ್ ಮುಂದೆ ತೆರಳಲು ಆಗದೇ ಕುಸಿದು ಬಿದ್ದಿದ್ದಾರೆ. ಗುಂಡಿನ ಸದ್ದು ಕೇಳಿ ಸ್ಥಳಕ್ಕಾಗಮಿಸಿದ ನೆರೆಹೊರೆಯವರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಗೌರಿಯನ್ನ ಕಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗೌರಿ ಲಂಕೇಶ್ ಮನೆಯಲ್ಲಿ 4 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದ್ದು, ಗೌರಿ ಲಂಕೇಶ್ ಹತ್ಯೆಯ ದೃಶ್ಯಾವಳಿಗಳು ಹೊರಭಾಗದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ. ಕಚೇರಿಯಿಂದ ಮನೆಗೆ ಬಂದ ಗೌರಿ ಲಂಕೇಶ್ ಟೊಯೋಟಾ ಎಟಿಯೋಸ್ ಕಾರಿನಿಂದ ಇಳಿದು ಮನೆ ಪ್ರವೇಶಿಸಲು ಮುಂದಾಗುತ್ತಾರೆ. ಈ ಸಂದರ್ಭ ಆಕೆ ಬಳಿಗೆ ಬಂದ ಹೆಲ್ಮೆಟ್ ಧರಿಸಿದ್ದ ದುಷ್ಕರ್ಮಿ ಪಿಸ್ತೂಲ್‍ನಿಂದ ಗುಂಡುಗಳನ್ನ ಹಾರಿಸುತ್ತಾನೆ. ಮೂರು ಗುಂಡು ಗೌರಿ ಲಂಕೇಶ್ ದೇಹ ಹೊಕ್ಕಿದ್ದರೆ ಒಂದು ಗುಂಡು ಹಣೆಗೆ ಹೊಕ್ಕಿತ್ತು. ಕ್ಯಾಮೆರಾದಲ್ಲಿ ಕಾಣುತ್ತಿರುವ ಹಂತಕ ಮತ್ತಿಬ್ಬರ ಜೊತೆ ಹತ್ಯೆ ಮಾಡಲು ಬಂದಿದ್ದ. ಆದರೆ, ಸಿಸಿಟಿವಿ ದೃಶ್ಯದಲ್ಲಿ ಬೈಕಿನ ನಂಬರ್ ಪ್ಲೇಟ್ ಕಾಣಿಸಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನಕ್ಸಲ್ ಮಾದರಿ ಬಂದೂಕು ಬಳಕೆ:

ಗೌರಿ ಹತ್ಯೆಗೆ ಬಳಸಿರುವ ಪಿಸ್ತೂಲ್ ನಕ್ಸಲರು ಬಳಸುವ ಮಾದರಿಯದ್ದಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ. 7.65 ಎಂಎಂ ಪಿಸ್ತೂಲಿನಿಂದ ಗುಂಡು ಹಾರಿಸಲಾಗಿದೆ ಎಂಬುದು ಸದ್ಯದ ಮಾಹಿತಿ. ಇಂತಹ ಬಂದೂಕನ್ನು ನಕ್ಸಲರು ಬಳಸುವುದು ಹೆಚ್ಚು. ಈ ಆಯಾಮದ ಕುರಿತು ತನಿಖೆ ನಡೆದಿದೆ. ಯಾವುದೇ ಅಂತಿಮ ನಿರ್ಧಾರಕ್ಕೆ ಇನ್ನೂ ಬರಲಾಗಿಲ್ಲ. ಗೌರಿ ಲಂಕೇಶ್ ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು 7.65 ಎಂಎಂ ಪಿಸ್ತೂಲಿನಿಂದ ಗುಂಡು ಹಾರಿದೆ. ದೇಹಕ್ಕೆ ಆಗಿರುವ ಗಾಯವನ್ನು ಪರಿಶೀಲಿಸಿದರೆ ಬೇರೆ ಮಾದರಿ ಆಯುಧ ಬಳಸಿಲ್ಲ ಎಂದು ಪ್ರಾಥಮಿಕ ವರದಿಯಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

Facebook Comments

Sri Raghav

Admin